More

    ಸರ್ಕಾರಿ ಅಧಿಕಾರಿ ವಿರುದ್ಧ ಗಂಭೀರ ಆರೋಪ ಬಂದರೆ ಏಕಾಏಕಿ ವರ್ಗ ಮಾಡಬಾರದು ಎಂದ ಹೈಕೋರ್ಟ್​…

    ಬೆಂಗಳೂರು: ಸರ್ಕಾರಿ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಾಗ ಏಕಾಏಕಿ ವರ್ಗಾವಣೆ ಮಾಡುವುದು ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಆರೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರನ್ನು ಅವಧಿಪೂರ್ವ ವರ್ಗಾವಣೆ ಮಾಡಿದ್ದ ಸರ್ಕಾರದ ಕ್ರಮ ರದ್ದುಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆದೇಶವನ್ನು ಎತ್ತಿಹಿಡಿದಿದೆ.

    ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯಾಗಿದ್ದ ಡಾ.ಬಸನಗೌಡ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೆಎಟಿ ರದ್ದುಪಡಿಸಿತ್ತು. ಕೆಎಟಿ ಆದೇಶ ಪ್ರಶ್ನಿಸಿ ಬಸನಗೌಡ ಹುದ್ದೆಗೆ ವರ್ಗಾವಣೆಗೊಂಡಿದ್ದ ಡಾ.ಪಾಟೀಲ್ ಶಶಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹಾಗೂ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ ವಜಾಗೊಳಿಸಿದೆ.

    ಪ್ರಕರಣವೇನು?
    ಡಾ.ಬಸನಗೌಡ 2022ರ ಜ.13ರಿಂದ ಧಾರವಾಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 100ಕ್ಕೂ ಅಧಿಕ ವೈದ್ಯರು 2022ರ ಜು.13 ರಂದು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿ, ಬಸನಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದರಿಂದ, ಅವರನ್ನು 2022ರ ಅ.1ರಂದು ಸರ್ಕಾರ ವರ್ಗಾವಣೆ ಮಾಡಿ, ಅವರ ಹುದ್ದೆಗೆ ಡಾ. ಪಾಟೀಲ್ ಶಶಿ ಅವರನ್ನು ನಿಯೋಜಿಸಿತ್ತು.

    ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದ ಬಸನಗೌಡ, ಗ್ರೂಪ್ ಎ ವೃಂದದ ಅಧಿಕಾರಿಗಳನ್ನು ಕನಿಷ್ಠ 2 ವರ್ಷದವರೆಗೆ ವರ್ಗಾವಣೆ ಮಾಡುವಂತಿಲ್ಲ. ಕೇವಲ 9 ತಿಂಗಳಿಗೇ ತಮ್ಮನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಸ್ಥಳೀಯ ಸಂಸದರು ನನ್ನ ವರ್ಗಾವಣೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು. ವಿಚಾರಣೆ ನಡೆಸಿದ್ದ ಕೆಎಟಿ ಸರ್ಕಾರದ ಆದೇಶ ರದ್ದುಪಡಿಸಿತ್ತು. ಇದರಿಂದ, ಡಾ.ಪಾಟೀಲ್ ಶಶಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

    ಹೈಕೋರ್ಟ್ ಆದೇಶವೇನು?
    ಸರ್ಕಾರಿ ಅಧಿಕಾರಿಯ ವಿರುದ್ಧ ಆರೋಪ ಕೇಳಿಬಂದಾಗ, ಆ ಕುರಿತು ಸಂಬಂಧಪಟ್ಟ ಪ್ರಾಧಿಕಾರದಿಂದ ಆಂತರಿಕ ತನಿಖೆ ಅಥವಾ ವಿಚಾರಣೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಬೇಕು. ಆರೋಪ ಸಾಬೀತಾದಾಗ ಶಿಸ್ತುಕ್ರಮ ಜರುಗಿಸಬೇಕು. ಒಂದುವೇಳೆ, ಆರೋಪಿತ ಅಧಿಕಾರಿಯಿಂದ ತನಿಖೆಗೆ ಅಡ್ಡಿಯಾಗುವಂತ ಪರಿಸ್ಥಿತಿಯಿದ್ದರೆ ಅವರನ್ನು ಮಧ್ಯಂತರ ಅವಧಿಗೆ ಅಮಾನತು ಮಾಡಬಹುದು. ಆದರೆ, ಈ ಯಾವ ಪ್ರಕ್ರಿಯೆಯನ್ನೂ ಅನುಸರಿಸದೆ, ಏಕಾಏಕಿ ವರ್ಗಾವಣೆ ಮಾಡುವುದು ಪರಿಹಾರವಲ್ಲ.

    ಇಂತಹ ಬೆಳವಣಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸರ್ಕಾರ ತನ್ನ ಅಧಿಕಾರ ತ್ಯಜಿಸಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬಸನಗೌಡ ಅವರ ವರ್ಗಾವಣೆ ರದ್ದುಪಡಿಸಿದ್ದ ಕೆಎಟಿ ಆದೇಶವನ್ನು ಪುರಸ್ಕರಿಸಿತು. ಜತೆಗೆ, ಬಸನಗೌಡ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಬೇಕಾದ ಅಗತ್ಯತೆ ಕಂಡುಬಂದರೆ, ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಮುಕ್ತ ಅವಕಾಶ ಹೊಂದಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts