More

    ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಹಿರೇಮಠ

    ರಟ್ಟಿಹಳ್ಳಿ: ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ಪರಿಷ್ಕರಿಸುವುದಾಗಿ ಸಿಎಂ ಯಡಿಯೂರಪ್ಪ ನೀಡಿದ ಭರವಸೆ ಮೇರೆಗೆ ಉಪವಾಸ ಸತ್ಯಾಗ್ರಹ ಕೈ ಬಿಡಲಾಗಿದೆ ಎಂದು ಹಿರಿಯ ವಕೀಲ ಬಿ.ಡಿ. ಹಿರೇಮಠ ಘೊಷಿಸಿದರು.

    ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರೊಂದಿಗೆ ಮಾತನಾಡಿದ್ದು, ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ನೀವು ಉಪವಾಸ ಕೈ ಬಿಡಿ. ನಿಮಗೆ ಅನುಕೂಲ ಆಗುವ ರೀತಿ ಯೋಜನೆ ರೂಪಿಸುತ್ತೇವೆ. ಇದರ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ದೂರವಾಣಿ ಮೂಲಕ ಮುಖ್ಯಮಂತ್ರಿ ತಿಳಿಸಿದ್ದಾರೆ. ಹೀಗಾಗಿ ಉಪವಾಸ ಸತ್ಯಾಗ್ರಹ ಕೈ ಬಿಡಲಾಗುವುದು. ಆದರೆ, ಹೊರಾಟ ಮುಂದುವರಿಯಲಿದೆ ಎಂದರು.

    ಸದ್ಯ ಉಪವಾಸ ಕೈ ಬಿಟ್ಟು ಚಿಕಿತ್ಸೆ ಪಡೆದುಕೊಳ್ಳುತ್ತೇನೆ ಎಂದು ಗೃಹ ಸಚಿವರಿಗೆ ತಿಳಿಸಿದ ಹಿರೇಮಠ, ಡಿ.30ರೊಳಗೆ ಸರ್ಕಾರ ಸ್ಪಷ್ಟ ಆದೇಶ ನೀಡಬೇಕು. ತಪ್ಪಿದರೆ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇನೆ ಎಂದೂ ಎಚ್ಚರಿಸಿದರು.

    ತುಂಗಭದ್ರಾ ನದಿಯಿಂದ ಶಿಕಾರಿಪುರಕ್ಕೆ ನೀರು ಒಯ್ಯುವ ಉಡುಗಣಿ ತಾಳಗುಂದ ಹೊಸೂರು ಏತ ನೀರಾವರಿ ಯೋಜನೆ ವಿರೋಧಿಸಿ ಪಟ್ಟಣದಲ್ಲಿ ಕಳೆದ 14 ದಿನಗಳಿಂದ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ನಿರಶನದಿಂದಾಗಿ ಹಿರೇಮಠ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಹೀಗಾಗಿ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು, ಫಲಪ್ರದವಾಗಿದೆ.

    ರೈತರಿಗೆ ಅನ್ಯಾಯವಾಗದಂತೆ ತೀರ್ಮಾನ

    ಇದಕ್ಕೂ ಮೊದಲು ಮಾತನಾಡಿದ ಸಚಿವ ಬೊಮ್ಮಾಯಿ, ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ವಿತರಿಸಲು 154 ಕೋಟಿ ರೂ. ಬಿಡುಗಡೆ ವಿಚಾರದಲ್ಲಿ ಮೂರು ರೀತಿಯ ವರ್ಗೀಕರಣವಿದೆ. ಅದನ್ನು ನೀರಾವರಿ ಸಚಿವರು, ಅಧಿಕಾರಿಗಳೊಂದಿಗೆ ರ್ಚಚಿಸಿ ಶೀಘ್ರವೇ ಬಿಡುಗಡೆ ಮಾಡುತ್ತೇವೆ. ಉಡುಗಣಿ-ತಾಳಗುಂದ ನೀರಾವರಿ ಯೋಜನೆಯಲ್ಲಿ ಪೈಪ್​ಲೈನ್ ಅಳವಡಿಕೆ ವಿಚಾರದಲ್ಲಿ 10ಮೀಟರ್ ಜಮೀನು ಸ್ವಾಧೀನದ ಬದಲಾಗಿ ಕೇವಲ ನಾಲ್ಕು ಮೀಟರ್ ಜಾಗದಲ್ಲಿ ಅಳವಡಿಸಲು ತೀರ್ವನಿಸಲಾಗಿದೆ. ಇದರಿಂದ ರೈತರಿಗಿರುವ ಒಂದು ಆತಂಕ ದೂರವಾಗಿದೆ. ಬೇರೆ ರೀತಿಯ ಸಾಧ್ಯತೆ ಪರಿಶೀಲಿಸುವಂತೆ ಹಿರೇಮಠರು ತಿಳಿಸಿದ್ದಾರೆ. ಈ ಬಗ್ಗೆಯೂ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು. ಅದಕ್ಕೂ ಮೊದಲು ಈ ಯೋಜನೆಯಲ್ಲಿ ಭೂಮಿ ಹೋಗದಂತೆ ಪರ್ಯಾಯ ಮಾರ್ಗದ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಕುರಿತು ಎರಡ್ಮೂರು ದಿನಗಳಲ್ಲಿ ಉನ್ನತ ಅಧಿಕಾರಿಗಳೊಂದಿಗೆ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

    ಭೂ ಸ್ವಾಧೀನದ ಬಗ್ಗೆ ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಬೇಕಾಗುತ್ತದೆ. ಯಾವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವೋ ಅದನ್ನು ಮಾಡುತ್ತೇವೆ. ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಹಿರೇಮಠ ಅವರಲ್ಲಿ ಮನವಿ ಮಾಡಿದ್ದೇನೆ. ಅವರೂ ಕಾನೂನನ್ನು ಓದಿಕೊಂಡಿದ್ದಾರೆ. ಸಿಎಂ ಜತೆ ರ್ಚಚಿಸಿ ಸಮಸ್ಯೆ ಬಗೆಹರಿಸೋಣ ಎಂದು ಹೇಳಿದ್ದೇನೆ ಎಂದರು.

    ಜಿಲ್ಲೆಯಲ್ಲಿ ಯುಟಿಪಿ ಯೋಜನೆ ಜಾರಿಗೊಳಿಸುವಂತೆ ಅಂದಾಜು 20 ವರ್ಷಗಳ ಕಾಲ ಹೋರಾಟ ನಡೆದಿದೆ. ಹಲವಾರು ಹೋರಾಟಗಾರರು ಭಾಗವಹಿಸಿದ್ದಾರೆ. ಹಲವಾರು ಸರ್ಕಾರಗಳು ಕೆಲಸ ಮಾಡಿವೆ. ಇದು ಬಹಳ ದೊಡ್ಡ ಸವಾಲಾಗಿತ್ತು. ನಮ್ಮ ಸರ್ಕಾರ 1 ಸಾವಿರ ಕೋಟಿ ರೂ. ಖರ್ಚು ಮಾಡಿ ಯೋಜನೆ ಜಾರಿಗೊಳಿಸಿದೆ ಎಂದರು.

    ಸಂಸದ ಶಿವಕುಮಾರ ಉದಾಸಿ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ, ಹೋರಾಟಗಾರರಾದ ಉಜನೆಪ್ಪ ಕೋಡಿಹಳ್ಳಿ, ವಿನಯ ಪಾಟೀಲ, ವಾಸಣ್ಣ ದ್ಯಾವಕ್ಕಳವರ, ಎಸ್.ಡಿ. ಹಿರೇಮಠ ಇತರರಿದ್ದರು.

    ಪ್ರಾಮಾಣಿಕ ಹೋರಾಟಗಾರ ಬಿ.ಡಿ. ಹಿರೇಮಠ

    ಬಿ.ಡಿ. ಹಿರೇಮಠ ಅವರು ಗಟ್ಟಿ, ಪ್ರಾಮಾಣಿಕ ಹೋರಾಟಗಾರರು. ಅವರು ಅನೇಕ ಹೋರಾಟಗಳಿಗೆ ಯಶಸ್ಸು ತಂದುಕೊಟ್ಟಿದ್ದಾರೆ. ಅವರ ಹೋರಾಟದಲ್ಲಿ ನಾನೂ ಭಾಗಿಯಾಗಿ ಸ್ಪೂರ್ತಿ ಪಡೆದಿದ್ದೇನೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕಾರಿಪುರ ನೀರಾವರಿ ಯೋಜನೆಯ ಸಮಸ್ಯೆಗಳನ್ನು ಬಗೆಹರಿಸಲು ಹೋರಾಟ ಆರಂಭಿಸಿದ್ದಾರೆ. ಹಿರೇಮಠ ಅವರ ಆರೋಗ್ಯ ಕ್ಷೀಣಿಸುತ್ತಿದ್ದು, ತಕ್ಷಣ ಉಪವಾಸ ಬಿಡಿ. ರೈತರ ಸಮಸ್ಯೆ ಬಗೆಹರಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಮನವಿ ಮಾಡಿದ್ದೇನೆ. ಪರ್ಯಾಯ ವ್ಯವಸ್ಥೆಯ ಮೂಲಕ ಪೈಪ್​ಲೈನ್ ಅಳವಡಿಸುವ ಸಾಧ್ಯಾಸಾಧ್ಯತೆ ಪರಿಶೀಲಿಸಿ ಎಂದು ರೈತರು ಹೇಳುತ್ತಿದ್ದಾರೆ. ಈ ಬಗ್ಗೆ ತಾಂತ್ರಿಕವಾಗಿ ನೋಡಬೇಕಾಗುತ್ತದೆ. ಅಲ್ಲದೆ ಡಿ. 21ರೊಳಗೆ ಇಂಜಿನಿಯರ್​ಗಳೊಂದಿಗೆ ರ್ಚಚಿಸಲಾಗುವುದು. ಇದಕ್ಕೆ ಹಿರೇಮಠ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಎಲ್ಲ ಬೆಳವಣಿಗೆಗಳನ್ನು ಸಿಎಂ ಗಮನಕ್ಕೆ ತರುತ್ತೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts