More

    ಹೇಮಾದ್ರಾಂಬ ತೆಪ್ಪೋತ್ಸವ ಅದ್ದೂರಿ

    ಬನ್ನೂರು: ವಹ್ನಿಪುರ ಎಂದೇ ಖ್ಯಾತಿ ಪಡೆದಿರುವ ಬನ್ನೂರಿನಲ್ಲಿ ಗ್ರಾಮದ ಪ್ರಧಾನ ದೇವತೆ ಹೇಮಾದ್ರಾಂಬ ದೇವಿಯ ತೆಪ್ಪೋತ್ಸವ ಮಾಕನಹಳ್ಳಿ ಗ್ರಾಮದ ಹೆಗ್ಗೆರೆಯಲ್ಲಿ ಸೋಮವಾರ ಸಾವಿರಾರು ಭಕ್ತರು ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

    ರಥೋತ್ಸವದ ಮಾರನೇಯ ದಿನ ನಡೆಯುವ ತೆಪ್ಪೋತ್ಸವವನ್ನು ಯಶಸ್ವಿಗೊಳಿಸುವ ಸಲುವಾಗಿ ಮುಂಜಾಗ್ರತೆಯಿಂದ ದೋಣಿಗಳನ್ನು ತಂದು ಪೂರ್ವಸಿದ್ಧತೆ ನಡೆಸಲಾಗಿತ್ತು. ಜತೆಗೆ ತೆಪ್ಪೋತ್ಸವದಲ್ಲಿ ದೇವರೊಟ್ಟಿಗೆ ಇತರರು ಹೋಗಲು ಬೇರೆ ಬೇರೆ ತೆಪ್ಪಗಳನ್ನು ತಯಾರಿಸಲಾಗಿತ್ತು.

    ಮಾಕನಹಳ್ಳಿಗೆ ದೇವಿಯನ್ನು ತರುತ್ತಿದ್ದಂತೆ ಸ್ಥಳೀಯ ಯುವಕರು ಬಣ್ಣ ಹಚ್ಚುವ ಮೂಲಕ ಓಕುಳಿಯಾಟ ಆಡಿದರು. ದೇವಿಗೆ ಹೆಗ್ಗೆರೆಯ ಬಳಿ ಪೂಜೆ ನಡೆಸುತ್ತಿದ್ದ ಸಂದರ್ಭದಲ್ಲಿ ಹೆಬ್ಬರೆಯ ನಿನಾದವು ಜನಮನಸೂರೆಗೊಂಡಿತು. ದೇವಿಯನ್ನು ಹೊರುವ ದೋಣಿಯನ್ನು ತಳಿರು, ತೋರಣಗಳಿಂದ ಅಲಂಕರಿಸಿದ್ದು, ಹೇಮಾದ್ರಾಂಬ ದೇವಿಯ ಅರ್ಚಕರು ಪೂಜೆ ಸಲ್ಲಿಸುತ್ತಿದ್ದಂತೆ ಅಲಂಕೃತಗೊಂಡ ಚಿನ್ನದ ಹೇಮಾದ್ರಾಂಬ ದೇವಿಯನ್ನು ದೋಣಿಯ ಮೇಲೆ ಕೂರಿಸಿ ಭಕ್ತರ ಜೈಕಾರದೊಂದಿಗೆ ಹೆಗ್ಗೆರೆಯಲ್ಲಿ ಸುತ್ತಿಸಲಾಯಿತು.

    ಹಿಂದಿನಿಂದಲೂ ಆಚರಣೆ ಮಾಡಿಕೊಂಡು ಬರುತ್ತಿರುವಂತೆ ಹೇಮಾದ್ರಾಂಬ ದೇವಿಯ ತೆಪ್ಪವು ಹನುಮನಾಳು ಬೀಡನಹಳ್ಳಿ, ಬುಗತಹಳ್ಳಿ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರಿಂದ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ನಾಲ್ಕು ದಿಕ್ಕಿನ ಕಡೆಗೂ ಸಾಗಿ ತನ್ನ ಸ್ವಸ್ಥಾನಕ್ಕೆ ಹಿಂದಿರುಗಿತು. ದೇವಿಯ ತೆಪ್ಪೋತ್ಸವವನ್ನು ಸಾವಿರಾರು ಜನರು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿ ಅಲ್ಲಲ್ಲಿ ಕುಳಿತು ದೇವಿಯ ದರ್ಶನ ಪಡೆದರು. ಈ ನಡುವೆ ಹೇಮಾದ್ರಾಂಬ ಭಕ್ತರು ಪ್ರಸಾದ ಮತ್ತು ಮಜ್ಜಿಗೆ ಪಾನಕವನ್ನು ನೀಡುತ್ತಿದ್ದರು.

    ನಂತರ ಮಾಕನಹಳ್ಳಿ ಹೆಗ್ಗೆರಯ ದೇವಿಯ ಮಂಟಪದಲ್ಲಿ ದೇವಿಯನ್ನಿಟ್ಟು ಮಾಕನಹಳ್ಳಿ ಗ್ರಾಮಸ್ಥರಿಂದ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ವಿದ್ಯುತ್ ದೀಪಾಲಂಕಾರದೊಂದಿಗೆ ಅಲಂಕಾರಗೊಂಡಿದ್ದ ಮಂಟಪವನ್ನು ಮಾಕನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ರಾತ್ರಿ ಬನ್ನೂರಿನಲ್ಲಿಯೂ ನಯನ ಕ್ಷತ್ರಿಯ ಜನಾಂಗದ ವತಿಯಿಂದ ವಿದ್ಯುತ್ ದೀಪಾಲಂಕಾರದೊಂದಿಗೆ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts