More

    ಅಂಗನವಾಡಿಗೆ ಹೈಟೆಕ್ ಲುಕ್

    ಅನ್ಸಾರ್ ಇನೋಳಿ ಉಳ್ಳಾಲ
    ಬಾಳೆಪುಣಿ ಅಂಗನವಾಡಿ ಕೇಂದ್ರ ಖಾಸಗಿ ನರ್ಸರಿ, ಎಲ್‌ಕೆಜಿ-ಯುಕೆಜಿಗಳನ್ನೂ ಮೀರಿಸುವ ಹೈಟೆಕ್ ಅಂಗನವಾಡಿಯಾಗಿ ಬೆಳೆದಿದ್ದು ಮಾದರಿಯಾಗಿದೆ.

    ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅನಂಗದಲ್ಲಿರುವ ಈ ಅಂಗನವಾಡಿ ಕೇಂದ್ರ ವಿಭಿನ್ನ ಪೇಂಟಿಂಗ್‌ನಿಂದಲೇ ಜನರನ್ನು ಆಕರ್ಷಿಸುತ್ತಿದೆ. ಹೊರಭಾಗದ ಪೇಂಟಿಂಗ್‌ಗಿಂತಲೂ ಒಳಭಾಗದಲ್ಲಿರುವ ಪೇಂಟಿಂಗ್ ಆಕರ್ಷಕವಾಗಿದೆ. ಒಳಭಾಗದಲ್ಲಿ ಸೀಲಿಂಗ್ ಡಿಜಿಟಲ್ ಪೇಂಟಿಂಗ್ ಇದ್ದು, ಇದನ್ನು ಗಮನಿಸುವಾಗಲೇ ಸೌರ ಮಂಡಲಕ್ಕೆ ಕೊಂಡೊಯ್ಯುವಂತೆ ಭಾಸವಾಗುತ್ತದೆ.
    ಪುಟ್ಟ ಹೆಜ್ಜೆಗಳನ್ನಿಟ್ಟು ಅಂಗನವಾಡಿಗೆ ಬರುವ ಮಕ್ಕಳ ಉತ್ಸಾಹ ಇಮ್ಮಡಿಗೊಳಿಸಲು ಎಲ್‌ಸಿಡಿ ಟಿವಿ ವ್ಯವಸ್ಥೆಯೂ ಇಲ್ಲಿದೆ. ಇದರಲ್ಲಿ ಪ್ರಾಣಿ, ಪಕ್ಷಿಗಳು, ಲೋಕಜ್ಞಾನ, ಸ್ವಚ್ಛತಾ ಪಾಠ ಮಾಡಲಾಗುತ್ತದೆ. ಈ ಪಾಠ ಇಲ್ಲಿನ ಸ್ತ್ರೀಶಕ್ತಿ ಸಂಘಟನೆಗಳಿಗೂ ಅನುಕೂಲವಾಗಿದೆ. ಸ್ತ್ರೀಶಕ್ತಿ ಸಂಘಟನೆಯೇ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮನೆ ಮನೆ ಜಾಗೃತಿ ಕಾರ್ಯಕ್ರಮ ನಡೆಸುವಲ್ಲಿ ಅಂಗನವಾಡಿಯಲ್ಲಿ ಸಿಗುವ ಎಲ್‌ಸಿಡಿ ಪಾಠವೂ ಪ್ರಮುಖ ಪಾತ್ರ ವಹಿಸಿದೆ.

    ಜತೆಗೆ ಅಕ್ವೇರಿಯಂ, ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಯಂತ್ರ, ಮೂರು ಕಪಾಟುಗಳು, ಟೇಬಲ್‌ಗಳು, ಮಕ್ಕಳಿಗಾಗಿಯೇ ಕುರ್ಚಿಗಳ ವ್ಯವಸ್ಥೆಯೂ ಇದೆ. ವಿವಿಧ ಔಷಧೀಯ ಗಿಡಗಳು, ತರಕಾರಿ ಗಿಡಗಳು, ಬಾಳೆ, ತೆಂಗಿನ ಮರಗಳು, ಹೂವಿನ ಗಿಡಗಳು ಹೈಟೆಕ್ ಅಂಗನವಾಡಿ ಕೇಂದ್ರಕ್ಕೆ ಇನ್ನಷ್ಟು ಮೆರುಗು ನೀಡಿದೆ. ಅತ್ಯಾಕರ್ಷಕವಾಗಿರುವ ಕೇಂದ್ರಕ್ಕೆ ಪುಟಾಣಿಗಳು ನಗುನಗುತ್ತಲೇ ಬಂದು ಹೋಗುವುದು ಕಂಡು ಬರುತ್ತದೆ.

    ಅಂಗನವಾಡಿ ಕೀರ್ತಿ ಜಾರ್ಖಂಡ್‌ವರೆಗೆ!
    ಗ್ರಾಮೀಣ ಭಾಗದಲ್ಲಿರುವ ಈ ಅಂಗನವಾಡಿಯ ಕೀರ್ತಿ ಜಾರ್ಖಂಡ್ ರಾಜ್ಯಕ್ಕೂ ತಲುಪಿದೆ. ಒಂದೂವರೆ ತಿಂಗಳ ಹಿಂದೆ ಜಾರ್ಖಂಡ್‌ನಿಂದ ಏಳು ಮಂದಿಯ ಎನ್‌ಜಿಒ ತಂಡ ಅಂಗನವಾಡಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ. ಕೆಲವು ದಿನಗಳ ಹಿಂದೆ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಅಂಗನವಾಡಿ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರ ತಂಡ, ಸೆಲ್ಕೋ ಫೌಂಡೇಶನ್ ಪ್ರತಿನಿಧಿಗಳು ಭೇಟಿ ನೀಡಿ ಅಂಗನವಾಡಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಸ್ತ್ರೀಶಕ್ತಿ ಗುಂಪಿನ ಕಾರ್ಯ ಚಟುವಟಿಕೆಯೂ ತಾಲೂಕು ಮಟ್ಟದಲ್ಲಿ ಗಮನ ಸೆಳೆದಿದ್ದು, ಸಾಮಾಜಿಕ, ಸಾಲ ಮರುಪಾವತಿ, ವೈಯಕ್ತಿಕ ಚಟುವಟಿಕೆಗಳ ಆಧಾರದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಅತ್ಯುನ್ನತ ಸ್ತ್ರೀಶಕ್ತಿ ಗುಂಪು ಪ್ರಶಸ್ತಿಯೂ ಕಳೆದ ವಾರ ಲಭಿಸಿದೆ.

    ಜನಶಿಕ್ಷಣ ಟ್ರಸ್ಟ್‌ನ ನಿರಂತರ ಪ್ರೇರಣೆಯಿಂದ ದಾನಿಗಳು, ಸಂಘ-ಸಂಸ್ಥೆಗಳ ಜತೆಗೆ ಸ್ತ್ರೀಶಕ್ತಿ ಸಂಘಟನೆಯೂ ಸಹಕಾರ ನೀಡಿದ್ದರಿಂದ ಅಂಗನವಾಡಿ ಕೇಂದ್ರವನ್ನು ಸುಂದರ, ಸುಸಜ್ಜಿತಗೊಳಿಸಲು ಸಾಧ್ಯವಾಗಿದೆ. ಸ್ತ್ರೀಶಕ್ತಿ ಸಂಘಕ್ಕೆ ತಾಲೂಕು ಮಟ್ಟದ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ.
    ಹರಿಣಾಕ್ಷಿ
    ಬಾಲವಿಕಾಸ ಸಮಿತಿ ಅಧ್ಯಕ್ಷೆ

    ಎಲ್‌ಸಿಡಿ, ಅಕ್ವೇರಿಯಂ ಸಹಿತ ಎಲ್ಲ ರೀತಿಯ ಕಲಿಕಾ ಪರಿಕರ ಅಂಗನವಾಡಿಗೆ ದೊರಕುವಂತಾಗಲು ಜನಶಿಕ್ಷಣ ಟ್ರಸ್ಟ್, ಬಾಲವಿಕಾಸ ಸಮಿತಿ, ಗ್ರಾಮ ಪಂಚಾಯಿತಿ, ಸ್ತ್ರೀಶಕ್ತಿ ಸಂಘಟನೆ ಸಹಕಾರ ಇದೆ. ಇಂಥ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿರುವುದು ಹೆಮ್ಮೆ ತಂದಿದೆ.
    ಪೂರ್ಣಿಮಾ
    ಅಂಗನವಾಡಿ ಕಾರ್ಯಕರ್ತೆ

    ಮುಂದೆ ಆವರಣ ಗೋಡೆ ಪೂರ್ಣಗೊಳಿಸಬೇಕಿದ್ದು, ಬಳಿಕ ಔಷಧೀಯ ವನ ನಿರ್ಮಿಸುವ ಯೋಜನೆ ಇದೆ. ಜತೆಗೆ ಮಕ್ಕಳ ಆಟಕ್ಕೆ ಜಾರುಬಂಡಿ, ಕಲಿಕೆಗೆ ಐಪ್ಯಾಡ್ ಮುಖಾಂತರ ಸ್ಮಾರ್ಟ್‌ಕ್ಲಾಸ್ ನಿರ್ಮಿಸುವ ಯೋಜನೆ ಇದ್ದು ದಾನಿಗಳ ನೆರವು ಅಗತ್ಯ.
    ಸದಾನಂದ
    ಬಾಲವಿಕಾಸ ಸಮಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts