More

    ಹಿಂಗಾರು ಬೆಳೆಗೆ ಆಲಿಕಲ್ಲೇಟು: ರಾಜ್ಯದಲ್ಲಿ ಭಾರಿ ಮಳೆ, ಕೊಚ್ಚಿಹೋಯ್ತು ಫಸಲು, ಅನ್ನದಾತ ಕಂಗಾಲು

    ಬೆಂಗಳೂರು: ರಾಜ್ಯದ ವಿವಿಧೆಡೆ ಅಕಾಲಿಕ ಮಳೆಯ ಆರ್ಭಟ ತೀವ್ರಗೊಂಡಿದ್ದು, ಹಿಂಗಾರು ಕೊಯ್ಲಿಗೆ ಸಿದ್ಧತೆ ನಡೆಸಿದ್ದ ರೈತರಿಗೆ ಸಂಕಷ್ಟ ತಂದಿದೆ. ಶುಕ್ರವಾರ ಹಾಸನ, ಕೊಡಗು ಜಿಲ್ಲೆಯ ಹಲವೆಡೆ ಹಿಮಪಾತದಂತೆ ಆಲಿಕಲ್ಲು ಸುರಿದರೆ, ಚಿತ್ರದುರ್ಗ, ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಪರಿಣಾಮ ಕೈಗೆ ಬಂದ ಬೆಳೆ ಹಾನಿಗೀಡಾಗಿದ್ದ್ದಂದಾಗಿ ಅನ್ನದಾತರು ಕಂಗಾಲಾಗಿದ್ದಾರೆ. ಇನ್ನೂ 3 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಬಹುತೇಕ ಕಡೆ ಹಿಂಗಾರು ಕೊಯ್ಲಿಗೆ ರೈತರು ಸಿದ್ಧತೆ ನಡೆಸಿದ್ದರು. ಆದರೆ ದಿಢೀರ್ ಮಳೆ ರೈತರ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ತೋಟಗಾರಿಕೆ ಬೆಳೆಗಾರರು ಮಳೆಯಿಂದಾಗಿ ತೀವ್ರ ನಷ್ಟ ಅನುಭವಿಸಿದ್ದಾರೆ.

    ರಾಶಿ ರಾಶಿ ಆಲಿಕಲ್ಲು: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಭಾಗದಲ್ಲಿ ಶುಕ್ರವಾರ ಗುಡುಗು-ಸಿಡಿಲು ಸಹಿತ ಭಾರಿ ಆಲಿಕಲ್ಲು ಮಳೆಯಾಗಿದೆ. 45 ನಿಮಿಷ ಸುರಿದ ಮಳೆಯಿಂದಾಗಿ ರಸ್ತೆ, ಮನೆಯ ಅಂಗಳಗಳೆಲ್ಲ ಆಲಿಕಲ್ಲಿನಿಂದ ತುಂಬಿ ಹಾಲ್ನೊರೆಯಂತೆ ಕಂಡು ಬಂತು. ಅಂಕನಹಳ್ಳಿ-ಶನಿವಾರಸಂತೆ ಮುಖ್ಯರಸ್ತೆ ಮೇಲೆ ರಾಶಿಯಾಗಿ ಆಲಿಕಲ್ಲು ಬಿದ್ದಿದ್ದರಿಂದ ವಾಹನಗಳ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಅಲ್ಲದೆ ಜೋರು ಆಲಿಕಲ್ಲು ಮಳೆಯಿಂದ ಮನೆಗಳ ಹೆಂಚುಗಳಿಗೂ ಹಾನಿಯಾಗಿದೆ.

    ಎಲ್ಲೆಲ್ಲಿ ಮಳೆ: ಕೊಡಗು, ಹಾಸನ, ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಕಾರವಾರ, ಯಾದಗಿರಿ, ಮಂಗಳೂರು, ಚಿಕ್ಕಮಗಳೂರು, ತುಮಕೂರು, ರಾಮನಗರ, ಬೆಳಗಾವಿ.

    ನೂರಾರು ಎಕರೆ ಬೆಳೆ ಹಾನಿ: ಚಿತ್ರದುರ್ಗ ಜಿಲ್ಲೆಯಲ್ಲಿ ಗುರುವಾರ ಸುರಿದ ಮಳೆಯಿಂದ ನೂರಾರು ಎಕರೆ ತೋಟದ ಬೆಳೆ, ಹತ್ತು ಮನೆ ಹಾನಿಗೀಡಾಗಿವೆ. 40ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮಧ್ಯರಾತ್ರಿ 1ಗಂಟೆಗೆ ಆರಂಭವಾದ ಮಳೆ, ಶುಕ್ರವಾರ ಬೆಳಗ್ಗೆ 9 ಗಂಟೆವರೆಗೂ ಸುರಿಯಿತು. ಚಿತ್ರದುರ್ಗದಲ್ಲೇ 96.8 ಮಿ.ಮೀ. ಮಳೆಯಾಗಿದೆ. ಕೊಯ್ಲಿಗೆ ಬಂದ ಸಾವಿರಾರು ಹೆಕ್ಟೇರ್ ಕಡಳೆಕಾಳು ಬೆಳೆಗೆ ಹಾನಿಯ ಆತಂಕ ಎದುರಾಗಿದೆ. ಹೊಸದುರ್ಗ ತಾಲೂಕಿನಲ್ಲಿ 110 ಎಕರೆ ಅಡಕೆ, ತೆಂಗು, ಬಾಳೆ ಬೆಳೆಗಳು ನಷ್ಟಕ್ಕೀಡಾಗಿವೆ. ಚರಂಡಿ ಕಟ್ಟಿಕೊಂಡಿದ್ದರಿಂದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ತರಕಾರಿ, ಹೂವನ್ನು ಚಿತ್ರದುರ್ಗಕ್ಕೆ ತಂದಿದ್ದ ರೈತರು ಗ್ರಾಮಕ್ಕೆ ಹಿಂದಿರುಗಲು ಪರದಾಡಿದರು. ಮಲ್ಲಾಪುರ ಕೆರೆ ಮತ್ತೆ ಕೋಡಿ ಬಿದ್ದಿದೆ.

    ಮಳೆ ಹಾನಿಯ ವಿವರ

    • ಕೊಡಗಿನ ಶನಿವಾರಸಂತೆ ಭಾಗದಲ್ಲಿ ಆಲಿಕಲ್ಲು ಬಿದ್ದು ಮನೆಯ ಹೆಂಚುಗಳಿಗೆ ಹಾನಿ
    • ಚಿತ್ರದುರ್ಗದಲ್ಲಿ 40ಕ್ಕೂ ಅಧಿಕ ಮನೆ, ನೂರಾರು ಎಕರೆ ಬೆಳೆ ಹಾನಿ
    • ಕೊಯ್ಲಿಗೆ ಬಂದ ಸಾವಿರಾರು ಹೆಕ್ಟೇರ್ ಬೆಳೆ ಹಾನಿ ಆತಂಕ
    • ಹೊಸದುರ್ಗ ತಾಲೂಕಿನಲ್ಲಿ 110 ಎಕರೆ ಅಡಕೆ, ತೆಂಗು, ಬಾಳೆ ನೀರುಪಾಲು, ಹಲವು ಮನೆಗಳು ಜಲಾವೃತ

    ಅಕಾಲಿಕ ವೃಷ್ಟಿ, ಆತಂಕ ಸೃಷ್ಟಿ

    ವಿವಿಧೆಡೆ ಆಲಿಕಲ್ಲು ಸಹಿತ ಭಾರಿ ಮಳೆ | ರೈತರಿಗೆ ಆಘಾತ

    ಬೆಂಗಳೂರು: ಮತ್ತೊಮ್ಮೆ ಮಳೆ ರೈತರ ಬದುಕನ್ನು ಕಂಗೆಡಿಸಿದೆ. ಮುಂಗಾರು ಹಂಗಾಮಿನಲ್ಲಿ ಉಂಟಾಗಿದ್ದ ನೆರೆ, ಜನವರಿಯಲ್ಲಿ ಸುರಿದ ಮಳೆಯಿಂದ ಸಂಕಷ್ಟ ಎದುರಿಸಿದ್ದ ರೈತರಿಗೆ ಅಚ್ಚರಿ ರೀತಿಯಲ್ಲಿ ಸುರಿಯುತ್ತಿರುವ ಮಳೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಮಾಡಿದೆ. ಹವಾಮಾನದಲ್ಲಿ ವ್ಯತ್ಯಾಸ ಆಗಿರುವುದರಿಂದ ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಜನವರಿ ಹಾಗೂ ಫೆಬ್ರವರಿಯಲ್ಲಿ ಚಳಿಗಾಲ ಇರುತ್ತದೆ. ಫೆಬ್ರವರಿಯಲ್ಲಿ ಸರಾಸರಿ 2 ಮಿಮೀ ವಾಡಿಕೆ ಮಳೆ ಆಗುತ್ತದೆ. ಆದರೆ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಅವಧಿಯಲ್ಲಿ ಇಷ್ಟೊಂದು ಮಳೆಯಾಗಿದೆ. ಕಳೆದ 2 ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಸರಾಸರಿ 56 ಮಿಮೀ ಮಳೆ ಸುರಿದಿದೆ. ತೇವಾಂಶ ಭರಿತ ಮೋಡಗಳ ಪರಿಣಾಮದಿಂದ ಕೆಲ ಭಾಗಗಳಲ್ಲಿ ಅಲಿಕಲ್ಲು ಮಳೆಯಾಗಿದೆ. ಮಾರ್ಚ್​ನಿಂದ ಮೇವರೆಗೆ ಬೇಸಿಗೆ ಕಾಲ ಇರುವ ಸಂದರ್ಭದಲ್ಲಿಯೂ ಇಂತಹ ಮಳೆಯಾಗುತ್ತದೆ. ಹವಾಮಾನದಲ್ಲಿ ಒಂದಿಲ್ಲೊಂದು ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಇಂಥ ಮಳೆಯಾಗುತ್ತದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಮಾಲೋಚಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

    ಹಿಂಗಾರು ಬೆಳೆಗೆ ಆಲಿಕಲ್ಲೇಟು: ರಾಜ್ಯದಲ್ಲಿ ಭಾರಿ ಮಳೆ, ಕೊಚ್ಚಿಹೋಯ್ತು ಫಸಲು, ಅನ್ನದಾತ ಕಂಗಾಲು
    ಚಿತ್ರದುರ್ಗದ ಬಡಾವಣೆಯೊಂದರಲ್ಲಿ ಮನೆಗಳಲ್ಲಿ ನೀರು.

    ಅಕಾಲ ಮಳೆಯಿಂದ ಆತಂಕ: ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶುಕ್ರವಾರವೂ ಚದುರಿದ ಮಳೆಯಾಗಿದ್ದು, ಇನ್ನೂ ಎರಡು ದಿನ ಆಗಾಗ ಮಳೆ ಸುರಿಯುವ ಸಾಧ್ಯತೆ ಇದೆ. ಹುಬ್ಬಳ್ಳಿ, ಕಾರವಾರ, ಯಲ್ಲಾಪುರ, ಜೊಯಿಡಾ, ಕುಮಟಾ, ಸಿದ್ದಾಪುರ, ಹೊನ್ನಾವರ, ಹಾನಗಲ್, ರಾಣೆಬೆನ್ನೂರು, ಅಕ್ಕಿ ಆಲೂರ ಸೇರಿ ಹಲವು ಕಡೆಗಳಲ್ಲಿ ಮಳೆಯಾಗಿದೆ. ಧಾರವಾಡ, ಶಿರಸಿ, ದಾಂಡೇಲಿ ಮೊದಲಾದ ಕಡೆ ಮೋಡ ಕವಿದ ವಾತಾವರಣ ಮುಂದುವರಿದಿದೆ. ಅಕಾಲ ವೃಷ್ಟಿಯಿಂದಾಗಿ ಹಿಂಗಾರಿ ಬೆಳೆಗಳಿಗೆ ಹಾನಿಯಾಗುವ ಆತಂಕ ಮೂಡಿದೆ. ಯಾದಗಿರಿ ಜಿಲ್ಲೆಯಲ್ಲೂ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಇದರಿಂದಾಗಿ ಕೈಗೆ ಬಂದ ಸಜ್ಜೆ, ಜೋಳ, ಕಡಲೆ, ಹತ್ತಿ, ಮೆಣಸಿನಕಾಯಿ, ಗೋಧಿ ಸೇರಿ ವಿವಿಧ ಬೇಳೆಗಳು ಹಾನಿಗೀಡಾಗಿದ್ದು, ರೈತರು ಸಂಕಟ ಎದುರಿಸುವಂತಾಗಿದೆ. ಸುರಪುರ ತಾಲೂಕಿನ ಚಿಂಚೋಳಿ, ಯಕ್ತಾಪುರ, ವಂದಗನೂರ, ಯಾಳಗಿ ಗ್ರಾಮಗಳಲ್ಲಿ ಜಮೀನಿನಲ್ಲಿ ಒಣಗಲು ಹಾಕಿದ್ದ ಮೆಣಸಿನಕಾಯಿ, ಭತ್ತ ಅಪಾರ ಪ್ರಮಾಣದಲ್ಲಿ ನೀರುಪಾಲಾಗಿದೆ.

    ಮಂಡ್ಯ ಜಿಲ್ಲೆಯ ಪಾಂಡವಪುರ, ಕೆ.ಆರ್.ಸಾಗರ ಭಾಗದಲ್ಲಿ ಜೋರು ಮಳೆಯ ಜತೆಗೆ ಆಲಿಕಲ್ಲು ಬಿದ್ದಿದೆ. ಮಂಡ್ಯ, ಮದ್ದೂರು, ಮಳವಳ್ಳಿ ಸೇರಿ ಕೆಲ ಭಾಗದಲ್ಲಿ ಮಳೆ ಅಬ್ಬರಿಸಿದೆ. ಬಿರುಗಾಳಿ ಜೋರು ಮಳೆಯಿಂದಾಗಿ ಕೆ.ಆರ್.ಸಾಗರದ ನಾಥ್ ಬ್ಯಾಂಕ್ ರಸ್ತೆ ಬಳಿ ವಿದ್ಯುತ್ ಕಂಬ ಧರೆಗುರುಳಿತು. ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಚಾಮರಾಜನಗರ ಜಿಲ್ಲೆಯಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ಮಧ್ಯಾಹ್ನದ ಯಳಂದೂರು, ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆಯಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಯಿತು. ಮೈಸೂರು ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಶುಕ್ರವಾರ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು. ಮಳೆಯಿಂದಾಗಿ ಪಟ್ಟಣದಲ್ಲಿ ಕಟ್ಟಿದ್ದ ಶುಕ್ರವಾರ ಸಂತೆ ಅಸ್ತವ್ಯಸ್ತವಾಯಿತು. ಕೆಸರಿನ ನಡುವೆ ಜನರು ವ್ಯಾಪಾರ ನಡೆಸುತ್ತಿದ್ದ ದೃಶ್ಯ ಕಂಡುಬಂತು.

    ಕರಾವಳಿಯಲ್ಲಿ ಮಳೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ, ಶುಕ್ರವಾರ ಮುಂಜಾನೆ ಮತ್ತು ಸಾಯಂಕಾಲ ವೇಳೆಯಲ್ಲಿ ತುಂತುರು, ಕೆಲವೆಡೆ ಸಾಧಾರಣ ಮಳೆಯಾಗಿದೆ. ಅಕಾಲಿಕ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗುತ್ತಿದೆ.

    ಇನ್ನೂ 3 ದಿನ ಮಳೆ: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಏಕಕಾಲದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 72 ಗಂಟೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕರಾವಳಿಯ ಉತ್ತರ ಕನ್ನಡ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿಯಲ್ಲಿ ಮುಂದಿನ 48 ಗಂಟೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ ಹಾಗೂ ತುಮಕೂರಿನಲ್ಲಿ ಮುಂದಿನ 72 ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

    ಮಳೆ, ಶೀತಕ್ಕೆ 25 ಕುರಿಗಳ ಸಾವು: ಚಿತ್ರದುರ್ಗ ಜಿಲ್ಲೆ ನಾಯಕನಹಟ್ಟಿ ಹೋಬಳಿಯ ನೇರಲಗುಂಟೆ ಸಮೀಪದ ಬತ್ತಯ್ಯನಹಟ್ಟಿಯಲ್ಲಿ ಅಕಾಲಿಕ ಮಳೆ, ಶೀತ ಗಾಳಿಗೆ 25ಕ್ಕೂ ಅಧಿಕ ಕುರಿಗಳು ಮೃತಪಟ್ಟಿವೆ. ಮಳೆ, ಶೀತ ಗಾಳಿಯಿಂದ ಉಸಿರಾಟದ ತೊಂದರೆಯಾಗಿ ಕುರಿಗಳು ಮೃತಪಟ್ಟಿವೆ ಎನ್ನಲಾಗಿದೆ.

    ನನ್ನ 70 ವರ್ಷದ ಜೀವಮಾನದಲ್ಲಿ ಈ ರೀತಿಯ ಆಲಿಕಲ್ಲು ಮಳೆ ಕಂಡಿಲ್ಲ. ಉತ್ತರ ಭಾರತದಲ್ಲಿ ಹಿಮದ ಮಳೆಯಾಗುವುದನ್ನು ಟಿವಿಯಲ್ಲಿ ಮಾತ್ರ ನೋಡಿದ್ದೆ. ಆದರೆ, ನಮ್ಮೂರಿನಲ್ಲಿ ಈ ದಿನ ಸುರಿದ ಮಳೆ ಅಚ್ಚರಿ ತಂದಿದೆ. ಆಲಿಕಲ್ಲು ಮಳೆಯಿಂದ ಕೃಷಿ ಫಸಲು ನಷ್ಟವಾಗಿದೆ.

    | ಎಂ.ಎಸ್.ಮಹಾದೇವಪ್ಪ ಮೆಣಸ ಗ್ರಾಮ, ಕೊಡಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts