More

    ಹೆದ್ದಾರಿ ಮೇಲ್ದರ್ಜೆಗೇರಿಸಲು ನಿತಿನ್ ಗಡ್ಕರಿ ಜತೆ ಸಭೆ

    ಬೆಳಗಾವಿ: ಕರ್ನಾಟಕದ 28 ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕಿದ್ದು, ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದೇವೆ. ಮುಂದಿನ ವಾರ ಈ ಕುರಿತು ಸಭೆ ನಡೆಸುವುದಾಗಿ ಗಡ್ಕರಿ ತಿಳಿಸಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

    ನಗರದ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ವಿಳಂಬ ಆಗಿದ್ದರಿಂದ ಗುತ್ತಿಗೆದಾರ ಕೆಲಸ ಬಿಟ್ಟು ಹೋಗಿದ್ದಾನೆ. ಅದೇ ಗುತ್ತಿದಾರರನಿಗೆ ಕಾಮಗಾರಿ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಕಾರ ಅಕಾರಿಗಳಿಗೆ ಸೂಚಿಸಿದ್ದು, ರಿಂಗ್‌ರೋಡ್ ಕಾಮಗಾರಿ ಶೀಘ್ರ ಆರಂಭ ಮಾಡುತ್ತೇವೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಮಳೆಯಾಗದ ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಣೆ ಮಾಡುತ್ತೇವೆ. ಈಗಾಗಲೇ ಈ ವಿಚಾರ ಸಿಎಂ ಸಿದ್ದರಾಮಯ್ಯ ಗಮನಕ್ಕೂ ತಂದಿದ್ದೇವೆ. ಜುಲೈ-15ರ ವರೆಗೂ ಮಳೆ ಪ್ರಮಾಣ ನೋಡೋಣ ಎಂದಿದ್ದರು. ಆದಷ್ಟು ಬೇಗ ಮಳೆಯಾಗದ ಜಿಲ್ಲೆಗಳನ್ನು ಬರಪೀಡಿ ಪ್ರದೇಶಗಳೆಂದು ಸಿಎಂ ಘೋಷಣೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಜಿಲ್ಲಾಸ್ಪತ್ರೆ ಆವರಣದಲ್ಲಿ 162 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಈಗಾಗಲೇ ನಿರ್ಮಾಣವಾಗಿದೆ. ಪ್ರಸ್ತುತ ಬಜೆಟ್‌ನಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಾಗಿ ಅನುದಾನ ಮೀಸಲಿಟ್ಟಿದ್ದು, ಶೀಘ್ರ ಸಿಬ್ಬಂದಿ ನೇಮಿಸಿ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದರು. ಬೆಳಗಾವಿ ನಗರಾಭಿವೃದ್ಧಿ ಪ್ರಾಕಾರ, ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ಈಗಾಗಲೇ ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಾಗಿದೆ. ತನಿಖೆಗೆ ಬೆಂಗಳೂರಿನಿಂದ ಅಕಾರಿಗಳು ಬಂದು ತನಿಖೆ ನಡೆಸುತ್ತಾರೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದರು.

    ಪಕ್ಷ ಹೇಳಿದರೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಚುನಾವಣೆ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆದಿದೆ. ಬೆಳಗಾವಿ ಜಿಲ್ಲೆಯ ಶಾಸಕರ ಜತೆ ಸಭೆ ನಡೆಸಿ ಚರ್ಚಿಸಿದ್ದೇನೆ. ಮುಂದಿನ 2 ತಿಂಗಳೊಳಗೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ. ಎರಡೂ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸ್ಥಳೀಯ ಶಾಸಕರು, ಮುಖಂಡರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ನಮ್ಮ ಕುಟುಂಬ ಎರಡನೇ ಸ್ಥಾನದಲ್ಲಿ ಇರಲಿದೆ. ಪಕ್ಷ ಲೋಕಸಭೆ ಚುನಾವಣೆಗೆ ಸ್ಪರ‌್ಸುವಂತೆ ಹೇಳಿದರೆ ನಿಲ್ಲುತ್ತೇನೆ. ಅವಶ್ಯಕತೆ ಇದ್ದರೆ ನಮ್ಮ ಕುಟುಂಬದಿಂದಲೇ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದರು.

    ಖಾನಾಪುರ ತಾಲೂಕಿನಲ್ಲಿ ಮೊದಲಿನಿಂದಲೂ ಬಸ್ ಸಮಸ್ಯೆ ಇದೆ. ಸರ್ಕಾರದಿಂದ ನಾಲ್ಕು ಸಾವಿರ ಬಸ್ ಖರೀದಿ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಹೊಸ ಬಸ್ ಬಂದರೆ ಅವುಗಳನ್ನ ಖಾನಾಪುರ ತಾಲೂಕಿಗೆ ಬಿಡಿಸುವ ವ್ಯವಸ್ಥೆ ಮಾಡಿ, ಶಾಲಾ ಮಕ್ಕಳ ಸಮಸ್ಯೆ ನಿವಾರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts