ಫ್ರಾನ್ಸಿನ ಚಕ್ರವರ್ತಿ ನೆಪೋಲಿಯನ್ ಒಮ್ಮೆ ದಾರಿಯಲ್ಲಿ ಸಾಗುತ್ತಿದ್ದಾಗ ಕೆಲವೊಂದಿಷ್ಟು ಕೆಲಸಗಾರರು ದೊಡ್ಡದಾದ ಕಲ್ಲೊಂದನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಕಲ್ಲು ಅತಿ ಹೆಚ್ಚು ಭಾರವಾಗಿದ್ದರಿಂದ ಅವರು ಅದನ್ನು ನಿಲ್ಲಿಸಲು ಬಹಳಷ್ಟು ಪ್ರಯತ್ನಪಟ್ಟು ಸಾಧ್ಯವಾಗದೆ ಸುಸ್ತಾಗಿದ್ದರು. ಕೆಲಸಗಾರರ ಪಕ್ಕದಲ್ಲಿ ಒಬ್ಬ ನಿಂತು ಮಾರ್ಗದರ್ಶನ ಮಾಡುತ್ತಿದ್ದ. ನೆಪೋಲಿಯನ್ ಆತನ ಬಳಿ ಹೋಗಿ, ‘ನೀನು ಯಾರು?’ ಎಂದು ಕೇಳಿದ. ಆತ ತಾನು ಈ ಕೆಲಸದ ಕಾಂಟ್ರಾ್ಯಕ್ಟರ್ ಎಂದ. ‘ಮತ್ತೆ ನೀನೇಕೆ ಅವರಿಗೆ ಸಹಾಯ ಮಾಡುತ್ತಿಲ್ಲ’ ಎಂದು ಕೇಳಿದ ನೆಪೋಲಿಯನ್. ‘ನಾನು ಕಾಂಟ್ರಾ್ಯಕ್ಟರ್ ಅವರೆಲ್ಲ ಕೆಲಸಗಾರರು.’ ಎಂದ ತಕ್ಷಣ ನೆಪೋಲಿಯನ್ ಕೆಲಸಗಾರರಿಗೆ ಸಹಾಯ ಮಾಡಿ ಕಲ್ಲನ್ನು ನಿಲ್ಲಿಸಿದ.
ಆಗ ಕಾಂಟ್ರಾ್ಯಕ್ಟರ್ ಕೇಳಿದ- ‘ನೀನ್ಯಾರು?’ ‘ನಾನು ನಿಮ್ಮ ದೇಶದ ಚಕ್ರವರ್ತಿ ನೆಪೋಲಿಯನ್.’ ಇದನ್ನು ಕೇಳಿ ಕಾಂಟ್ರಾ್ಯಕ್ಟರ್ಗೆ ಸ್ಪೂರ್ತಿ ಉಂಟಾಯಿತು. ಅಗತ್ಯವಿರುವಾಗ ಸಹಾಯ ಮಾಡುವ ಗುಣವೇ ಶ್ರೇಷ್ಠ ಗುಣ. ಚಕ್ರವರ್ತಿ ಎನ್ನುವ ಅಹಂಕಾರವನ್ನು ತೋರದೆ ಸಹಾಯ ಮಾಡಿದ ನೆಪೋಲಿಯನ್ ಬಗ್ಗೆ ಆತನಲ್ಲಿ ಹೆಮ್ಮೆ ಮೂಡಿತು. ತನ್ನ ನಡವಳಿಕೆ ಬೇಸರ ಮೂಡಿಸಿತು. ಇತರರಿಂದ ಸಹಾಯ ಬಯಸುವ ನಾವು ನಮ್ಮಲ್ಲಿ ಇತರರಿಗೆ ಸಹಾಯ ಮಾಡುವ ಗುಣವಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು.
‘ಜಗತ್ತು ಕನ್ನಡಿಯಿದ್ದಂತೆ, ನಿನ್ನನ್ನು ನಿನಗೆ ತೋರಿಸುತ್ತದೆ ನೀನು ಇದ್ದಂತೆಯೇ’. ಅಹಂಕಾರ ಎಂಬುದು ಬಿರುಸಾದ ಕೊಡಲಿಯ ಪೆಟ್ಟಿದ್ದಂತೆ. ಮರದ ನಾಶಕ್ಕೆ ಕಾರಣವಾಗುತ್ತದೆ. ನೆರವಿನ ಹಸ್ತ ಚಾಚುವವರು ಆಯಸ್ಕಾಂತದಂತೆ ಎಲ್ಲರನ್ನೂ ಸೆಳೆಯುತ್ತಾರೆ. ಕಷ್ಟಕ್ಕೆ ಸಿಲುಕಿರುವವರನ್ನು ಅದರಿಂದ ಪಾರು ಮಾಡುವುದು ಒಂದು ಅತ್ಯುತ್ತಮ ಸೇವೆ. ಕೆಲವರು ಸದಾ ದೀನ ದರಿದ್ರರ ಸೇವೆಯಲ್ಲಿ ತೊಡಗಿರುತ್ತಾರೆ. ಆ ಸೇವೆಗೆ ಎಂದೂ ರಜೆ ಬಯಸುವುದಿಲ್ಲ. ಕಷ್ಟದಲ್ಲಿ ಹೆಗಲಾಗುವ ಗುಣ ನೀಡುವ ಸಂತಸ, ಸಂತೃಪ್ತಿ ಯಾವ ಸಿರಿಸಂಪತ್ತು ಕೊಡಲು ಸಾಧ್ಯವಿಲ್ಲ. ಸಣ್ಣ ಬುದ್ಧಿಯಿರುವವರು ಇತರರಿಗೆ ಸಹಾಯ ಮಾಡಲು ಮುಂದಾಗುವುದಿಲ್ಲ. ವಿಶಾಲ ಹೃದಯದವರು ಹಿಂದೆ ಸರಿಯುವುದಿಲ್ಲ.
ದೇವರು ಪ್ರತಿದಿನ ಇತರರಿಗೆ ಸಹಾಯ ಮಾಡುವ ಹತ್ತಾರು ಅವಕಾಶಗಳನ್ನು ನೀಡುತ್ತಾನೆ. ಅವುಗಳನ್ನು ಬಳಸಿಕೊಳ್ಳುವುದು ನಮ್ಮ ಕರ್ತವ್ಯ. ಜಗತ್ತೇ ಒಂದು ನೆರವಿನ ಕೇಂದ್ರ. ಇಲ್ಲಿ ಪ್ರತಿಯೊಬ್ಬರಿಗೆ ಪ್ರತಿಯೊಬ್ಬರೂ ಬೇಕು. ಸಹಾಯದ ಮತ್ತೊಂದು ಬದಿಯಲ್ಲಿ ನಮ್ಮ ಅತ್ಯುತ್ತಮ ಬದುಕು ಅಡಗಿರುತ್ತದೆ. ಸಹಾಯ ಪಡೆದವರ ಹಾರೈಕೆ ಖಂಡಿತ ನಮಗೆ ಒಳ್ಳೆಯದನ್ನುಂಟು ಮಾಡುತ್ತದೆ. ನಮ್ಮ ಸುಖಮಯ ಜೀವನಕ್ಕೆ ಅನೇಕರ ಸಹಾಯವೂ ಕಾರಣವಾಗಿದೆ. ಇತರರಿಗೆ ನಾವೇನು ಕೊಡಲು ಸಾಧ್ಯವಿದೆಯೆಂದು ಯೋಚಿಸುವ ಕಾರಣವಿಲ್ಲ. ಏಕೆಂದರೆ ನಾವು ಸಾವಿರಾರು ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಿದೆ. ಬೇರೊಬ್ಬರಿಗೆ ಸಹಾಯ ಮಾಡಬೇಕೆಂಬುದು ಮನಸ್ಸಿನಲ್ಲಿ ಬಂದ ತಕ್ಷಣ ನಾವು ಹೊಸ ಮನುಷ್ಯರೇ ಆಗಿಬಿಡುತ್ತೇವೆ. ಅಷ್ಟೇ ಅಲ್ಲ ಅದು ಸಾರ್ಥಕ ಬದುಕಿಗೊಂದು ಹೊಸ ಮುನ್ನುಡಿಯನ್ನೇ ಬರೆದು ಬಿಡುತ್ತದೆ. ಹಾಗಾದರೆ ಹೊಸ ಮುನ್ನುಡಿಗೆ ಮುಂದಾಗೋಣವಲ್ಲವೇ?
(ಲೇಖಕಿ ಆಂಗ್ಲಭಾಷಾ ಉಪನ್ಯಾಸಕಿ)