More

    ಮಕ್ಕಳಿಗೆ ಸಿಗದ ಹೈಟೆಕ್ ನಂದಘರ್

    ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಮಕ್ಕಳಿಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಂಪನಿಗಳ ಸಿಎಸ್​ಆರ್ ಅನುದಾನದಡಿ ಅಂಗನವಾಡಿ ಕೇಂದ್ರ ನಿರ್ವಿುಸಿದ್ದಾರೆ. ಹೊಸ ಅಂಗನವಾಡಿ ಕೇಂದ್ರ ಉದ್ಘಾಟನೆಯಾಗಿ ಎರಡು ತಿಂಗಳಾಗಿವೆ. ಆದರೆ, ಅಲ್ಲಿ ಮಕ್ಕಳಿಗೆ ಕಲಿಕೆ ಭಾಗ್ಯ ಇನ್ನೂ ಸಿಕಿಲ್ಲ.

    ಗುಡೇನಕಟ್ಟಿಯಲ್ಲಿ ವೇದಾಂತ ಫೌಂಡೇಷನ್ ವತಿಯಿಂದ 23 ಲಕ್ಷ ರೂಪಾಯಿಗಳ ಸಿಎಸ್​ಆರ್ ಅನುದಾನದಲ್ಲಿ ಹೈಟೆಕ್ ನಂದಘರ್ (ಅಂಗನವಾಡಿ) ಕಟ್ಟಡ ನಿರ್ವಿುಸಿದೆ. 2023ರ ಡಿಸೆಂಬರ್ 1ರಂದು ಶಾಸಕ ಎಂ.ಆರ್. ಪಾಟೀಲ ಅವರು ಉದ್ಘಾಟಿಸಿದ್ದರು. ವೇದಾಂತ ಫೌಂಡೇಷನ್​ನವರು ನಮಗೆ ಗೌರವ ನೀಡಿಲ್ಲ, ಗ್ರಾಪಂ ನಾಮಫಲಕ ಅಳವಡಿಸಿಲ್ಲ ಎಂದು ಗ್ರಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಉದ್ಘಾಟನೆಗೊಂಡಿರುವ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಂಬರ್-1 ಅಲ್ಲಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಟ್ಟಿಲ್ಲ.

    ಸದ್ಯ ಮೇಲ್ಛಾವಣಿ ಬಿರುಕು ಬಿಟ್ಟು ಶಿಥಿಲಗೊಂಡಿರುವ ಗ್ರಾಮದ ಸರ್ಕಾರಿ ಶಾಲಾ ಕಟ್ಟಡದಲ್ಲಿಯೇ ಅಂಗನವಾಡಿ ಕೇಂದ್ರ ನಂ.1 ನಡೆಯುತ್ತಿದೆ. ಹೊಸ ಕಟ್ಟಡ ಉದ್ಘಾಟನೆಗೊಂಡು 2 ತಿಂಗಳು ಕಳೆದಿದ್ದರೂ ಮಕ್ಕಳು ಜೀವಭಯದಲ್ಲಿ ಹಳೆಯ ಕಟ್ಟಡದಲ್ಲೇ ಕುಳಿತು ಪಾಠ ಕೇಳುವಂತಾಗಿದೆ. ಒಟ್ಟಾರೆ ಲಕ್ಷಾಂತರ ರೂ. ವೆಚ್ಚದಲ್ಲಿ ಕಟ್ಟಡ ಸಿದ್ಧವಾಗಿದ್ದರೂ ಮಕ್ಕಳಿಗೆ ಅಲ್ಲಿ ಕಲಿಯುವ ಸೌಭಾಗ್ಯ ದೊರೆತಿಲ್ಲ. ಈಗಲಾದರೂ ಅಧಿಕಾರಿಗಳು, ಗ್ರಾಪಂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಬೇಕಿದೆ.

    ಅಂಗನವಾಡಿ ಕೇಂದ್ರಕ್ಕೆ ಗ್ರಾಪಂನಿಂದ ಜಾಗ ನೀಡಿ ಎಲ್ಲದಕ್ಕೂ ಸಹಕಾರ ನೀಡಿದ್ದೇವೆ. ನಮಗೆ ಯಾವುದೇ ಗೌರವ ನೀಡಿಲ್ಲ. ಹೀಗಾಗಿ, ವಿರೋಧ ವ್ಯಕ್ತಪಡಿಸಿದ್ದೇವೆ. ಆದರೆ, ಮಕ್ಕಳ ಕಲಿಕೆಗೆ ನಮ್ಮ ಸಹಕಾರವಿದೆ.

    | ಶಂಕ್ರವ್ವ ಹೊಸಳ್ಳಿ ಗ್ರಾಪಂ ಅಧ್ಯಕ್ಷೆ ಗುಡೇನಕಟ್ಟಿ

    ನಮ್ಮ ಇಲಾಖೆಯಿಂದ ಗ್ರಾಮ ಪಂಚಾಯಿತಿಗೆ ನಾಮಫಲಕ ಕೊಡಿಸಲು ಬರುವುದಿಲ್ಲ, ಶಾಸಕರು ಭರವಸೆ ನೀಡಿದ್ದು, ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು.

    | ಶಮಶಾದ ಬೇಗಂ ಸಿಡಿಪಿಒ ಕುಂದಗೋಳ

    ಕಟ್ಟಡ ತೀರಾ ಹಳೆಯದು ಮತ್ತು ಶಿಥಿಲಗೊಂಡಿದ್ದ ರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು. ಶೀಘ್ರವೇ ಅಧಿಕಾರಿಗಳು ತೊಡಕುಗಳನ್ನು ಬಗೆಹರಿಸಬೇಕು.

    | ಗೋಪಾಲ ದೊಡ್ಡಮನಿ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts