More

    ಭಾರಿ ಗಾಳಿಮಳೆಗೆ ತತ್ತರಿಸಿದ ಕರಾವಳಿ

    ಮಂಗಳೂರು/ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದ್ದು, ಬುಧವಾರವೂ ಬಲವಾದ ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಅಲ್ಲಲ್ಲಿ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.
    ಮಳೆ ನಿರಂತರ ಮುಂದುವರಿದಿರುವುದರಿಂದ ಹವಾಮಾನ ಇಲಾಖೆ ಗುರುವಾರದವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಬಳಿಕ ಆರೆಂಜ್ ಅಲರ್ಟ್ ಇದ್ದರೂ, ಮತ್ತೆ ಬದಲಾಗುವ ಸಾಧ್ಯತೆಯಿದೆ.

    ಉಭಯ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ, ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಪ್ರವಾಹ ಭೀತಿ ಉಂಟಾಗಿದೆ. ನದಿ ಪಾತ್ರದ ಮನೆಗಳವರು ಎಚ್ಚರಿಕೆ ವಹಿಸಬೇಕು, ತುರ್ತು ಸಂದರ್ಭ ಜಿಲ್ಲಾ ಸಹಾಯವಾಣಿ 1077 ಸಂಪರ್ಕಿಸಬಹುದು ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.
    ಉಡುಪಿ ಜಿಲ್ಲೆಯ ಹಲವೆಡೆ ನೆರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆ.6, 9 ಮತ್ತು 10ರಂದು ರೆಡ್ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ನದಿ, ಸಮುದ್ರ ತೀರಗಳಿಗೆ ತೆರಳದಂತೆ ಎಚ್ಚರಿಕೆ ನೀಡಿದೆ.

    ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ, ಹಳೆಯ ಸೇತುವೆ ಮುಳುಗಡೆಯಾಗಿದೆ. ಸುಬ್ರಹ್ಮಣ್ಯ- ಪುತ್ತೂರು ರಸ್ತೆಯ ದರ್ಪಣ ತೀರ್ಥ ಸೇತುವೆ ಮುಳುಗಡೆಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತಡೆಯಾಯಿತು. ಕುಂದಾಪುರ-ಬೈಂದೂರು ಭಾಗದಲ್ಲಿ ಭಾರಿ ಮಳೆಯಿಂದ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಹಲವು ಪ್ರದೇಶಗಳು ನೆರೆಯಿಂದ ಆವೃತಗೊಂಡಿವೆ.

    ಅಬ್ಬರಿಸುತ್ತಿರುವ ಕಡಲು: ಸಮುದ್ರದಿಂದ ತೀರಡೆದೆಡೆ ಬಲವಾದ ಗಾಳಿ ಬೀಸುತ್ತಿದ್ದು, ಭಾರಿ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಪರಿಣಾಮ ತೀರ ಪ್ರದೇಶದ ನಿವಾಸಿಗಳು ಆತಂಕದಲ್ಲಿದ್ದಾರೆ. ಪಣಂಬೂರು- ಬೈಕಂಪಾಡಿ ತೀರದಲ್ಲಿ ಸಮುದ್ರ ಮುಂದಕ್ಕೆ ಬಂದಿರುವುದರಿಂದ ಹಲವು ತೆಂಗಿನ ಮರಗಳು ಕಡಲ ಪಾಲಾಗಿವೆ. ಉಳ್ಳಾಲದಲ್ಲೂ ಕಲ್ಲಿನ ತಡೆಗೋಡೆ ಮೀರಿ ಕಡಲು ಅಬ್ಬರಿಸುತ್ತಿದೆ. ಪಡುಬಿದ್ರಿ ನಡಿಪಟ್ಣ ಬಳಿ ಕಡಲ್ಕೊರೆತ ತೀವ್ರಗೊಂಡಿದ್ದು, ಬಂಡೆಕಲ್ಲುಗಳು ಕಡಲಗರ್ಭ ಸೇರಿವೆ.

    ನೇತ್ರಾವತಿ ನದಿನೀರಿನ ಮಟ್ಟ ಏರಿಕೆ: ಬಂಟ್ವಾಳದಲ್ಲಿ ನೇತ್ರಾವತಿ ನದಿನೀರಿನ ಮಟ್ಟ ಬುಧವಾರ ಬೆಳಗ್ಗೆ 7.5 ಮೀಟರ್ ಇದ್ದರೆ, ಸಾಯಂಕಾಲ ವೇಳೆ 7.1 ಇತ್ತು. ರಾತ್ರಿ ಮಳೆ ಸುರಿದರೆ ಗುರುವಾರ ಬೆಳಗ್ಗೆ ಮತ್ತೆ ಏರಿಕೆಯಾಗುವ ಸಂಭವವಿದೆ. ಅಪಾಯದ ಮಟ್ಟ 8.5 ಮೀಟರ್. ಉಪ್ಪಿನಂಗಡಿಯಲ್ಲಿ ಬುಧವಾರ 28.5 ಮೀ. ತಲುಪಿದ್ದು, ಅಪಾಯದ ಮಟ್ಟ 30 ಮೀಟರ್.

    ಉಡುಪಿ ಡಿಸಿಗೆ ಸಿಎಂ ದೂರವಾಣಿ ಕರೆ
    ಉಡುಪಿ ಜಿಲ್ಲೆಯಲ್ಲಿ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಂಭವಿಸಿರುವ ಹಾನಿ ಮತ್ತು ಪ್ರಸ್ತುತ ಸ್ಥಿತಿಗತಿಯ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರೊಂದಿಗೆ ಬುಧವಾರ ಸಾಯಂಕಾಲ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದರು. ಮನೆ, ಬೆಳೆ, ಜಾನುವಾರು ಮತ್ತು ಜೀವಹಾನಿ ಕುರಿತು ವಿವರ ಪಡೆದ ಸಿಎಂ, ಶೀಘ್ರ ಪರಿಹಾರ ವಿತರಿಸುವಂತೆ ಸೂಚಿಸಿದರು. ತುರ್ತು ನೆರವಿನ ಅಗತ್ಯವಿದ್ದಲ್ಲಿ ಗಮನಕ್ಕೆ ತರುವಂತೆಯೂ ತಿಳಿಸಿದರು. ಕಂದಾಯ ಸಚಿವ ಅಶೋಕ್ ಕೂಡ ಜಿಲ್ಲಾಧಿಕಾರಿಗೆ ಕರೆ ಮಾಡಿ ಸಮಾಲೋಚನೆ ನಡೆಸಿದ್ದಾರೆ.

    ಮಹಿಳೆ ನೀರುಪಾಲು: ಉಡುಪಿಯ ನಿಟ್ಟೂರು-ಹನುಮಂತ ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಅಂಬಾಗಿಲು ಪುತ್ತೂರು ಗ್ರಾಮದ ಕಕ್ಕುಂಜೆ ನಿವಾಸಿ ಗುಲಾಬಿ(60) ಮೃತಪಟ್ಟವರು. ಭಾರಿ ಮಳೆ ಹಿನ್ನೆಲೆಯಲ್ಲಿ ಕಾಲು ಜಾರಿ ಮಳೆ ನೀರು ತುಂಬಿ ಹರಿಯುತ್ತಿದ್ದ ರಸ್ತೆ ಬದಿಯ ಚರಂಡಿಗೆ ಬಿದ್ದು, ನೀರಿನಲ್ಲಿ ಸಿಲುಕಿ ಸಾವಿಗೀಡಾಗಿದ್ದಾರೆ.

    ಕೊಲ್ಲೂರಿನಲ್ಲಿ ಅತಿ ಹೆಚ್ಚು: ಬುಧವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ಅತಿಹೆಚ್ಚು 200 ಮಿ.ಮೀ. ಮಳೆ ಸುರಿದಿದೆ. ಇದೇ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಸರಾಸರಿ 88.3 ಮಿ.ಮೀ. ಮಳೆಯಾಗಿದೆ. ಬುಧವಾರ ಬೆಳಗ್ಗಿನಿಂದ ಸಾಯಂಕಾಲದವರೆಗೆ ಬೆಳ್ತಂಗಡಿಯ ಕಣಿಯೂರಿನಲ್ಲಿ 117.5 ಮಿ.ಮೀ. ಮಳೆಯಾಗಿದೆ ಎಂದು ಕೆಎಸ್‌ಡಿಎಂಸಿ ವರದಿ ತಿಳಿಸಿದೆ. ಉಡುಪಿ 32, ಕಾರ್ಕಳ 52, ಕುಂದಾಪುರ 64 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ 49 ಮಿ.ಮೀ. ಸರಾಸರಿ ಮಳೆಯಾಗಿದೆ.

    ವಿದ್ಯುತ್ ವ್ಯತ್ಯಯ: ಭಾರಿ ಗಾಳಿಗೆ ಉಭಯ ಜಿಲ್ಲೆಗಳಲ್ಲಿ ಸಾವಿರಾರು ಅಡಕೆ ಮರ ಸಹಿತ ಅಪಾರ ಕೃಷಿ ಹಾನಿ ಸಂಭವಿಸಿದೆ. ಮರ ಬಿದ್ದು ನೂರಾರು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ಕಂಬಗಳು ನೆಲಕ್ಕುರುಳಿವೆ. ಮಂದಾರ್ತಿ ಬಳಿಯ ಆವರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಂಗೋಡ್ಲು ಕೃಷಿಕ ಬಾಲಕೃಷ್ಣ ಶೆಟ್ಟಿ ಎಂಬವರ ತೋಟದ 480ಕ್ಕೂ ಅಧಿಕ ಅಡಕೆ ಮರಗಳು ಧರೆಗುರುಳಿವೆ. ಕೊಕ್ಕಡದ ಪುಟ್ಟಕೋಡಿ ಬಾಬು ಎಂಬುವರ ಮನೆಯ ಛಾವಣಿ ಹಾರಿ ಹೋಗಿದೆ. ವಿಟ್ಲ ಕನ್ಯಾನ ರಸ್ತೆಯ ಬೈರಿಕಟ್ಟೆಯಲ್ಲಿ ರಸ್ತೆಗೆ ಮರ ಬಿದ್ದು ಎರಡು ವಿದ್ಯುತ್ ಕಂಬ ಮುರಿದಿದೆ. ಮಂಗಳೂರಿನ ಅಶೋಕನಗರದ ಅಂಗನವಾಡಿ ಬಳಿ ಕಮಲಾಕ್ಷಿ ಎಂಬವರ ಮನೆಯ ಮಾಡಿನ ಹೆಂಚು ಬಿದ್ದು, ಹಾನಿ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts