More

    ಗೋಮಾಳದಲ್ಲಿ ನಿವೇಶನ ನೀಡಲು ಪಟ್ಟು

    ಚನ್ನಗಿರಿ: ತಾಲೂಕಿನ ಹಿರೆಕೋಗಲೂರು ಗ್ರಾಮದ ಗೋಮಾಳದಲ್ಲಿ ನಿವೇಶನ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಯರ‌್ರಿಸ್ವಾಮಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು.

    ಸಂಘದ ತಾಲೂಕು ಅಧ್ಯಕ್ಷ ಎಲೇದಳ್ಳಿ ರವಿಕುಮಾರ್, ಗ್ರಾಮದ ಸರ್ವೇ ನಂ.46ರಲ್ಲಿ 7 ಎಕರೆ 30 ಗುಂಟೆ ಜಮೀನು ಗ್ರಾಮದ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಮೀಸಲಿಟ್ಟಿದೆ. ಆದರೆ, ಗ್ರಾಪಂ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರ ಗಮನಕ್ಕೆ ತರದೆ ಸಭೆ ನಡೆಸಿ ಸಭಾನಡಾವಳಿ ಮಾಡಿ ನಿವೇಶನ ನೀಡುವ ಬದಲಿಗೆ ಕೆರೆ ಮಾಡಲು ಗೋಮಾಳದಲ್ಲಿ ಗುಂಡಿ ತೆಗೆದಿದ್ದಾರೆ ಎಂದರು.

    ಇದರಿಂದ ಬಡವರು ನಿವೇಶನ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ನಿವೇಶನ ನೀಡುವ ಭರವಸೆ ನೀಡಿದ್ದರೂ ಅದು ಈಡೇರಿಲ್ಲ. ಆದ್ದರಿಂದ ತಕ್ಷಣ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

    ನಿವೇಶನಕ್ಕೆ ಮೀಸಲಿಟ್ಟಿದ್ದ ಸ್ಥಳವನ್ನು ಗ್ರಾಪಂ ಬೇರೆ ಕೆಲಸಕ್ಕೆ ನೀಡಿದ್ದಾರೆ ಎಂದು ತಿಳಿದ ಫಲಾನುಭವಿಗಳು ಅದೇ ಸ್ಥಳದಲ್ಲಿ 45 ದಿನದಿಂದ ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದನೆ ಮಾಡುತ್ತಿಲ್ಲ ಎಂದು ದೂರಿದರು.

    ಗ್ರಾಮದ ಸರ್ವೇ ನಂ. 46ರಲ್ಲಿ 58 ಎಕರೆ ಜಮೀನು ಇದೆ. ಅದರಲ್ಲಿ 2 ಎಕರೆ ಬೆಸ್ಕಾಂ ಇಲಾಖೆೆಗೆ, 8 ಎಕರೆ ಶಾಲೆಗೆ ಮತ್ತು 2 ಎಕರೆ 16 ಗುಂಟೆ ಕೆರೆ ನಿರ್ಮಾಣಕ್ಕಾಗಿ ನೀಡಲಾಗಿದೆ. ಉಳಿದ ಜಮೀನನ್ನು ಮನೆ ಮತ್ತು ನಿವೇಶನ ರಹಿತರಿಗೆ ನೀಡಬೇಕು. ನಿವೇಶನ ಸಿಗುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದರು.
    ಸಂಘದ ಸಂತೇಬೆನ್ನೂರು ಹೋಬಳಿ ಅಧ್ಯಕ್ಷ ಎನ್.ಅರ್.ಕುಮಾರ್ ಹಿರೆಕೋಗಲೂರು, ರಾಷ್ಟ್ರೀಯ ಪ್ರಭುತ್ವ ಸೇನೆ ರಾಜ್ಯ ಸಂಚಾಲಕ ಮಂಜಪ್ಪ ನೀತಿಗೆರೆ, ಪ್ರವೀಣ, ನಾಗರಾಜ, ರಾಜಣ್ಣ, ಸುರೇಶ, ಬಾಬಣ್ಣ, ರುದ್ರೇಶ್, ತಿಮ್ಮೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts