More

    VIDEO: ಪಾಕಿಸ್ತಾನ ಸೂಪರ್​ ಲೀಗ್​ನಲ್ಲೊಂದು ತಮಾಷೆ; ಈ ಕೀಪರ್​ ಚೆಂಡು ಹಿಡಿಯೋ ಬದಲು ಏನು ಹಿಡ್ಕೊಂಡ ನೋಡಿ…ಬ್ಯಾಟ್ಸ್​ಮೆನ್​ ಫುಲ್ ಕಂಗಾಲು !

    ಭಾರತೀಯ ಕ್ರಿಕೆಟ್​ ನಿಯಂತ್ರಣಾ ಮಂಡಳಿ 2008ರಲ್ಲಿ ಐಪಿಎಲ್​ (ಇಂಡಿಯನ್​ ಪ್ರೀಮಿಯರ್ ಲೀಗ್​) ಟಿ-20 ಪಂದ್ಯಾವಳಿಯನ್ನು ಪ್ರಾರಂಭ ಮಾಡಿದ ಬಳಿಕ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯೂ ಅದನ್ನು ಕಾಪಿ ಹೊಡೆದಿದೆ. ತಾವೇನು ಕಡಿಮೆ ಎಂಬಂತೆ 2015ರಲ್ಲಿ ಪಾಕಿಸ್ತಾನ ಸೂಪರ್​ ಲೀಗ್​ (ಪಿಎಸ್​​ಎಲ್​)ನ್ನು ಶರುಮಾಡಿಕೊಂಡಿರುವುದು ಹೊಸ ವಿಷಯವಲ್ಲ.

    ಐಪಿಎಲ್​ನಲ್ಲಿ ಭಾರತದ ವಿವಿಧ ಪ್ರದೇಶಗಳ ಒಟ್ಟು ಎಂಟು ತಂಡಗಳು ಆಡುವಂತೆ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಅಲ್ಲಿನ ವಿವಿಧ ಭಾಗಗಳ ಆರು ತಂಡಗಳ ನಡುವೆ ಪಂದ್ಯ ನಡೆಯುತ್ತದೆ.

    ಸದ್ಯ ಪಾಕ್​ನಲ್ಲಿ ಈ ಸೂಪರ್​ ಲೀಗ್​ ಪಂದ್ಯಗಳು ನಡೆಯುತ್ತಿದ್ದು ಭಾನುವಾರ (ಮಾರ್ಚ್​ 8)ದಂದು ಲಾಹೋರ್​ ಖಲಾಂಡರ್ಸ್​ ಮತ್ತು ಕರಾಚಿ ಕಿಂಗ್ಸ್​ ಮಧ್ಯೆ ಆಟವಿತ್ತು. ಈ ವೇಳೆ ನಡೆದ ಅತ್ಯಂತ ತಮಾಷೆ ಸನ್ನಿವೇಶದ ವಿಡಿಯೋವೊಂದು ಟ್ವಿಟರ್ ಸೇರಿ, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.

    ಲಾಹೋರ್​ ಖಲಾಂಡರ್ಸ್​ ತಂಡದಲ್ಲಿದ್ದ ಆಸ್ಟ್ರೇಲಿಯನ್ ಕ್ರಿಕೆಟರ್ ಬೆನ್ ಡಂಕ್​ ಮತ್ತು ಕರಾಚಿ ಕಿಂಗ್​ನಲ್ಲಿ ಆಡುತ್ತಿದ್ದ ವೆಸ್ಟ್​ಇಂಡೀಸ್​ ಚಾಡ್ವಿಕ್ ವಾಲ್ಟನ್ ಈ ಫನ್ನಿ ಕ್ಷಣಕ್ಕೆ ಕಾರಣರಾದವರು.

    ಲಾಹೋರ್​ ಖಲಾಂಡರ್ಸ್​ನ​ ಬೆನ್​ ಡಂಕ್​ ಬ್ಯಾಟಿಂಗ್ ಮಾಡುತ್ತಿದ್ದರೆ, ವೆಸ್ಟ್​ಇಂಡೀಸ್​​​ನ ಚಾಡ್ವಿಕ್​ ವಾಲ್ಟನ್​ ಕರಾಚಿ ಕಿಂಗ್ಸ್​ ತಂಡದ ಕೀಪರ್ ಆಗಿ ಸ್ಟಂಪ್ ಹಿಂದೆ ನಿಂತಿದ್ದರು. ತಮಗೆ ಬಂದ ಚೆಂಡಿ​ನತ್ತ ಡಂಕ್​ ಬ್ಯಾಟ್ ಬೀಸಿದಾಗ, ಅದು ಸ್ವಲ್ಪ ಹಿಂದಕ್ಕೆ ಹೋಗಿ ಮೇಲೆ ಹಾರಿತು. ಅದನ್ನು ಹಿಡಿಯಬೇಕಿದ್ದ ಚಾಡ್ವಿಕ್​, ಒಮ್ಮೆಲೆ ಗಡಿಬಿಡಿಗೆ ಬಿದ್ದವರಂತೆ ಓಡಿಬಂದು ಬೆನ್ ಡಂಕ್​ ಅವರ ಮೊಳಕಾಲು, ಸೊಂಟವನ್ನು ಗಟ್ಟಿಯಾಗಿ ಹಿಡಿದು ಕುಳಿತರು. ಅಷ್ಟೊತ್ತಿಗೆ ಆ ಬಾಲ್ ಕೂಡ ಡಂಕ್​ ಅವರ ಭುಜದ ಮೇಲೆ ಬಿದ್ದು, ತಲೆಗೆ ಹೊಡೆದು, ಮೈದಾನಕ್ಕೆ ಬಿತ್ತು. ಆ ಕ್ಷಣ ಏನಾಯಿತೆಂದು ಯಾರಿಗೂ ಅರ್ಥವಾಗಲಿಲ್ಲ. ಆದರೆ ವಿಡಿಯೋ ಮಾತ್ರ ಸಿಕ್ಕಾಪಟೆ ವೈರಲ್ ಆಗುತ್ತಿದೆ.

    ಪಾಕಿಸ್ತಾನ ಸೂಪರ್ ಲೀಗ್​ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿಯೂ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ‘ಇವರಿಬ್ಬರದ್ದು ಎಂತಹ ಗೆಳೆತನ…ಅದೃಷ್ಟ ಮಾಡಿರಬೇಕು’ ಎಂದು ಫನ್ನಿಯಾಗಿ ಕ್ಯಾಪ್ಷನ್​ ಬರೆದಿದೆ.

    ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ಚಿತ್ರ-ವಿಚಿತ್ರ ಕಾಮೆಂಟ್​ಗಳನ್ನು ಹಾಕುತ್ತಿದ್ದಾರೆ. ಇಂಥದ್ದೆಲ್ಲ ಸಾಧ್ಯವಾಗುವುದು ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಮಾತ್ರ ಎಂದು ಓರ್ವರು ಬರೆದಿದ್ದರೆ, ವಿಡಿಯೋದಿಂದ ಕಣ್ಣು ತೆಗೆಯಲು ಆಗುತ್ತಿಲ್ಲ ಎಂದು ಮತ್ತೋರ್ವರು ಕಾಮೆಂಟ್​ ಮಾಡಿದ್ದಾರೆ.

    ಕ್ರಿಕೆಟ್​ ಇತಿಹಾಸದಲ್ಲಿಯೇ ಇಂತಹ ಸನ್ನಿವೇಶ ನಡೆದಿದ್ದು ಇದೇ ಮೊದಲಿರಬೇಕು ಎಂದೂ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts