More

    ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ ಅನುಷ್ಠಾನಕ್ಕೆ ತರದ ಸರ್ಕಾರಕ್ಕೆ ತರಾಟೆ 

    ಬೆಂಗಳೂರು: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವವರ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ‘ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ- 2017’ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

    ರಾಜ್ಯದಲ್ಲಿ 2017ರ ಮಾನಸಿಕ ಆರೋಗ್ಯ ರಕ್ಷಣಾ ಕಾಯ್ದೆ ಜಾರಿಗೊಳಿಸದಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಎನ್. ಸಂಜಯ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

    ಈ ವೇಳೆ ರಾಜ್ಯ ಸರ್ಕಾರದ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕೇಂದ್ರ ಸರ್ಕಾರದ ಕಾಯ್ದೆ 2018ರ ಜ. 6ರಿಂದಲೇ ಜಾರಿಗೆ ಬಂದಿದೆ. ಆದರೆ, ರಾಜ್ಯದಲ್ಲಿ ಅದನ್ನು ಈವರೆಗೂ ಜಾರಿಗೆ ತರದಿ ರುವುದು ದುರದೃಷ್ಟಕರ. ಇದು ಅತ್ಯಂತ ಗಂಭೀರ ವಿಚಾರವಾಗಿದ್ದು, ಕಾಯ್ದೆ ಜಾರಿಗೆ ತರುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿತು.

    2017ರ ಕಾಯ್ದೆ ಪ್ರಕಾರ ರಾಜ್ಯ ಸರ್ಕಾರ 1 ತಿಂಗಳಲ್ಲಿ ರಾಜ್ಯ ಮಟ್ಟದ ಮಾನಸಿಕ ಆರೋಗ್ಯ ಪ್ರಾಧಿಕಾರ ರಚಿಸಬೇಕು. ಆ ಪ್ರಾಧಿಕಾರ 2 ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಮಾನಸಿಕ ಆರೋಗ್ಯ ಮರುಪರಿಶೀಲನಾ ಮಂಡಳಿಗಳನ್ನು ರಚನೆ ಮಾಡಬೇಕು ಎಂದು ಆದೇಶಿಸಿದ ಪೀಠ, ಪಾಲಿಸದಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ವಿರುದ್ಧ ಕಠಿಣ ಆದೇಶ ನೀಡಬೇಕಾಗುತ್ತದೆ ಎಂದು ಎಚ್ಚರಿಸಿ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿತು.

    ವೈದ್ಯಕೀಯ ಸಲಹೆಗಾರರ ಪ್ರಮಾಣಪತ್ರಕ್ಕೆ ಆಕ್ಷೇಪ

    ರಾಜ್ಯಮಟ್ಟದ ಮಾನಸಿಕ ಆರೋಗ್ಯ ಪ್ರಾಧಿಕಾರವನ್ನೇ ರಚನೆ ಮಾಡದೆ ಜಿಲ್ಲಾ ಮಟ್ಟದಲ್ಲಿ ಮಾನಸಿಕ ಆರೋಗ್ಯ ಪರಿಶೀಲನಾ ಮಂಡಳಿಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಹಾಗೂ ರಾಜ್ಯ ಸರ್ಕಾರದ ವೈದ್ಯಕೀಯ ಸಲಹೆಗಾರರು ಸಲ್ಲಿಸಿರುವ ಪ್ರಮಾಣಪತ್ರಕ್ಕೆ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ರಾಜ್ಯಮಟ್ಟದ ಪ್ರಾಧಿಕಾರವೇ ರಚನೆಯಾಗದೆ ಜಿಲ್ಲಾ ಮಂಡಳಿಗಳನ್ನು ಹೇಗೆ ರಚಿಸಲಾಗಿದೆ ಎಂದು ಪ್ರಶ್ನಿಸಿತು.

    ಕಾಯ್ದೆಯ ಅಂಶದಂತೆ ಅಧಿಕಾರೇತರ ಸದಸ್ಯರನ್ನು ಹೊರತುಪಡಿಸಿ ಉಳಿದ ಸದಸ್ಯರನ್ನು ಒಳಗೊಂಡಂತೆ ರಾಜ್ಯಮಟ್ಟದ ಮಾನಸಿಕ ಆರೋಗ್ಯ ಪ್ರಾಧಿಕಾರ ರಚಿಸಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿ ಸರ್ಕಾರದ ಆದೇಶ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ಪರಿಶೀಲಿಸಿದ ಪೀಠ, ಇದನ್ನು ಪೂರ್ಣ ಪ್ರಮಾಣದ ಪ್ರಾಧಿಕಾರವೆನ್ನಲು ಸಾಧ್ಯವಿಲ್ಲ. ಆದ್ದರಿಂದ ಇದನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts