More

    ಭಾರಿ ಮಳೆಯಿಂದ ಕೊಚ್ಚಿಹೋದ ಸುಡುಮಣ್ಣು, ಗೊಬ್ಬರ

    ಉಡುಪಿ: ತೌಕ್ತೆ ಚಂಡಮಾರುತದ ಪರಿಣಾಮ ಕರಾವಳಿ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ಕೃಷಿ ಪೂರ್ವ ತಯಾರಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಹಲವು ರೈತರು ಭತ್ತದ ಕೃಷಿಗೆ ಸಿದ್ಧತೆ ಮಾಡಿಕೊಂಡಿದ್ದ ಸುಡುಮಣ್ಣು, ಸಾವಯವ, ಹಟ್ಟಿಗೊಬ್ಬರ ನೀರುಪಾಲಾಗಿದೆ.
    ಬ್ರಹ್ಮಾವರ ಭಾಗದಲ್ಲಿ ಹೊಳೆ, ಕಾಲುವೆ, ಕಿಂಡಿ ಅಣೆಕಟ್ಟಿನಲ್ಲಿ ಸಂಗ್ರಹವಾಗಿದ್ದ ಮಳೆ ನೀರು ನೇರವಾಗಿ ಗದ್ದೆಗೆ ನುಗ್ಗಿದ್ದ ಪರಿಣಾಮ 10, 15 ದಿನಗಳಿಂದ ರೈತರು ಗದ್ದೆಗೆ ಹರಡಿದ್ದ ಸುಡುಮಣ್ಣು, ದನದ ಗೊಬ್ಬರ ಎಲ್ಲವೂ ನೀರು ಪಾಲಾಗಿದೆ. ಕೃಷಿ ಭೂಮಿಯ ಫಲವತ್ತಾದ ಮಣ್ಣು ಸಹ ಕೊಚ್ಚಿಕೊಂಡು ಹೋಗಿದೆ.
    ಜಿಲ್ಲೆಯಲ್ಲಿ ಸುಮಾರು 36 ಸಾವಿರ ಹೆಕ್ಟೇರ್‌ಗೂ ಮಿಕ್ಕಿ ಈ ಬಾರಿ ಕೃಷಿ ಚಟುವಟಿಕೆ ನಡೆಯಲಿದ್ದು, ಮೇ ಅಂತ್ಯಕ್ಕೆ ಭೂಮಿ ಉಳುಮೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಅದಕ್ಕೂ ಮುನ್ನ ಗದ್ದೆಯ ಸುತ್ತಲು ಬೆಳೆದು ನಿಂತಿದ್ದ ಕಸ ಕಡ್ಡಿ ತೆರವುಗೊಳಿಸಿ ಗದ್ದೆಯಲ್ಲಿ ರಾಶಿ ಹಾಕಿ ಸುಡುಮಣ್ಣು ಇಡಲಾಗುತ್ತದೆ. ಈಗಾಗಲೇ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಈ ಕಾರ್ಯ ನಡೆದಿದ್ದು, ಭಾರಿ ಮಳೆ ಗೊಬ್ಬರ, ಸುಡುಮಣ್ಣನ್ನು ತನ್ನೊಂದಿಗೆ ಸಮುದ್ರಕ್ಕೆ ಕೊಚ್ಚಿ ಹೋಗಿದೆ ಎಂದು ರೈತರು ಹೇಳಿದ್ದಾರೆ.

    ಆದರೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭವಾಗದ ಕಾರಣ ದೊಡ್ಡ ಪ್ರಮಾಣದ ನಷ್ಟ ಉಂಟಾಗಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತರಕಾರಿ ಕೃಷಿಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ಇದೆ. ಮುಂಗಾರಿಗೆ ಸಿದ್ಧತೆ ಮಾಡಿಕೊಂಡಿದ್ದ ರೈತರ ಗದ್ದೆಗೆ ನೀರು ನುಗ್ಗಿ ಸುಡುಮಣ್ಣು, ಗೊಬ್ಬರ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿಯಿದೆ ಎನ್ನುತ್ತಾರೆ ಅವರು.

    ಕಿಂಡಿ ಅಣೆಕಟ್ಟಿನ ಬಾಗಿಲು ತೆರೆದಿಲ್ಲ
    ಮುಂಗಾರಿಗೆ ನೀರಿನ ಸಂಗ್ರಹ ಗಮನದಲ್ಲಿಟ್ಟು ಹಿಂಗಾರು ಭತ್ತದ ಕೃಷಿ ಸಹಿತ ಇತರೆ ಕೃಷಿ ಚಟುವಟಿಕೆ ನಡೆಸಲಾಗಿದೆ. ಇದಕ್ಕಾಗಿ ಕಿಂಡಿ ಅಣೆಕಟ್ಟಿಗೆ ಬಾಗಿಲು, ಮಣ್ಣಿನ ಕಟ್ಟು ನಿರ್ಮಾಣ ಮಾಡಲಾಗಿತ್ತು. ಏಪ್ರಿಲ್‌ವರೆಗೂ ನೀರಿನ ಸಂಗ್ರಹವಿದ್ದು, ಅಣೆಕಟ್ಟಿನ ಬಾಗಿಲು ತೆಗೆಯುವುದು, ಕಟ್ಟು ಬಿಡಿಸುವುದು ಮಾಡಿರಲಿಲ್ಲ. ಮೊನ್ನೆ ಸುರಿದ ಮಳೆ ದೊಡ್ಡ ಅವಾಂತರ ಸೃಷ್ಟಿಸಿದೆ. ಹೊಳೆ, ಕಾಲುವೆ ಭರ್ತಿಯಾಗಿ ನೇರವಾಗಿ ಗದ್ದೆಗೆ ನೀರು ನುಗ್ಗಿ ನಷ್ಟ ಉಂಟು ಮಾಡಿದೆ ಎನ್ನುತ್ತಾರೆ ರೈತರು.

    ಹೊರರಾಜ್ಯದಲ್ಲಿ ಉದ್ಯೋಗದಲ್ಲಿದ್ದು, ಪ್ರಸ್ತುತ ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಲ್ಲೆ ಇರುವಂತಾಗಿದೆ. ಮನೆಯವರೆಲ್ಲ ಸೇರಿ ಕೃಷಿ ಚಟುವಟಿಕೆಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದೆವು. ಗದ್ದೆಗೆ ಸುಡುಮಣ್ಣು, ಗೊಬ್ಬರ ಸಹಿತ ಎಲ್ಲ ಸಿದ್ಧತೆ ಮಾಡಲಾಗಿತ್ತು. ಚಂಡಮಾರುತ ಪರಿಣಾಮ ನೆರೆ ಸೃಷ್ಟಿಯಾಗಿ ಕೃಷಿ ಭೂಮಿಗೆ ನೀರು ನುಗ್ಗಿ ಸುಡುಮಣ್ಣು, ಗೊಬ್ಬರ ಎಲ್ಲವೂ ಕೊಚ್ಚಿ ಹೋಗಿದೆ.
    ಹರೀಶ್ ಎಂ.ಅರಾಡಿ, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts