More

    ಹೇಮೆ ನಾಲೆ ಆಧುನೀಕರಣಕ್ಕೆ ಹಸಿರು ನಿಶಾನೆ; ತುಮಕೂರು ಬ್ರಾಂಚ್ ಕೆನಾಲ್ ಅಭಿವೃದ್ಧಿ ; 478 ಕೋಟಿ ರೂಪಾಯಿ ವೆಚ್ಚದ ಯೋಜನೆ

    ಗುಬ್ಬಿ : ತುಮಕೂರು ಹೇಮಾವತಿ ಶಾಖಾ ನಾಲೆ ಆಧುನೀಕರಣಕ್ಕೆ ಸರ್ಕಾರ ಅಧಿಕೃತ ನಿಶಾನೆ ತೋರಿದೆ. ಇದರೊಂದಿಗೆ ತೀವ್ರ ವಿರೋಧದ ನಡುವೆಯೂ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದ್ದ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಸ್ಥಗಿತಗೊಂಡಂತಾಗಿದೆ.

    ಸಮ್ಮಿಶ್ರ ಸರ್ಕಾರದಲ್ಲಿ ರಾಮನಗರಕ್ಕೆ ಹೇಮೆ ಹರಿಸಲು ರೂಪಿಸಿದ್ದ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಗೆ ಬಿಜೆಪಿ ವಿರೋಧಿಸಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷದ ಗೆಲುವಿಗೆ ಕಾರಣವಾಗಿತ್ತು. ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರೇ ಖುದ್ದು ನಾಲೆಗೆ ಭೇಟಿ ನೀಡಿ ನಮ್ಮ ಸರ್ಕಾರ ಬಂದರೆ ಎಕ್ಸ್‌ಪ್ರೆಸ್ ನಾಲೆ ರದ್ದುಪಡಿಸಿ ನಾಲೆ ಆಧುನೀಕರಣ ಮಾಡುವ ಭರವಸೆಯಿತ್ತಿದ್ದರು. ಅದರಂತೆ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಎಸ್‌ವೈ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೇಮೆ ನಾಲೆ ಆಧುನೀಕರಣಕ್ಕೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಈ ಯೋಜನೆ ಕೈಗೆತ್ತಿಕೊಳ್ಳಲು ಹಿನ್ನಡೆಯಾಗಿತ್ತು.

    ಮತ್ತೆ ಎಕ್ಸ್‌ಪ್ರೆಸ್ ಕೆನಾಲ್ ಸದ್ದು: ಬಿಜೆಪಿ ಸರ್ಕಾರ ಬಂದ ಬಳಿಕವೂ ಗುಬ್ಬಿ ತಾಲೂಕಿನ ಸುಂಕಾಪುರದ ಹೇಮೆ ಶಾಖಾ ನಾಲೆಯಿಂದ ಕುಣಿಗಲ್ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಕೆನಾಲ್ ಸದ್ದು ಮಾಡುತ್ತಲೇ ಇತ್ತು. ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್, ಸಂಸದ ಡಿ.ಕೆ.ಶಿವಕುಮಾರ್ ಸಮಯ ಸಿಕ್ಕಾಗಲೆಲ್ಲಾ ಈ ಯೋಜನೆಗಾಗಿ ಧ್ವನಿ ಎತ್ತುತ್ತಲೇ ಇದ್ದರಾದರೂ ಸಚಿವ ಜೆ.ಸಿ.ಮಾಧುಸ್ವಾಮಿ ಇದಕ್ಕೆ ಪ್ರತಿಯಾಗಿ ತಿರುಗೇಟು ನೀಡುವ ಮೂಲಕ ಜಿಲ್ಲೆಯ ಜನರ ಹಿತರಕ್ಷಣೆಗೆ ಕಟಿಬದ್ಧರಾಗಿದ್ದರು.

    ಸಂಸದ ಜಿ.ಎಸ್.ಬಸವರಾಜು ಹಾಗೂ ಬಿಜೆಪಿ, ಜೆಡಿಎಸ್ ಶಾಸಕರು ಸೇರಿ ಪಕ್ಷಾತೀತವಾಗಿ ಜಿಲ್ಲೆಯ ರಾಜಕಾರಣಿಗಳು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಕೈಬಿಡುವಂತೆ ಸಿಎಂ ಮೇಲೆ ಒತ್ತಡ ಹಾಕಿದ್ದರು. ಇದಕ್ಕೆ ಮಣಿದ ಬಿಎಸ್‌ವೈ ಅವರು ತುಮಕೂರು ಹೇಮಾವತಿ ಶಾಖಾ ನಾಲೆ ಮಹತ್ವಾಕಾಂಕ್ಷಿ ಯೋಜನೆಗೆ ಟೆಂಡರ್ ಕರೆಯಲು ಒಪ್ಪಿಗೆ ಕೊಟ್ಟಿದ್ದು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

    ರಾಮನಗರಕ್ಕೆ ಹೇಮೆ ಹರಿಸುವ ಹುನ್ನಾರ ?: ಗುಬ್ಬಿ ತಾಲೂಕಿನ ಸುಂಕಾಪುರದ ಬಳಿಯ ಶಾಖಾ ನಾಲೆಯ 70ನೇ ಕಿ.ಮೀ.ನಿಂದ ಕುಣಿಗಲ್‌ನ 166ನೇ ಕಿ.ಮೀ.,ಗೆ ಸಂಪರ್ಕ ಕಲ್ಪಿಸುವ ಪೈಪ್‌ಲೈನ್ ಕಾಮಗಾರಿಯ 614 ಕೋಟಿ ರೂ., ಮೊತ್ತದ ವಿವರವಾದ ಯೋಜನಾ ಅಂದಾಜಿ (ಡಿಪಿಆರ್)ಗೆ ಆಡಳಿತಾತ್ಮಕ ಅನುಮೋದನೆಯನ್ನು 2019, ಜೂನ್ 26 ರಂದು ಸಮ್ಮಿಶ್ರ ಸರ್ಕಾರ ನೀಡಿತ್ತು. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ (ಪೈಪ್‌ಲೈನ್) ಜಾರಿ ಹಿಂದೆ ಹೇಮೆ ನೀರನ್ನು ಮಾಗಡಿ, ರಾಮನಗರಕ್ಕೆ ಕೊಂಡೊಯ್ಯುವ ಹುನ್ನಾರ ಅಡಗಿದೆ ಎಂಬುದು ಜಿಲ್ಲೆಯ ರೈತರ ಹಾಗೂ ಜನಪ್ರತಿನಿಧಿಗಳ ಗುರುತರ ಆರೋಪವಾಗಿತ್ತು.

    478 ಕೋಟಿ ರೂ., ಯೋಜನೆ: ಜಿಲ್ಲೆಯಲ್ಲಿ ಹೇಮಾವತಿ ಯೋಜನೆಯನ್ನು 240 ಕಿ.ಮೀ.,ಗೆ ವಿನ್ಯಾಸಗೊಳಿಸಲಾಗಿದೆ. ಈವರೆಗೆ 187 ಕಿ.ಮೀ. ವರೆಗೆ ಕೆಲಸ ಮುಗಿದಿದ್ದು, ಯೋಜನೆಯ ಟೇಲ್‌ಎಂಡ್ (ಕೊನೆಭಾಗ) ಕುಣಿಗಲ್ ಆಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಯಚಂದ್ರ ಒತ್ತಾಸೆ ಮೇರೆಗೆ ಹೇಮೆ ಆರಂಭಿಕ 0-72 ಕಿ.ಮೀ. ನಾಲೆ ಆಧುನೀಕರಣ ಪೂರ್ಣಗೊಳಿಸಲಾಗಿತ್ತು. ನಾಗಮಂಗಲದ ಬಳಿ ಟಿಸಿಲೊಡೆಯುವ ತುಮಕೂರು ಶಾಖಾ ನಾಲೆ 35 ವರ್ಷಗಳಷ್ಟು ಹಳೆಯದಾಗಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಇದರಿಂದ ಜಿಲ್ಲೆಗೆ ನಿಗದಿಯಾಗಿರುವ 25 ಟಿಎಂಸಿ ನೀರನ್ನು ಪೂರ್ಣ ಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, 478.06 ಕೋ.ರೂ., ಮೊತ್ತದ ನಾಲೆ ಆಧುನೀಕರಣ ಯೋಜನೆಗೆ ಈಗ ಟೆಂಡರ್ ಕರೆದಿದ್ದು 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿಗದಿ ಪಡಿಸಲಾಗಿದೆ.

    ಹೇಮಾವತಿ ನಾಲಾ ಆಧುನೀಕರಣ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ಆಗಿದ್ದರೂ ಪುನಃ ನನೆಗುದಿಗೆ ಬಿದ್ದಿತ್ತು. ನಾಲಾ ಆಧುನೀಕರಣ ಕಾಮಗಾರಿಗೆ ಟೆಂಡರ್ ಕರೆಯಲು ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದ್ದು ಅದರಂತೆ ಟೆಂಡರ್ ಕರೆಯಲಾಗಿದೆ. ಹೇಮಾವತಿಗೆ ಎದುರಾಗಿದ್ದ ದೊಡ್ಡ ಗಂಡಾಂತರ ತಪ್ಪಿದೆ.
    ಕುಂದರನಹಳ್ಳಿ ರಮೇಶ್, ಅಭಿವೃದ್ಧಿ ರೆವ್ಯೆಲೂಷನ್ ಫೋರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts