More

    ಮೂತ್ರಕೋಶ ಸಂಬಂಧಿತ ಸಮಸ್ಯೆಗಳಿಗೆ ಸುಲಭ ಪರಿಹಾರ ಹೇಮಸಾಗರ

    ಬೆಂಗಳೂರು: ಸಾಮಾನ್ಯವಾಗಿ ಕಾಣಸಿಗುವ ಹಲವು ಸಸ್ಯಗಳು, ಗಿಡಗಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಆದರೆ, ಇಂದು ಅವುಗಳನ್ನು ನಿಖರವಾಗಿ ಗುರುತಿಸಿ, ಬಳಸಿಕೊಳ್ಳುವ ವ್ಯವಧಾನ ಕಡಿಮೆಯಾಗಿದೆ. ಇದಕ್ಕೆ ಒಳ್ಳೆ ಉದಾಹರಣೆ ಹೇಮಸಾಗರ.
    ಗಂಡುಕಾಳಿಂಗ, ಹಂಸಾಗರ, ಅಷ್ಟಿಭಸಕಾ, ಪರ್ಣವಿಜಿ, ಪರ್ಣಬೀಜ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುವ ಹೇಮಸಾಗರ ರಕ್ತಭೇದಿ, ಮೂತ್ರಕೋಶ ಸಂಬಂಧಿತ ಸಮಸ್ಯೆಗಳಿಗೆ ಸುಲಭ ಪರಿಹಾರ ಒದಗಿಸುತ್ತದೆ. ಕಾಲರಾಕ್ಕೆ ಅತ್ಯುತ್ತಮ ಮದ್ದು ಎನಿಸಿಕೊಂಡಿರುವ ಇದು ಕುಷ್ಠರೋಗ ಚಿಕಿತ್ಸೆಗೂ ಬಳಕೆಯಾಗುತ್ತದೆ.

    ಹೇಮಸಾಗರ ರಸಭರಿತವಾದ ಗಿಡವಾಗಿದ್ದು, ಗರಿಷ್ಠ 1.2 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದರ ಎಲೆಗಳು ಕೂಡ ಗರಿಷ್ಠ 10 ಸೆಂಟಿಮೀಟರ್ ಉದ್ದವಾಗಿರುತ್ತವೆ. ಇದು ಗಾಢ ಹಳದಿ ಬಣ್ಣದ ಹೂವುಗಳನ್ನು ಅರಳಿಸುತ್ತದೆ. ಶ್ರೀಲಂಕಾ, ಮ್ಯಾನ್ಮಾರ್, ಜಾವಾ ಹಾಗೂ ಭಾರತದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿ ನಾನಾ ಭಾಗಗಳಲ್ಲಿ ಯಥೇಚ್ಚವಾಗಿ ಬೆಳೆಯುತ್ತದೆ.

    ಹೇಮಸಾಗರದ ಎಲೆಗಳನ್ನು ಒಣಗಿಸಿ, ಪುಡಿ ಮಾಡಿಟ್ಟುಕೊಂಡರೆ ಗಾಯಗಳು, ವೃಣಗಳ ಚಿಕಿತ್ಸೆಗೆ ಬಳಸಬಹುದಾಗಿದೆ. ಇದರ ಎಲೆಯ ರಸ ತೆಗೆದು ಕುಡಿಸುವುದರಿಂದ ಅತಿಸಾರಭೇದಿ, ಭೇದಿ ಮತ್ತು ಮೂತ್ರಕೋಶದಲ್ಲಿನ ಕಲ್ಲುಗಳನ್ನು ಒಳಗಡೆಯೇ ಕರಗಿಸಲು ಸಾಧ್ಯವಾಗುತ್ತದೆ. ಇದರ ಎಲೆ ಮತ್ತು ಬೇರುಗಳನ್ನು ಮೂತ್ರಕೋಶ ಸಂಬಂಧಿತ ಸಮಸ್ಯೆಗಳ ಪರಿಹಾರಕ್ಕೆ ಬಳಸಲಾಗುತ್ತದೆ.

    ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಂಟಾಗುವ ನೋವು ಮತ್ತು ಎದೆಯ ಸಂಕಟ ನಿವಾರಿಸಲು ಇದರ ಡಿಕಾಕ್ಷನ್ ಅನ್ನು ಬಳಸಲಾಗುತ್ತದೆ. 20 ಎಂ.ಎಲ್. ಕರಗಿಸಿದ ಬೆಣ್ಣೆಯ ಜತೆ ಎಲೆಗಳ ರಸವನ್ನು ಸೇರಿಸಿ ಕೊಡುವುದರಿಂದ ಅತಿಸಾರಭೇದಿ, ಭೇದಿ ಬೇಗನೆ ನಿಯಂತ್ರಣಕ್ಕೆ ಬರುತ್ತವೆ. ಕಾಲರಾಕ್ಕೂ ಇದು ಉತ್ತಮ ಮದ್ದಾಗಿದೆ.

    ಇದರ ಎಲೆಯ ಪೋಲ್ಟೀಸ್ ಅನ್ನು ಎದೆಗೆ ಹಚ್ಚುವುದರಿಂದ ಕೆಮ್ಮು ಮತ್ತು ಶೀತ ಹಾಗೂ ನೆಗಡಿ ಗುಣವಾಗುತ್ತದೆ. ತಲೆನೋವು, ಗಂಟುಗಳ ನೋವಿಗೂ ಇದು ರಾಮಬಾಣ ಎನಿಸಿದೆ.

    ಸೂಚನೆ: ಪರಿಣತರ ಸಲಹೆ ಇಲ್ಲದೆ ಇಲ್ಲಿ ವಿವರಿಸಿರುವುದನ್ನು ವೈಯಕ್ತಿಕವಾಗಿ ಪ್ರಯತ್ನಿಸುವಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts