More

    ನಲಿ-ಕಲಿ ಶಿಕ್ಷಣಕ್ಕೆ ಹೈಟೆಕ್ ಸ್ಪರ್ಶ

    ಮಧುಗಿರಿ: ಕೊಠಡಿ ತುಂಬ ಆಟಿಕೆಗಳು, ಗೋಡೆಗಳ ಮೇಲೆ ತುಳುಕುತ್ತಿರುವ ಕಲಿಕೋಪರಣಗಳು, ತೋರಣಗಳಂತೆ ಕಾಣುವ ಮಾಹಿತಿ ಮಾಲೆ, ಕನ್ನಡ-ಇಂಗ್ಲಿಷ್ ಪ್ರತಿ ಅಕ್ಷರದ ಮಾಹಿತಿ ಕಣಜ, ಒಟ್ಟಾರೆ ಒಂದೇ ಕೊಠಡಿಯಲ್ಲಿ ಜ್ಞಾನ ಭಂಡಾರ… – ಇದು ತಾಲೂಕು ಕೇಂದ್ರದಿಂದ 32 ಕಿ.ಮೀ ದೂರದಲ್ಲಿರುವ, ನೆರೆಯ ಆಂಧ್ರಕ್ಕೆ ಹೊಂದಿಕೊಂಡಿರುವ ಸುದ್ದೇಕುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ.

    ಸರ್ಕಾರಿ ಶಾಲೆಗಳಿಗೆ ವೈಭವ ಮರಳಿಸಲು ನಿರಂತರ ಪ್ರಯೋಗಗಳನ್ನು ನಡೆಸಲಾಗುತ್ತದೆ, ಈ ನಿಟ್ಟಿನಲ್ಲಿ ಸುದ್ದೇಕುಂಟೆ ಶಾಲೆ ಶಿಕ್ಷಕರು ವಿಭಿನ್ನವಾಗಿ ಆಲೋಚಿಸಿ ಸ್ವಂತ ಖರ್ಚಿನಲ್ಲಿ ಕಲಿಕೆಗೆ ಅನುಕೂಲವಾದ ಸಾಮಗ್ರಿಗಳನ್ನು ತಯಾರಿಸಿ ಜೋಡಿಸಿದ್ದಾರೆ, ಈ ಮೂಲಕ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿದ್ದಾರೆ. ಅಷ್ಟೇ ಅಲ್ಲದೆ ನಲಿ-ಕಲಿ ಜತೆಗೆ ನೋಡಿ ಕಲಿ ತತ್ವಕ್ಕೂ ಜೀವ ತುಂಬಿದ್ದಾರೆ.
    ನಲಿ-ಕಲಿಗೆ ಹೈಟೆಕ್ ಸ್ಪರ್ಶ: ನಲಿ-ಕಲಿಗೆ ಮಾದರಿಯಾಗಿರುವ ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ, ನಲಿ-ಕಲಿ ಶಿಕ್ಷಕ ಪಿ.ಉಮಾಶಂಕರ್, ಇತರ ಶಿಕ್ಷಕರು ಕೊಠಡಿಯನ್ನು ಮದುವೆ ಮನೆಯಂತೆ ಸಿಂಗರಿಸಿದ್ದಾರೆ. ಬಳಸಿ ಬಿಸಾಡಿದ ವಸ್ತುಗಳನ್ನೇ ಉಪಯೋಗಿಸಿಕೊಂಡು 1 ರಿಂದ 3ನೇ ತರಗತಿ ವರೆಗಿನ ವಿಷಯಗಳಿಗೆ ಸಂಬಂಧಿಸಿದಂತೆ ಜ್ಞಾನ ಭಂಡಾರವನ್ನೇ ಸೃಷ್ಟಿಸಿದ್ದಾರೆ.

    ಕಲಿಕೋಪಕರಣ, ಚಟುವಟಿಕಾ ಕಾರ್ಡ್, ಮಿಂಚುಪಟ್ಟಿ, ಆಟಿಕೆಗಳನ್ನು ಸ್ವಯಂ ತಯಾರಿಸಿದ್ದು, ಪ್ರತಿಯೊಂದು ವಿಭಾಗದಲ್ಲೂ ಒಂದೊಂದು ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ತೋರಣಗಳಂತೆ ಹಾಕಲಾಗಿದ್ದು, ಕನ್ನಡ ಮತ್ತು ಇಂಗ್ಲೀಷ್‌ನ ಪ್ರತೀ ಅಕ್ಷರಕ್ಕೂ ಮಾಹಿತಿಯ ಕಣಜವನ್ನೇ ಜೋಡಿಸಲಾಗಿದೆ. ಎಲ್ಲ ವಿಷಯಗಳ ಮಾಹಿತಿಯನ್ನೂ ಒಂದೇ ಕೋಣೆಯಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳನ್ನು ಶಾಲೆಯೆಡೆಗೆ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

    ಸ್ವಂತ ಖರ್ಚಲ್ಲಿ ಪಠ್ಯ ಸಾಮಗ್ರಿ ತಯಾರಿ…:ಇನ್ನು ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 165 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ತರಗತಿ ಗೋಡೆಗಳು ಮಾಹಿತಿಯ ಮಾಲೆಗಳಿಂದಲೇ ತುಂಬಿ ತುಳುಕುತ್ತಿವೆ. ಮಕ್ಕಳಿಗೆ ಕಲಿಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಅವಶ್ಯವಿರುವ ಕಲಿಕಾ ಸಾಮಗ್ರಿಗಳನ್ನು ಮುಖ್ಯಶಿಕ್ಷಕಿ ನಾಗರತ್ನಾ ಹಾಗೂ ಇತರ ಶಿಕ್ಷಕರು ಸ್ವಂತ ಖರ್ಚಿನಿಂದ ಖರೀದಿಸಿ ತಂದು ಮಕ್ಕಳಿಗೆ ಅನುಕೂಲ ಮಾಡಿಕೊಟ್ಟಿದ್ದು, ನಲಿ-ಕಲಿ ಶಿಕ್ಷಣಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.

    ದಾನಿಗಳ ನೆರವು…
    ಶಾಲೆಯಲ್ಲಿ 12 ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದ್ದು, ಸುಮಾರು 5 ವರ್ಷಗಳಿಂದ ಸ್ಮಾರ್ಟ್‌ಕ್ಲಾಸ್ ಸೌಕರ್ಯ ಕಲ್ಪಿಸಲಾಗಿದೆ. ಇದೇ ಗ್ರಾಮದಲ್ಲಿ ಹುಟ್ಟಿ, ಬೆಳೆದು ಬೆಂಗಳೂರಿನ ಚಿತ್ರಕಲಾ ಪರಿಷತ್ ಸಂಸ್ಥಾಪಕರಾಗಿದ್ದ ಪ್ರೊ.ಎಂ.ಎಸ್.ನಂಜುಂಡರಾವ್ ಅವರ ಕುಟುಂಬದವರು ಪ್ರತೀ ವರ್ಷ ಸುಮಾರು 50 ಸಾವಿರ ರೂ. ಮೌಲ್ಯದ ಕಲಿಕಾ ಸಾಮಗ್ರಿಗಳನ್ನು ಶಾಲೆಗೆ ಒದಗಿಸುತ್ತಿದ್ದು, ಚೈತನ್ಯ ಸಿಂಚನಾ ಎಂಬ ಸಂಸ್ಥೆ ಪ್ರತಿ ವರ್ಷ ಶಾಲೆಯ ಎಲ್ಲ ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಒದಗಿಸುತ್ತಿದೆ.

    ಬರವಣಿಗೆ ರೂಪದಲ್ಲಿ ಕಲಿಯುವುದಕ್ಕಿಂತ ವಸ್ತು ರೂಪದಲ್ಲಿ ಸ್ವತಃ ನೋಡುವುದರಿಂದ ಮಕ್ಕಳು ಬಹಳಷ್ಟು ಬೇಗ ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೆ. ಹಾಗಾಗಿ ನಲಿ-ಕಲಿಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಮುಖ್ಯಶಿಕ್ಷಕಿ ನಾಗರತ್ನಾ ಹಾಗೂ ಇತರ ಶಿಕ್ಷಕರ ನೆರವಿನಿಂದ ಇದೆಲ್ಲವೂ ಸಾಧ್ಯವಾಯಿತು.
    ಪಿ. ಉಮಾಶಂಕರ್, ನಲಿ-ಕಲಿ ಶಿಕ್ಷಕ

    ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳ ಪ್ರಗತಿಗೆ ಶಿಕ್ಷಕರು ವಿನೂತನ ಪ್ರಯೋಗಗಳನ್ನು ಅಳವಡಿಸಿಕೊಂಡು ಶ್ರಮಿಸುತ್ತಿದ್ದು, ಶಿಕ್ಷಕರಲ್ಲಿ ಸ್ಪರ್ಧಾತ್ಮಕ ಮನೋಭಾವ ಮೊಳಕೆಯೊಡೆಯುತ್ತಿರುವುದು ಉತ್ತಮ. ಮುಂದಿನ ದಿನಗಳಲ್ಲೂ ಇಂತಹ ಯೋಜನೆಗಳು ಮತ್ತಷ್ಟು ರೂಪುಗೊಳ್ಳಲಿ.
    ಎಂ. ರೇವಣಸಿದ್ದಪ್ಪ ಡಿಡಿಪಿಐ, ಮಧುಗಿರಿ ಶೈಕ್ಷಣಿಕ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts