More

    ಮಾಸೂರಿನಿಂದ ಶಿಕಾರಿಪುರಕ್ಕೆ ಪಾದಯಾತ್ರೆ

    ರಟ್ಟಿಹಳ್ಳಿ: ಅಭಿವೃದ್ಧಿ ಕಾರ್ಯಗಳಿಗೆ ನಿರ್ಲಕ್ಷ್ಯ ತೋರಿರುವ ಸರ್ಕಾರದ ನಡೆಸ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆ. 17ಕ್ಕೆ ಮಾಸೂರಿನಿಂದ ಶಿಕಾರಿಪುರಕ್ಕೆ ಪಾದಯಾತ್ರೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲು ಸರ್ವಜ್ಞ ಪ್ರಾಧಿಕಾರ ಹೋರಾಟ ಸಮಿತಿ ತೀರ್ವನಿಸಿದೆ.

    ತಾಲೂಕಿನ ಮಾಸೂರು ಗ್ರಾಮದ ಸರ್ವಜ್ಞ ಪ್ರಾಧಿಕಾರ ಹೋರಾಟ ಸಮಿತಿ, ರೈತ ಸಂಘ, ರಾಜ್ಯ ಕುಂಬಾರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಸೋಮವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

    ರೈತ ಸಂಘದ ಅಧ್ಯಕ್ಷ ನಾಗನಗೌಡ ಪಾಟೀಲ ಮಾತನಾಡಿ, ತ್ರಿಪದಿ ಬ್ರಹ್ಮ ಸರ್ವಜ್ಞರು 16ನೇ ಶತಮಾನದ ವಚನಕಾರ, ಶ್ರೇಷ್ಠ ಕವಿಯಾಗಿದ್ದವರು. ಕನಕದಾಸರು, ಶಿಶುನಾಳ ಶರೀಫರು, ಬಸವಣ್ಣನವರ ಹೆಸರಿನಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದು ಅವರಿಗೆ ಗೌರವ ಸೂಚಿಸಲಾಗಿದೆ. ಆದರೆ, ವರಕವಿ ಸರ್ವಜ್ಞರಿಗೆ ಮಾತ್ರ ಈ ಗೌರವ ದೊರಕಿಲ್ಲ. ಸರ್ವಜ್ಞ ಪ್ರಾಧಿಕಾರ ಘೊಷಣೆಯಾದರೂ ಇಲ್ಲಿಯವರೆಗೆ ಅಭಿವೃದ್ಧಿ ಕಾರ್ಯಗಳು ಜರುಗಿಲ್ಲ ಎಂದರು.

    ಸರ್ವಜ್ಞನ ಕುರುಹುಗಳಿರುವ ಮಾಸೂರಿನಲ್ಲಿ ಪ್ರಾಧಿಕಾರದ ಕೇಂದ್ರ ಕಚೇರಿ ಆರಂಭಿಸಬೇಕು. 25 ಕೋಟಿ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಸರ್ವಜ್ಞ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರ ಪಟ್ಟಿ ರದ್ದುಪಡಿಸಬೇಕು. ರಾಜ್ಯದ ಉದ್ದಗಲಕ್ಕೂ ಇರುವ ಸಂಬಂಧಿಸಿದ ಸಾಹಿತಿಗಳನ್ನು ಅರ್ಹತೆಯ ಆಧಾರದ ಮೇಲೆ ನೇಮಿಸಬೇಕು. ಮಾಸೂರು ಗ್ರಾಮದಲ್ಲಿ ಸರ್ವಜ್ಞ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಭೂಮಿ ಖರೀದಿಸಿ ಕೇಂದ್ರ ಕಚೇರಿ ಪ್ರಾರಂಭಿಸಿ ಸರ್ವಜ್ಞರ ಸಮಾಧಿಯನ್ನು ಅಂತಾರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು. ಕಳೆದ ಬಜೆಟ್​ನಲ್ಲಿ ಸರ್ವಜ್ಞ ಪ್ರಾಧಿಕಾರಕ್ಕೆ ಘೊಷಣೆಯಾದ 5 ಕೋಟಿ ರೂ. ಸಮರ್ಪಕ ಬಳಕೆ ಮಾಡಬೇಕು. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಆ. 17ರೊಳಗಾಗಿ ಈಡೇರಿಸಬೇಕು. ಇಲ್ಲವಾದರೆ ವಿವಿಧ ಸಂಘಟನೆಗಳಿಂದ ಆ. 17ಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಮಾಸೂರಿನ ಸರ್ವಜ್ಞನ ಸಮಾಧಿಯಿಂದ ಬೆಳಗಾವಿ ಕುಂಬಾರ ಗುರುಪೀಠದ ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಿ, ಶಿಕಾರಿಪುರದಲ್ಲಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗೃಹ ಕಚೇರಿ ಬಳಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.

    ಸರ್ವಜ್ಞ ಪ್ರಾಧಿಕಾರ ಹೋರಾಟ ಸಮಿತಿಯ ಸದಸ್ಯರಾದ ಮಲ್ಲೇಶಪ್ಪ ಗುತ್ತಣ್ಣನವರ, ಬಸಣ್ಣ ಹೊನ್ನಾಳಿ, ಚಂದ್ರಹಾಸ ನಾಗೇನಹಳ್ಳಿ, ಸುಲೇಮಾನ ಹೊರಕೇರಿ, ಕುಂಬಾರ ಸಮಾಜದ ಮುಖಂಡರಾದ ರೇವಣಪ್ಪ ಚಕ್ರಸಾಲಿ, ಚನ್ನಬಸಪ್ಪ ಚಕ್ರಸಾಲಿ, ಬಸವಣ್ಣೆಪ್ಪ ಚಕ್ರಸಾಲಿ, ಕೋಟೇಶಪ್ಪ ಕೆಂಚಪ್ಪನವರ, ಶಿವರಾಜ ಜಕ್ಕೆಳ್ಳಿ, ಶಿವಣ್ಣ ಚಕ್ರಸಾಲಿ, ಶೇಖಪ್ಪ ಚಕ್ರಸಾಲಿ, ಮಹೇಶ ಚಕ್ರಸಾಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts