More

    ಬದುಕು ಕಸಿದ ಆಲಿಕಲ್ಲು ಮಳೆ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಲಾಕ್‌ಡೌನ್ ಆಗಿರುವ ಜಿಲ್ಲೆಯ ಜನ ವರುಣನ ಸಿಂಚನದಿಂದ ಸಂತಸಗೊಂಡಿದ್ದರೆ, ತರಕಾರಿ, ಹಣ್ಣು, ಹೂವು ಬೆಳೆಗಾರರು ನಷ್ಟದ ಭೀತಿ ಎದುರಿಸುವಂತಾಗಿದೆ.
    ಜಿಲ್ಲೆಯ ಬಹುತೇಕ ಕಡೆ ಎರಡು ದಿನಗಳಿಂದ ಸುರಿದ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದ ಟೊಮ್ಯಾಟೊ, ಕ್ಯಾಪ್ಸಿಕಂ, ಹೂಕೋಸು, ಹೂವು ಹಾಗೂ ಮಾವು ಮಣ್ಣು ಪಾಲಾಗುವ ಸ್ಥಿತಿ ಎದುರಾಗಿದೆ. ಇನ್ನೂ ಕೆಲವೆಡೆ ಮುಂಗಾರು ಹಂಗಾಮಿಗೆ ಭೂಮಿ ಹದ ಮಾಡಿಕೊಳ್ಳಲು ರೈತರು ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದಾರೆ.
    ಕರೊನಾದಿಂದ ಕಳೆದೆರಡು ತಿಂಗಳಿಂದ ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ನ್ಯಾಯಸಮ್ಮತ ಬೆಲೆ ಇಲ್ಲದೆ ಬೆಳೆಯನ್ನು ಬೀದಿಗೆ ಎಸೆದು ಸಂಕಟ ವ್ಯಕ್ತಪಡಿಸಿದ್ದ ರೈತರು ಈಗ ವರುಣನ ಅಬ್ಬರದಿಂದಲೂ ನಲುಗುವಂತಾಗಿದೆ.
    ಬೆಳೆದ ತರಕಾರಿಯನ್ನು ಲಾಕ್‌ಡೌನ್‌ನಿಂದ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರ ತಾನೇ ತರಕಾರಿ ಖರೀದಿಸಿ ನಂದಿನಿ ಪಾರ್ಲರ್‌ಗಳಲ್ಲಿ ಮಾರಾಟಕ್ಕೆ ಅವಕಾಶ ನೀಡಿದೆ. ಇದಕ್ಕೂ ಮುನ್ನ ಸಂಸದ, ಸಚಿವ, ಶಾಸಕರು ರೈತರಿಂದ ತರಕಾರಿ ಖರೀದಿಸಿ ಉಚಿತವಾಗಿ ಹಂಚಿ ಒಂದಿಷ್ಟು ಔದಾರ್ಯ ತೋರಿದ್ದಾರೆ.
    ತೋಟಗಾರಿಕೆ ಇಲಾಖೆ ಸಹ ರೈತರಿಂದ ಖರೀದಿಸಿದ ಮಾಲನ್ನು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳಿಗೆ ಸಾಗಣೆ ಮಾಡಿ ರೈತರ ಬದುಕಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡಿದೆ. ಆದರೆ ಕರೊನಾದಿಂದ ರೈತರು ಪಾರಾಗುವ ಸನ್ನಿವೇಶ ಕಂಡು ಬರುತ್ತಿರುವ ವೇಳೆ ಮಳೆ ಸುರಿದು ಮತ್ತೊಮ್ಮೆ ಕೈಸುಟ್ಟುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ರೈತರ ನೆರವಿಗೆ ಬರಬೇಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
    ಮಾವಿಗೂ ಕಂಟಕ: ಶ್ರೀನಿವಾಸಪುರ ತಾಲೂಕಿನಲ್ಲಿ ವಿಶ್ವವಿಖ್ಯಾತ ಬಾದಾಮಿ, ರಸಪುರಿ, ನೀಲಂ, ರಾಜಗಿರಿ, ಮಲ್ಲಿಕಾ ಇತ್ಯಾದಿ ತಳಿ ಮಾವು ಮಾರಾಟಕ್ಕೆ ಎಪಿಎಂಸಿಯಲ್ಲಿ ಸಿದ್ಧತೆಯಾಗಿದೆ. ಕೆಲ ರೈತರು ಜಮೀನನ್ನು ಗುತ್ತಿಗೆದಾರರಿಗೆ ವಹಿಸಿದ್ದರೆ, ಉಳಿದವರು ತಾವೇ ಖುದ್ದು ಮಾರಾಟಕ್ಕೆ ಸಜ್ಜಾಗಿದ್ದಾರೆ. ಆದರೆ ಫಸಲು ಕಟಾವಿಗೆ ಸಿದ್ಧತೆ ವೇಳೆ ಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ನೆಲ ಕಚ್ಚಿದ ಸಾಧ್ಯತೆಗಳಿರುವುದರಿಂದ ರೈತರು ಆತಂಕಗೊಂಡಿದ್ದಾರೆ.
    ಜಿಲ್ಲೆಯಲ್ಲಿ ಸುಮಾರು 50,000 ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, ಮೇ ಎರಡನೇ ವಾರದಲ್ಲಿ ಕೊಯ್ಲು ಆರಂಭವಾಗಲಿದೆ. ಪ್ರಸ್ತುತ 3014 ಹೆಕ್ಟೇರ್‌ನಲ್ಲಿ ಟೊಮ್ಯಾಟೊ ಬೆಳೆಯಿದೆ. 99690 ಟನ್ ಇಳುವರಿ ನಿರೀಕ್ಷಿಸಲಾಗಿತ್ತಾದರೂ ಭರಣಿ ಮಳೆ ಜತೆಗೆ ಸುರಿದ ಆಲಿಕಲ್ಲು ಮಳೆಯಿಂದ ರೈತರ ಖಜಾನೆ ತುಂಬುವ ಆಸೆಗೆ ತಣ್ಣೀರೆರೆಚಿದೆ.
    ಎಲ್ಲೆಲ್ಲಿ ಹಾನಿ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 97.90 ಮಿಮೀ ಮಳೆಯಾಗಿದೆ. ಗಾಳಿ ಆಲಿಕಲ್ಲು ಸಹಿತ ಮಳೆಯಿಂದ ಶ್ರೀನಿವಾಸಪುರದಲ್ಲಿ ಮಾವು, ಕೋಲಾರದ ಹುತ್ತೂರು, ಹೋಳೂರು ಹೋಬಳಿ, ಮುಳಬಾಗಿಲಿನ ಹನುಮನಹಳ್ಳಿ, ಉತ್ತನೂರು, ಬೈರಕೂರು, ದುಗ್ಗಸಂದ್ರ ಹೋಬಳಿ, ಬಂಗಾರಪೇಟೆಯ ಐನೋರಹೊಸಹಳ್ಳಿ, ಸಕ್ಕನಹಳ್ಳಿ, ಐತಾಂಡ್ಲಹಳ್ಳಿ, ಲಕ್ಷ್ಮೀಪುರ, ಮಾವಳ್ಳಿ, ಬೂದಿಕೋಟೆ ಹೋಬಳಿಯಲ್ಲಿ ಟೊಮ್ಯಾಟೊ, ಕ್ಯಾಪ್ಸಿಕಂ ಇನ್ನಿತರ ತರಕಾರಿ ಬೆಳೆಗಳು ಹಾನಿಯಾಗಿದ್ದು, ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ಆರಂಭವಾಗಿದೆ.

    ಜಿಲ್ಲೆಯಲ್ಲಿ ಸುರಿದಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ನಾಶವಾಗಿರುವ ಬೆಳೆಗಳ ಕುರಿತು ತೋಟಗಾರಿಕೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆಗೆ ಸೂಚನೆ ನೀಡಲಾಗಿದ್ದು, ಸಮೀಕ್ಷೆ ಆರಂಭವಾಗಿದೆ. ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು, ಮಳೆ ಹಾನಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ನೀಡಲಾಗಿದೆ.

    ಸಿ.ಸತ್ಯಭಾಮ, ಜಿಲ್ಲಾಧಿಕಾರಿ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts