More

    ಐ ಆಮ್ ವಿಲನ್!; ನೆಗೆಟಿವ್ ಪಾತ್ರಗಳತ್ತ ಹೀರೋಗಳು…

    ಬೆಂಗಳೂರು: ‘ಬರೀ ಹೀರೋ ಪಾತ್ರಗಳನ್ನೇ ಮಾಡಿದ್ದಾಯಿತು. ಒಮ್ಮೆಯಾದರೂ ನೆಗೆಟಿವ್ ಪಾತ್ರಗಳನ್ನು ಮಾಡಬೇಕು …’ ಎಂದು ಕೆಲವು ವರ್ಷಗಳ ಹಿಂದೆ ಆಸೆ ವ್ಯಕ್ತಪಡಿಸಿದ್ದರು ಶಿವರಾಜಕುಮಾರ್. ಅವರು ಇನ್ನೂ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿಲ್ಲವಾದರೂ, ಅಂಥದ್ದೊಂದು ಆಸೆಯಂತೂ ಅವರಿಗೆ ಇದ್ದೇ ಇದೆ. ಅವರೊಬ್ಬರೇ ಅಲ್ಲ, ಬಹಳಷ್ಟು ಹೀರೋಗಳು ಜೀವನದಲ್ಲಿ ಒಮ್ಮೆಯಾದರೂ ವಿಲನ್ ಆಗಿ ನಟಿಸಬೇಕು ಎಂದು ಆಸೆಪಟ್ಟಿರುತ್ತಾರೆ. ಅದಕ್ಕೆ ಕಾರಣ ಹೀರೋ ಪಾತ್ರಗಳಿಗಿಂತ ವಿಲನ್ ಪಾತ್ರಗಳಿಗೆ ರೇಂಜ್ ಜಾಸ್ತಿ ಇರುತ್ತದಂತೆ. ಹಾಗಂತ ಹಲವು ನಟರು ಈ ಹಿಂದೆ ಹೇಳಿಕೊಂಡಿದ್ದಾರೆ. ಹೀರೋ ಆದರೆ ಒಂದೇ ತರಹ ಇರಬೇಕು ಮತ್ತು ಚಿತ್ರದುದ್ದಕ್ಕೂ ಒಳ್ಳೆಯವನಾಗಿಯೇ ಕಾಣಿಸಿಕೊಳ್ಳಬೇಕು. ಆದರೆ, ವಿಲನ್ ಪಾತ್ರಗಳಿಗೆ ನಟನೆಗೆ ಅವಕಾಶಗಳಿರುತ್ತವೆ ಎಂಬುದು ಹಲವು ನಟರ ನಂಬಿಕೆ.

    ಈಗ್ಯಾಕೆ ಈ ವಿಷಯವೆಂದರೆ, ಕನ್ನಡದಲ್ಲಿ ಹೀರೋಗಳು ವಿಲನ್​ಗಳಾಗುತ್ತಿರುವ ಟ್ರೆಂಡ್ ಕ್ರಮೇಣ ಹೆಚ್ಚುತ್ತಿದೆ. ಮೂರು ವರ್ಷಗಳ ಹಿಂದೆ ಧನಂಜಯ್, ‘ಟಗರು’ ಚಿತ್ರದಲ್ಲಿ ‘ಡಾಲಿ’ ಎಂಬ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಾಗ, ಹಲವರು ಹುಬ್ಬೇರಿಸಿದ್ದರು. ಒಬ್ಬ ಹೀರೋ, ವಿಲನ್ ಆಗಿ ನಟಿಸುವುದು ಬಹಳ ರಿಸ್ಕಿ ಎಂದಿದ್ದರು. ಅದು ನಿಜ ಸಹ. ಒಬ್ಬ ಹೀರೋ ನೆಗೆಟಿವ್ ಪಾತ್ರದಲ್ಲಿ ಯಶಸ್ವಿಯಾಗಲಿಲ್ಲವೆಂದರೆ, ಆತ ಹೀರೋ ಆಗಿಯೂ ಮುಂದುವರೆಯುವುದು ಕಷ್ಟ, ವಿಲನ್ ಆಗಿ ಅವಕಾಶ ಸಿಗುವುದು ಕಷ್ಟ. ಹಾಗಾಗಿ ಬಹಳಷ್ಟು ಜನ ವಿಲನ್ ಆಗುವ ರಿಸ್ಕ್ ಬೇಡ ಎನ್ನುವಾಗ, ಧನಂಜಯ್ ಅಂಥದ್ದೊಂದು ರಿಸ್ಕ್ ತೆಗೆದುಕೊಂಡರು. ಡಾಲಿ ಪಾತ್ರದಲ್ಲಿ ಗೆದ್ದು, ಈಗ ಅವರು ಎರಡೂ ತರಹದ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಈ ವಿಷಯದಲ್ಲಿ ಎಲ್ಲರೂ ಯಶಸ್ವಿಯಾಗುತ್ತಾರೋ, ಇಲ್ಲವೋ ಹೇಳುವುದು ಕಷ್ಟ. ಆದರೆ, ಹಲವು ನಟರು ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಕಳೆದ ವಾರ ಬಿಡುಗಡೆಯಾದ ‘ಇನ್​ಸ್ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ರಘು ಮುಖರ್ಜಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಶಿಷ್ಯ’ ಮೂಲಕ ಹೀರೋ ಆಗಿದ್ದ ದೀಪಕ್, ‘ವೀರಂ’ ಚಿತ್ರದಲ್ಲಿ ಪ್ರಜ್ವಲ್​ಗೆ ವಿಲನ್ ಆಗಿದ್ದಾರೆ. ಇನ್ನು ‘ಬುದ್ಧಿವಂತ 2’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಚೆ ಈ ಪಾತ್ರವನ್ನು ಆದಿತ್ಯ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಆ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರಂತೆ. ಒಟ್ಟಿನಲ್ಲಿ ನಾಯಕನಷ್ಟೇ ಅಲ್ಲ ವಿಲನ್ ಆಗೋಕು ಐ ಆಮ್ ರೆಡಿ ಎನ್ನುತ್ತಿದ್ದಾರೆ ಸ್ಯಾಂಡಲ್​ವುಡ್ ನಟರು. ಈ ಪಟ್ಟಿಗೆ ಇನ್ನೇಷ್ಟು ಜನ ಸೇರ್ಪಡೆಯಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts