More

    ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್; 3 ವಾರ ಯಾವುದೇ ಮುಷ್ಕರ ನಡೆಸದಂತೆ ಆದೇಶ

    ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿರುವ ಹೈಕೋರ್ಟ್, ಸಾರ್ವಜನಿಕರು, ಉದ್ಯೋಗಿಗಳು, ಆಸ್ಪತ್ರೆ ಹಾಗೂ ಔಷಧಾಲಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಂಚಾರಕ್ಕೆ ತೊಂದರೆಯಾಗುವ ಹಿನ್ನೆಲೆಯಲ್ಲಿ 3 ವಾರಗಳ ಕಾಲ ಮುಷ್ಕರ ನಡೆಸದಂತೆ ವೇದಿಕೆಗೆ ನಿರ್ದೇಶಿಸಿದೆ.

    ಮುಷ್ಕರ ನಡೆಸದಂತೆ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಗೆ ನಿರ್ದೇಶಿಸುವಂತೆ ಕೋರಿ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹಾರೋಗೋಳಿಗೆ ಗ್ರಾಮದ ಎಚ್.ಎಂ. ವೆಂಕಟೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಈ ಮಧ್ಯಂತರ ಆದೇಶ ಮಾಡಿದೆ. ಇದನ್ನೂ ಓದಿ: VIDEO | ಕರ್ತವ್ಯ ನಿರತ ಪೊಲೀಸ್​ಗೆ ಸೆಲ್ಯೂಟ್ ಮಾಡಿದ ಬಾಲಕಿ; ಪುಟ್ಟ ಹುಡುಗಿಗೆ ಮೆಚ್ಚುಗೆ ಸೂಚಿಸಿದ ನೆಟ್ಟಿಗರು

    ಜತೆಗೆ, ಅರ್ಜಿ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ), ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಏ.17ಕ್ಕೆ ಮುಂದೂಡಿತು.

    ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗೆ ನಡೆಸುವ ಕಾನೂನಿನ ಪ್ರಕ್ರಿಯೆಗೆ ಅರ್ಜಿದಾರರ ಯಾವುದೇ ವಿರೋಧವಿಲ್ಲ. ಆದರೆ, ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಾ.24ರಂದು (ಶುಕ್ರವಾರ) ಮುಷ್ಕರ ನಡೆಸಲು ಕೈಗೊಂಡಿರುವ ನಿರ್ಧಾರಕ್ಕೆ ಆಕ್ಷೇಪವಿದೆ. ಒಂದೊಮ್ಮೆ ಮುಷ್ಕರ ನಡೆದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡು ಸಾರ್ವಜನಿಕರು, ಉದ್ಯೋಗಿಗಳು, ವಿಶೇಷವಾಗಿ ಆರೋಗ್ಯ ಸಂಸ್ಥೆಗಳು ಹಾಗೂ ಔಷಧಾಲಯ ನೌಕರರಿಗೆ ತೀವ್ರ ಅನನುಕೂಲತೆ ಉಂಟಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದನ್ನೂ ಓದಿ: ಸಾಮೂಹಿಕ ವಿವಾಹ ಬಡವರಿಗೆ ವರದಾನ

    ಏ.6ಕ್ಕೆ ಸಂಧಾನ ಸಭೆ

    ಸರ್ಕಾರದ ಪರ ವಕೀಲರು, ಪ್ರಕರಣ ಸಂಬಂಧ ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆಯೊಂದಿಗೆೆ ಕಾರ್ಮಿಕ ಇಲಾಖೆ ಆಯುಕ್ತರು ಮಾ.20ರಂದು ಮಧ್ಯಾಹ್ನ 2.30ಕ್ಕೆ ಸಂಧಾನ ಸಭೆ ಏರ್ಪಡಿಸಿದ್ದರು. ಆದರೆ, ಯಾವುದೇ ನಿರ್ದಿಷ್ಟ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ, ಏ.6ರಂದು ಬೆಳಗ್ಗೆ 11.30ಕ್ಕೆ ಮತ್ತೆ ಸಂಧಾನ ಸಭೆ ನಿಗದಿಪಡಿಸಲಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts