More

    ಹೇಗಿದ್ದ ಹಿರೇಕೆರೆ ಹೆಂಗಾಯ್ತು ನೋಡ್ರಿ!

    ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ

    ವಿವಿಧ ಮಠಾಧೀಶರು, ಸಂಘ-ಸಂಸ್ಥೆಯವರು, ರೈತರು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಪಟ್ಟಣದ ಹಿರೇಕೆರೆ ಹೂಳೆತ್ತುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗಿತ್ತು. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆರೆಯು ಕುಡುಕರ ಅಡ್ಡೆಯಾಗಿದೆ. ಸ್ವಚ್ಛತೆ ಇಲ್ಲದೆ ಬಯಲು ಶೌಚಗೃಹವಾಗಿ ಮಾರ್ಪಟ್ಟಿದೆ.

    ಹಿರೇಕೆರೆಯು 39 ಎಕರೆ ವಿಸ್ತೀರ್ಣ ಹೊಂದಿದೆ. ಕೆರೆ ಸಂಪೂರ್ಣ ನಿರ್ಲಕ್ಷಕ್ಕೊಳಗಾಗಿರುವುದನ್ನು ಗಮನಿಸಿದ ಸ್ಥಳೀಯ ರೈತರು ಹಾಗೂ ನೆಲ-ಜಲ ಸಂರಕ್ಷಣಾ ಸಮಿತಿಯವರು ಸ್ವಯಂ ಪ್ರೇರಣೆಯಿಂದ 2019 ರಲ್ಲಿ ಕೆರೆಯ ಹೂಳೆತ್ತುವ ಕಾರ್ಯ ಕೈಗೊಂಡಿದ್ದರು. ರೈತರ ಕಾರ್ಯಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬಂದಿದ್ದವು. ಕೆರೆ ಹೂಳೆತ್ತುವ ಸಂದರ್ಭದಲ್ಲಿ ಅಂದಿನ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿ ಕೆರೆ ಅಭಿವೃದ್ಧಿಗೆ ಸಹಕರಿಸುವುದಾಗಿ ಆಶ್ವಾಸನೆ ನೀಡಿತ್ತು. ಆದರೆ, ಇಲ್ಲಿಯವರೆಗೂ ನಯಾ ಪೈಸೆ ಅನುದಾನ ನೀಡಿಲ್ಲ.

    ಕೆರೆಯ ಸುತ್ತಲು ದನಕರುಗಳು: ಹಿರೇಕೆರೆಯ ದಂಡೆಯ ಮೇಲೆ ದನಕರುಗಳನ್ನು ಮೇಯಲು ಬಿಡಲಾಗುತ್ತಿದೆ. ಒಂದು ವೇಳೆ ಆಯತಪ್ಪಿ ಕೆರೆಗೆ ಬಿದ್ದರೆ ಅಪಾಯ ಖಚಿತವಾಗಿದೆ. ಕೆರೆ ದಂಡೆ ಮೇಲೆ ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದು, ವಾಯು ವಿಹಾರಕ್ಕೆ ಹೋಗುವವರು ತಲೆ ತಗ್ಗಿಸುವಂತಾಗಿದೆ. ಕೆರೆಗೆ ತಡೆಗೋಡೆ ನಿರ್ವಿುಸಿಲ್ಲ. ಯಾವುದೇ ರೀತಿಯ ನಾಮಫಲಕ ಅಳವಡಿಸಿಲ್ಲ. ತಂತಿ ಬೇಲಿಯೂ ಇಲ್ಲ.

    ಕುಡುಕರ ಅಡ್ಡೆಯಾದ ಕೆರೆ ದಂಡೆ: ಸಂಜೆಯಾದರೆ ಸಾಕು, ಕರೆ ದಂಡೆ ಅನೈತಿಕ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತದೆ. ಎಲ್ಲೆಂದರಲ್ಲಿ ಬಿದ್ದ ಖಾಲಿ ಬಿಯರ್ ಬಾಟಲ್, ಮದ್ಯದ ಟೆಟ್ರಾಪ್ಯಾಕ್, ನೀರಿನ ಪ್ಯಾಕೆಟ್, ಪ್ಲಾಸ್ಟಿಕ್ ಲೋಟಾಗಳು, ಗುಟಕಾ ಚೀಟುಗಳು ಇದಕ್ಕೆ ಸಾಕ್ಷಿ.

    ಪುಂಡರ ಉಪಟಳ: ಕೆರೆ ದಂಡೆಯ ಮೇಲೆ ಕುಳಿತು ಕುಡಿದು, ಕೆರೆ ದಂಡೆಗೆ ಹೊಂದಿಕೊಂಡಿರುವ ಕೋಡಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ, ರೈತ ಸಂಪರ್ಕ ಕೇಂದ್ರ, ಸಮುದಾಯ ಭವನದ ಸುತ್ತಲು ಬಾಟಲಿಗಳನ್ನು ಒಡೆದು ಹಾಕುತ್ತಿದ್ದಾರೆ. ಇದರಿಂದ ಶಿಕ್ಷಕರಿಗೆ ನಿತ್ಯ ಒಡೆದ ಬಾಟಲಿ ಗಾಜುಗಳನ್ನು ಆರಿಸುವುದೆ ಕೆಲಸವಾಗಿದೆ. ಶಾಲಾ ಮೈದಾನದಲ್ಲಿ ಮಕ್ಕಳು ಆಟವಾಡಲು ಹಿಂಜರಿಯುವಂತಾಗಿದೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಕಂಡು ಕಾಣದಂತೆ ವರ್ತಿಸುತ್ತಿದೆ.

    ಐತಿಹಾಸಿಕ ಹಿರೇಕೆರೆ ಅಭಿವೃದ್ಧಿಗೆ ಸರ್ಕಾರದಿಂದ ಹಣ ಬಿಡುಗಡೆ ಮಾಡಬೇಕು. ಕೆರೆಗೆ ನೀರು ತುಂಬಿಸುವ ಕಾರ್ಯವಾಗಬೇಕು. ಕೆರೆ ಸುತ್ತಲೂ ತಂತಿ ಬೇಲಿ ಹಾಕಿ, ಪಾದಚಾರಿ ರಸ್ತೆ, ಉದ್ಯಾನ ನಿರ್ವಣಕ್ಕೆ ಮುಂದಾಗಬೇಕು. ಕುಡುಕರ ಹಾವಳಿ ವಿಪರೀತವಾಗಿದ್ದು, ತಕ್ಷಣ ಅದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಮುಂದಾಗಬೇಕು.

    |ಎಂ.ಎಸ್. ಧಡೇಸೂರಮಠ, ನರೇಗಲ್ಲ ನಿವಾಸಿ

    ಹಿರೇಕೆರೆ ಸುತ್ತಲು ತಡೆಗೋಡೆ, ತಂತಿ ಬೇಲಿ ಹಾಕಲು ಸಣ್ಣ ನೀರಾವರಿ ಇಲಾಖೆ ಹಾಗೂ ಮೇಲಧಿಕಾರಿಗಳೊಂದಿಗೆ ರ್ಚಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆರೆ ದಂಡೆ ಮೇಲೆ ಚಿಕ್ಕ ಮಕ್ಕಳು ಹಾಗೂ ದನ ಕರುಗಳನ್ನು ಬಿಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

    |ಮಹೇಶ ನಿಡಶೇಶಿ ನರೇಗಲ್ಲ ಪ.ಪಂ. ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts