More

    ನಾಳೆಯೂ ಭಾರಿ ಮಳೆ ರೆಡ್‌ ಅಲರ್ಟ್‌-ಕೆಲ ತಾಲೂಕಿನ ಶಾಲೆಗಳಿಗೆ ರಜೆ

    ಕಾರವಾರ: ಜಿಲ್ಲೆಯಲ್ಲಿ ಅಬ್ಬರದ ಮಳೆ ಕಡಿಮೆಯಾಗಿದ್ದರೂ ನಿರಂತರವಾಗಿ ಹದವಾಗಿ ಮಳೆ ಸುರಿಯುತ್ತಿದೆ. ನೆರೆಯ ಪ್ರಭಾವ ಇಳಿಕೆಯಾಗಿದೆ. ಆದರೆ, ಜು.26 ರಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. 204 ಮಿಮೀಗಿಂತ ಹೆಚ್ಚು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಜು.27 ರಂದು ಆರೇಂಜ್ ಹಾಗೂ ನಂತರ ಯೆಲ್ಲೋ ಅಲರ್ಟ್ ನೀಡಲಾಗಿದೆ.

    ಕಾರವಾರ, ಜೊಯಿಡಾ, ಹಳಿಯಾಳ ಭಾಗಗಳಲ್ಲಿ ಜು.26 ರಂದು ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜ್‌ಗಳಿಗೆ ರಜೆ ಘೋಷಿಸಲಾಗಿದೆ. ಉಳಿದ ತಾಲೂಕುಗಳಲ್ಲಿ ಅಲ್ಲಿನ ಮಳೆಯ ಪರಿಸ್ಥಿತಿಯನ್ನು ಗಮನಿಸಿ ರಜೆಯ ಬಗ್ಗೆ ನಿರ್ಧರಿಸುವಂತೆ ತಹಸೀಲ್ದಾರರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

    30 ಮನೆಗಳಿಗೆ ಹಾನಿ
    ಮಳೆಯಿಂದ ಹೊನ್ನಾವರದಲ್ಲಿ 2 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮುಂಡಗೋಡಿನಲ್ಲಿ-10, ಹಳಿಯಾಳ-5, ಭಟ್ಕಳ-ದಾಂಡೇಲಿಯಲ್ಲಿ ತಲಾ-3, ಜೊಯಿಡಾ, ಕುಮಟಾದಲ್ಲಿ ತಲಾ-2, ಸಿದ್ದಾಪುರ-ಹೊನ್ನಾವರದಲ್ಲಿ ತಲಾ-1 ಮನೆಗಳಿಗೆ ಅಲ್ಪ ಹಾನಿಯಾಗಿದೆ. ಕುಮಟಾದಲ್ಲಿ 1, ಹೊನ್ನಾವರದಲ್ಲಿ 5 ಕಾಳಜಿ ಕೇಂದ್ರಗಳು ಮುಂದುವರಿದಿದ್ದು, ಅಲ್ಲಿ 191 ಜನ ಆಶ್ರಯ ಪಡೆದಿದ್ದಾರೆ.
    ದೇವಳಮಕ್ಕಿಯಲ್ಲಿ ಅಧಿಕ
    ಮಂಗಳವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ ಕಾರವಾರದ ದೇವಳಮಕ್ಕಿಯಲ್ಲಿ ಅತ್ಯಧಿಕ ಮಳೆಯಾಗಿದೆ. 161 ಮಿಮೀ ಮಳೆಯಾಗಿದೆ. ಕೆರವಡಿಯಲ್ಲಿ 155.5, ಹೊನ್ನಾವರ ನಗರ ಬಸ್ತಿಕೇರಿಯಲ್ಲಿ 142, ಭಟ್ಕಳ ಹೆಬಳೆಯಲ್ಲಿ 131.5, ಮಾವಿನಕುರ್ವೆಯಲ್ಲಿ 128.5, ಮುಂಡಳ್ಳಿಯಲ್ಲಿ 128, ಬೆಂಗ್ರೆ ಹಾಗೂ ಹಡಿನಬಾಳದಲ್ಲಿ 124.5,ಬೆಳಕೆಯಲ್ಲಿ 123, ಕಾರವಾರ ಮುಡಗೇರಿಯಲ್ಲಿ 124, ಮಿಮೀ ಮಳೆಯಾಗಿದೆ.
    ಅಂಕೋಲಾ ತಾಲೂಕಿನಲ್ಲಿ ಸರಾಸರಿ-53, ಭಟ್ಕಳ-131.2, ದಾಂಡೇಲಿ-64.4, ಹಳಿಯಾಳ-35.2, ಹೊನ್ನಾವರ-108.3, ಜೊಯಿಡಾ-98.4, ಕಾರವಾರ-92, ಕುಮಟಾ-71.8, ಮುಂಡಗೋಡ-27.4, ಸಿದ್ದಾಪುರ-85.4, ಶಿರಸಿ-62.5, ಯಲ್ಲಾಪುರ-84.2 ಮಿಮೀ ಮಳೆಯಾಗಿದೆ.
    ಗದ್ದೆಯಲ್ಲಿ ಹೂಳು
    ಭಾರಿ ಮಳೆಯಿಂದ ದೇವಳಮಕ್ಕಿಯ ಹಳ್ಳ ತುಂಬಿ ವಿಶ್ರಾಮ ಗುನಗಿ ಅವರ ಗದ್ದೆಗೆ ನುಗ್ಗಿದೆ. ಪರಿಣಾಮ ಕೆಲವೇ ದಿನಗಳ ಹಿಂದೆ ನಾಟಿ ಮಾಡಿದ ಸುಮಾರು 1 ಎಕರೆ ಗದ್ದೆಯ ತುಂಬ ತೆನೆ ಮಣ್ಣು (ಮರಳು) ತುಂಬಿ ಬಿದ್ದಿದೆ. ನಾಟಿ ಮಾಡಿದ ಭತ್ತದ ಸಸಿಗಳಿಗೆ ಹಾನಿಯಾಗಿದೆ.
    ಜಾರಿ ಬಿದ್ದ ಸವಾರರು:
    ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಾಲೂಕಿನ ಬಿಣಗಾ-ಸಂಕ್ರುಬಾಗ ನಡುವೆ ಯಾವುದೋ ವಾಹನದಿಂದ ಆಯ್ಲ್ ಸೊರಿಕೆಯಾಗಿದ್ದು, ಹಲವು ಬೈಕ್ ಸವಾರರು ಜಾರಿ ಬಿದ್ದ ಘಟನೆ ಮಂಗಳವಾರ ನಡೆಯಿತು. ಬೈಕ್‌ಗಳು ಜಾರುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡಿದೆ.
    …..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts