More

    ಬಿಬಿಎಂಪಿ ಚುನಾವಣೆ: ವಾರ್ಡ್​ ಮರುವಿಂಗಡಣೆಗೆ ತಕರಾರು ಅರ್ಜಿ ಏನಾಯ್ತು? ಇಲ್ಲಿದೆ ಮಾಹಿತಿ..

    ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಯನ್ನು ಆಕ್ಷೇಪಿಸಿ ಸಲ್ಲಿಕೆಯಾಗಿರುವ ತಕರಾರು ಅರ್ಜಿಗಳಿಗೆ ರಾಜ್ಯ ಚುನಾವಣಾ ಆಯೋಗ ಹಾಗೂ ಸರ್ಕಾರ ಆಕ್ಷೇಪಣೆ ಸಲ್ಲಿಸಿದ್ದು, ಪಾಲಿಕೆಗೆ ತುರ್ತಾಗಿ ಚುನಾವಣೆ ನಡೆಸುವ ಅಗತ್ಯ ಇರುವುದರಿಂದ ಅರ್ಜಿದಾರರ ಯಾವುದೇ ಮನವಿ ಪರಿಗಣಿಸಬಾರದು ಎಂದು ಕೋರಿಕೊಂಡಿವೆ. ಮತ್ತೊಂದೆಡೆ, ಹೈಕೋರ್ಟ್ ಸಹ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶ ಅಥವಾ ಮೌಖಿಕ ಸೂಚನೆ ನೀಡಲು ನಿರಾಕರಿಸಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

    ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆಕ್ಷೇಪಿಸಿ ವಕೀಲ ಎಸ್. ಇಸ್ಮಾಯಿಲ್ ಜಬಿವುಲ್ಲಾ, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ, ಮಾಜಿ ಕಾರ್ಪೊರೇಟರ್‌ಗಳಾದ ಬಿ.ಎನ್. ಮಂಜುನಾಥ್ ರೆಡ್ಡಿ, ಎನ್. ನಾಗರಾಜ್ ಮತ್ತಿತರರು ಸಲ್ಲಿಸಿರುವ 6 ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಪೀಠ ಮಂಗಳವಾರ ವಿಚಾರಣೆ ನಡೆಸಿತು.

    ಚುನಾವಣಾ ಆಯೋಗದ ಪರವಾಗಿ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಿದ ಹಿರಿಯ ವಕೀಲ ಕೆ.ಎನ್. ಫಣೀಂದ್ರ, 2020ರ ಸೆ.14ರಂದೇ ಅವಧಿ ಮುಗಿದಿರುವುದರಿಂದ ಬಿಬಿಎಂಪಿಗೆ ತುರ್ತಾಗಿ ಚುನಾವಣೆ ನಡೆಸಬೇಕಿದೆ. ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಕಾಲಮಿತಿ ಕಡಿಮೆ ಇರುವುದರಿಂದ ಆಯೋಗಕ್ಕೆ ಅನಿವಾರ್ಯ ಸ್ಥಿತಿ ಎದುರಾಗಿದೆ. ಈಗಾಗಲೇ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತಿದ್ದು, ಅದಕ್ಕಾಗಿ ಸಾರ್ವಜನಿಕ ಹಣ ವೆಚ್ಚ ಮಾಡಲಾಗಿದೆ. ಈ ಹಂತದಲ್ಲಿ ವಾರ್ಡ್ ಮರುವಿಂಗಡಣೆಯಲ್ಲಿ ಹಸ್ತಕ್ಷೇಪ ಮಾಡಿದರೆ ಅದರಿಂದ ಪಾಲಿಕೆ ಚುನಾವಣೆ ಮತ್ತಷ್ಟು ವಿಳಂಬವಾಗುವ ಜತೆಗೆ, ದೊಡ್ಡ ಪ್ರಮಾಣದ ಸಾರ್ವಜನಿಕ ಹಣ ವ್ಯರ್ಥವಾಗುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

    ವಾರ್ಡ್ ಮರುವಿಂಗಡಣೆ ಸಮರ್ಪಕವಾಗಿ ಮಾಡಲಾಗಿದೆ. ಬಿಬಿಎಂಪಿ ಕಾಯ್ದೆಯ ಸೆಕ್ಷನ್ 7 (1)(ಎ) ಮತ್ತು (ಬಿ) ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಒಂದು ವಾರ್ಡ್ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿಕೊಂಡಂತೆ ಮಾಡಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಗಳ ವಾರ್ಡ್‌ಗಳಲ್ಲಿ ಜನಸಂಖ್ಯೆಯ ಸರಾಸರಿ 35 ಸಾವಿರ ಇರುವಂತೆ ಸರ್ಕಾರ ನೋಡಿಕೊಂಡಿದೆ. ಈ ಹಂತದಲ್ಲಿ ನ್ಯಾಯಾಲಯ ಯಾವುದೇ ಆದೇಶ ನೀಡಿದರೂ ಚುನಾವಣೆಗೆ ಅಡ್ಡಿಯಾಗಲಿದೆ ಮತ್ತು ಆಯೋಗ ಮಾಡಿಕೊಂಡಿರುವ ಸಿದ್ಧತೆಗಳೆಲ್ಲವೂ ನಿಷ್ಪ್ರಯೋಜಕವಾಗಲಿದೆ. ಜತೆಗೆ, ಮೀಸಲಾತಿ ಅಧಿಸೂಚನೆ ಮೇಲೆ ಮಧ್ಯಂತರ ಆದೇಶ ನೀಡಿದರೆ, ಸುಪ್ರೀಂಕೋರ್ಟ್ ಕಳೆದ ಜು.28ರಂದು ನೀಡಿರುವ ಆದೇಶದ ಉಲ್ಲಂಘನೆ ಆಗಲಿದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

    ವೈಜ್ಞಾನಿಕ ವಿಧಾನದಲ್ಲೇ ಮರುವಿಂಗಡಣೆ: ಅರ್ಜಿ ಸಂಬಂಧ ಲಿಖಿತ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರ, ಅತ್ಯಂತ ವೈಜ್ಞಾನಿಕವಾಗಿ ಕ್ಷೇತ್ರಗಳ ಮರುವಿಂಗಡಣೆ ಮಾಡಲಾಗಿದೆ. 2011ರ ಜನಗಣತಿ ಆಧರಿಸಿ ವಾರ್ಡ್ ಜನಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಕ್ಷೇತ್ರಗಳ ಮರುವಿಂಗಡಣೆಯಲ್ಲಿ ಬಿಬಿಎಂಪಿ ಕಾಯ್ದೆಯ ಸೆಕ್ಷನ್ 7 ಉಲ್ಲಂಘನೆ ಆಗಿಲ್ಲ. ವಾರ್ಡ್‌ಗಳ ಭೌಗೋಳಿಕ ಪ್ರದೇಶಗಳ ಬಗ್ಗೆ ವೈಜ್ಞಾನಿಕ ಮತ್ತು ತರ್ಕಬದ್ಧ ಸಮೀಕ್ಷೆ ನಡೆಸಲಾಗಿದೆ. ವಾರ್ಡ್ ಕಚೇರಿ ಮತ್ತಿತರ ಸಂಪರ್ಕಗಳಿಗೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವಾರ್ಡ್‌ಗಳನ್ನು ರಚಿಸಲಾಗಿದೆ. ಅರ್ಜಿದಾರರ ಆಕ್ಷೇಪ, ವಿರೋಧಗಳೆಲ್ಲವೂ ಆಧಾರರಹಿತವಾಗಿವೆ. ಅರ್ಜಿದಾರರು ಸಲ್ಲಿಸಿರುವ ದಾಖಲೆ-ಪುರಾವೆಗಳು ಕಾನೂನು ಮಾನ್ಯತೆ ಹೊಂದಿಲ್ಲ. ಆದ್ದರಿಂದ, ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದೆ.

    ಆಕ್ಷೇಪವೇನು?: ಗೋವಿಂದರಾಜನಗರ, ಪದ್ಮನಾಭನಗರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಿದ್ದು, ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಪ್ರತಿ ವಾರ್ಡ್‌ಗೆ ಸರಾಸರಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಜತೆಗೆ, ಹಿಂದೆ ಇದ್ದ 7 ವಾರ್ಡ್‌ಗಳಲ್ಲಿ ಪ್ರಸಿದ್ಧ ಕೆ.ಆರ್. ಮಾರ್ಕೆಟ್ ವಾರ್ಡ್ ಕೈಬಿಟ್ಟು, ವಾರ್ಡ್‌ಗಳ ಸಂಖ್ಯೆಯನ್ನು 6ಕ್ಕೆ ಇಳಿಸಲಾಗಿದೆ. ಈ ಮೂಲಕ ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ರಚನೆಯಲ್ಲಿ ತಾರತಮ್ಯ ಎಸಗಲಾಗಿದೆ ಎನ್ನುವುದು ಅರ್ಜಿದಾರರೊಬ್ಬರ ಆರೋಪವಾಗಿದೆ.

    ಪದ್ಮನಾಭ ನಗರ, ಶಾಂತಿನಗರ ಹಾಗೂ ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರಗಳ ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆಯನ್ನೂ ಪ್ರಶ್ನಿಸಿ ತಕರಾರು ಅರ್ಜಿ ಸಲ್ಲಿಸಲಾಗಿದ್ದು, ವಾರ್ಡ್‌ಗಳ ಜನಸಂಖ್ಯೆ ನಿಗದಿಯಲ್ಲಿ ಏಕರೂಪತೆ ಕಾಯ್ದುಕೊಂಡಿಲ್ಲ. ಹಿಂದೆ ಕಡಿಮೆ ಜನಸಂಖ್ಯೆಯಿದ್ದ ವಾರ್ಡ್‌ಗಳಲ್ಲಿ ಸದ್ಯ ಹೆಚ್ಚಿಸಲಾಗಿದೆ. ಹೆಚ್ಚು ಜನಸಂಖ್ಯೆ ಇದ್ದ ವಾರ್ಡ್‌ಗಳಲ್ಲಿ ಜನಸಂಖ್ಯೆಯನ್ನು ತೀವ್ರ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ವಿಧಾನಸಭೆ ಕ್ಷೇತ್ರದ ಮತದಾರರನ್ನು ಬೇರೊಂದು ವಿಧಾನಸಭೆ ಕ್ಷೇತ್ರದ ವಾರ್ಡ್‌ಗಳ ಮತದಾರರಾಗಿ ಸೇರಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.

    ಖಾಸಗಿ ಶಾಲೆಯವರು ಬೆಚ್ಚಿಬೀಳುವಂಥ ಆಶ್ವಾಸನೆ ಕೊಟ್ಟ ಕೇಜ್ರಿವಾಲ್​: ಎಲ್ಲಿ, ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts