More

    ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ಸುರಿದ ಭರ್ಜರಿ ಮಳೆ

    ಹಾವೇರಿ: ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಗಾಳಿ, ಗುಡುಗು ಸಹಿತವಾಗಿ ಭರ್ಜರಿ ಮಳೆಯಾಗಿದೆ. ಬಂಕಾಪುರ ಬಳಿ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಗೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

    ಸಂಜೆ 5.30ರ ವೇಳೆಗೆ ಆರಂಭಗೊಂಡ ಬಿರುಗಾಳಿ ಸಮೇತ ಮಳೆ ಸುರಿದ ಪರಿಣಾಮ ವಿದ್ಯುತ್ ಕಂಬಗಳು, ಮಾವು, ಬಾಳೆ, ಪೇರಲ, ತೆಂಗಿನ ಗಿಡಗಳು ನೆಲಕ್ಕುರುಳಿವೆ.

    ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಬಿರುಗಾಳಿಗೆ 60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪಟ್ಟಣದಾದ್ಯಂತ ವಿದ್ಯುತ್ ಇಲ್ಲದೇ ಕಗ್ಗತ್ತಲು ಆವರಿಸಿದೆ. ಮನೆ, ಶೆಡ್​ಗಳ ತಗಡುಗಳು ಹಾರಿ ಹೋಗಿವೆ. ಕುಂದೂರ ಗ್ರಾಮದಲ್ಲಿ ಬಾಪುಗೌಡ ಪಾಟೀಲ ಹಾಗೂ ಬಂಕಾಪುರದಲ್ಲಿ ಅರಳೆಲೆಮಠಕ್ಕೆ ಸೇರಿದ ಅಂದಾಜು 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮಾವು, ಬಾಳೆ, ತೆಂಗಿನಗಿಡಗಳು ನೆಲಕ್ಕುರುಳಿವೆ.

    ಕುಂದೂರ ಗ್ರಾಮದ ರೈತರು ಮಾವು, ಬಾಳೆ ಬೆಳೆ ಮಾರಾಟಕ್ಕೆ ತೋಟಗಾರಿಕೆ ಇಲಾಖೆಗೆ 3 ದಿನದ ಹಿಂದೆ ಪಾಸ್ ಕೇಳಿದ್ದರು. ತಾಂತ್ರಿಕ ಕಾರಣದಿಂದ ವಿಳಂಬವಾಗಿತ್ತು. ಅಧಿಕಾರಿಗಳು ಪಾಸ್ ಕೊಟ್ಟಿದ್ದರೆ ಬೆಳೆ ಕಟಾವು ಮಾಡಿ ಮಾರಾಟ ಮಾಡುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಹುಲಗೂರು ರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದು ಕೆಲ ಸಮಯ ಸಂಚಾರಕ್ಕೆ ತೊಂದರೆಯಾಗಿದೆ.

    ಹಾವೇರಿ, ಶಿಗ್ಗಾಂವಿ, ಸವಣೂರು, ಬ್ಯಾಡಗಿ, ರಾಣೆಬೆನ್ನೂರ, ಹಿರೇಕೆರೂರು, ಹಾನಗಲ್ಲ ಭಾಗದಲ್ಲಿಯೂ ಧಾರಾಕಾರ ಮಳೆ ಸುರಿದಿದೆ. ಗಾಳಿಯ ಆರ್ಭಟಕ್ಕೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಸಂಜೆ ಭಾರಿ ಮಳೆಯಾದ್ದರಿಂದ ಧರೆ ತಂಪಾಗಿದೆ. ಈ ಮಳೆಯಿಂದ ಮುಂಗಾರು ಪೂರ್ವ ಕೃಷಿ ಚಟುವಟಿಕೆಗೂ ಪೂರಕವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts