More

    ಅಪಾಯ ಮಟ್ಟ ಮೀರಿದ ನದಿಗಳು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಭಾಗಗಳಲ್ಲಿ ಸುರಿಯುತ್ತಿದ್ದ ಭಾರಿ ಮಳೆ ಶನಿವಾರ ನಗರ ಪ್ರದೇಶಗಳಿಗೂ ವಿಸ್ತರಿಸಿದ್ದು, ಇಡೀ ದಿನ ದಟ್ಟ ಮೋಡ ಕವಿದು ಧಾರಾಕಾರವಾಗಿ ಸುರಿಯಿತು.
    ಪಶ್ಚಿಮಘಟ್ಟ ಹಾಗೂ ತಪ್ಪಲು ಪ್ರದೇಶಗಳಲ್ಲಿನ ಭಾರಿ ಮಳೆಯಿಂದ ನೇತ್ರಾವತಿ ನದಿ ಅಪಾಯ ಮಟ್ಟ ಮೀರಿ ಉಕ್ಕಿ ಹರಿದ ಕಾರಣ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.
    ಬೆಳ್ತಂಗಡಿ ತಾಲೂಕಿನ ದಿಡುಪೆ, ಕೊಲ್ಲಿ ಮತ್ತು ಚಾರ್ಮಾಡಿ ಭಾಗದಲ್ಲಿ ನದಿಗಳು ಉಕ್ಕೇರಿ ಆಸುಪಾಸು ತೋಟ ಗದ್ದೆಗಳಲ್ಲಿ ಹರಿದವು. ಉಪ್ಪಿನಂಗಡಿಯಲ್ಲಿ ನೇತ್ರಾವತಿ-ಕುಮಾರಧಾರಾ ಹಾಗೂ ಬಂಟ್ವಾಳದಲ್ಲಿ ನೇತ್ರಾವತಿ ನದಿಗಳು ಅಪಾಯ ಮಟ್ಟ ಮೀರಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

    ಸುಬ್ರಹ್ಮಣ್ಯ ಭಾಗದಲ್ಲಿ ಶನಿವಾರ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾದ ಕಾರಣ ಕುಮಾರಧಾರಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದೆ. ಹಳೇ ಸೇತುವೆ ಪ್ರವಾಹದಿಂದ ಮುಕ್ತವಾಗಿದೆ. ಆದರೆ ಕುಮಾರಧಾರಾ ಸ್ನಾನಘಟ್ಟ ಆರು ದಿನಗಳಿಂದ ಮುಳುಗಡೆಯಾಗಿಯೇ ಮುಂದುವರಿದಿದೆ.
    ಪುತ್ತೂರು- ಕುಂಜೂರುಪಂಜ- ಒಳತ್ತಡ್ಕ- ಪಾಣಾಜೆ ರಸ್ತೆಯ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕದಲ್ಲಿರುವ ಸೇತುವೆ ಮುಳುಗಡೆಯಾಗಿದ್ದು, ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು.
    ಬೆಳ್ತಂಗಡಿ, ಸುಳ್ಯ, ಪುತ್ತೂರು ಭಾಗಗಳಲ್ಲಿ ಹಲವೆಡೆ ಭೂ ಕುಸಿತ ಸಂಭವಿಸಿದ್ದು, ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಹಲವು ಮನೆಗಳಿಗೆ ದರೆ ಕುಸಿದು ಹಾನಿಯಾಗಿದೆ.
    ಸಮುದ್ರವೂ ಪ್ರಕ್ಷುಬ್ದಗೊಂಡಿದ್ದು, ಉಳ್ಳಾಲ, ಸೋಮೇಶ್ವರ, ಹೊಸಬೆಟ್ಟು ಮೊದಲಾದ ಕಡೆ ಕಡಲ್ಕೊರೆತ ತೀವ್ರಗೊಂಡಿದೆ.

    ತುರ್ತು ಸೇವೆ: ಪ್ರಾಕೃತಿಕ ವಿಕೋಪದ ಯಾವುದೇ ಸಮಸ್ಯೆಗೆ, ತುರ್ತು ಸೇವೆಗೆ 24*7 ಕಂಟ್ರೋಲ್ ರೂಂ 1077 ಅಥವಾ 948390800ಗೆ ವಾಟ್ಸಾೃಪ್ ಮಾಡಬಹುದು. ಮಂಗಳೂರಿನಲ್ಲಿ 25 ಜನರ ಎನ್‌ಡಿಆರ್‌ಎಫ್ ತಂಡ ಸನ್ನದ್ಧವಾಗಿದೆ. ಎಲ್ಲ ತಾಲೂಕುಗಳಲ್ಲಿ ಅಗ್ನಿಶಾಮಕದಳ, ಗೃಹರಕ್ಷಕರ ತಂಡ ಸಿದ್ಧವಾಗಿದೆ.

    ಜೀವ ಉಳಿಸಿದ ನಾಯಿ: ರಾತ್ರಿ ವೇಳೆ ಜೋರಾಗಿ ನಾಯಿ ಬೊಗಳುತ್ತಿರುವುದನ್ನು ಗಮನಿಸಿದ ಸುಳ್ಯ ಆಲೆಟ್ಟಿಯ ಗುಂಡ್ಯ ನಿವಾಸಿ ಶಿವರಾಮ ರೈ ದಂಪತಿ ಮನೆಯಿಂದ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ಮನೆ ಹಿಂಬದಿಯ ದರೆ ಜರಿದಿದ್ದು, ಬೆಡ್ ರೂಂ ತನಕ ಮಣ್ಣು ಬಿದ್ದಿದೆ. ನಾಯಿ ಬೊಗಳಿದ ಕಾರಣ ದಂಪತಿ ಪಾರಾಗಿದ್ದಾರೆ. ಶೆಡ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಹಾನಿಯಾಗಿದೆ.

    ಮಳೆ ಕಡಿಮೆಯಾಗುವ ಸುಳಿವು: ದ.ಕ. ಜಿಲ್ಲೆಯಲ್ಲಿ ಆ.9ರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. 204.5 ಮಿ.ಮೀ.ಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆಗಳಿವೆ. ಮೀನುಗಾರರು ಸಮುದ್ರಕ್ಕೆ ತೆರಳದಂತೆ, ನದಿ ತಟದ ವಾಸಿಗಳು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 9ರಿಂದ 12ರವರೆಗೆ ಆರೆಂಜ್ ಅಲರ್ಟ್ (115.6 ಮಿ.ಮೀ.ನಿಂದ 204.4 ಮಿ.ಮೀ. ಮಳೆ) ಹಾಗೂ 12ರಿಂದ ಆ.13ರವರೆಗೆ ಯೆಲ್ಲೊ ಅಲರ್ಟ್ ನೀಡಲಾಗಿದೆ.

    ಸಂಗಮ ನಿರೀಕ್ಷೆಯಲ್ಲಿದ್ದ ಭಕ್ತರು
    ಉಪ್ಪಿನಂಗಡಿ: ನೇತ್ರಾವತಿ- ಕುಮಾರಧಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಉಪ್ಪಿನಂಗಡಿಯಲ್ಲಿ ಶುಕ್ರವಾರ ಬೆಳಗ್ಗಿನಿಂದ ಶನಿವಾರ ಬೆಳಗ್ಗಿನವರೆಗೆ 117.6 ಮೀ.ಮೀ. ಮಳೆಯಾಗಿದ್ದು, ಬಸ್ ನಿಲ್ದಾಣದ ಬಳಿಯ ನದಿ ದಡದಲ್ಲಿರುವ ಕಂದಾಯ ಇಲಾಖೆಯ ಮಾಪಕದಲ್ಲಿ ನದಿ ನೀರಿನ ಮಟ್ಟ 29 ಮೀ. ದಾಖಲಾಗಿದೆ. ಇಲ್ಲಿ ನದಿ ನೀರಿನ ಅಪಾಯದ ಮಟ್ಟ 26.5 ಮೀ. ಆಗಿದ್ದು, 30 ಮೀ. ತಲುಪಿದರೆ ನೆರೆ ಬರುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಪಂಚಾಯಿತಿ ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಿದರೂ ನಂತರ ನದಿ ನೀರು ಇಳಿಕೆಯಾಯಿತು. ಇದರೊಂದಿಗೆ ಉಭಯ ನದಿಗಳ ಸಂಗಮ ನಿರೀಕ್ಷೆ ಹುಸಿಯಾಗಿದೆ. ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರವೇಶದ್ವಾರದ ಬಳಿ ಧ್ವಜಸ್ತಂಭವನ್ನು ಎರಡು ನದಿಗಳ ನೀರು ಸಂಧಿಸಿದಾಗ ಸಂಗಮವೆಂದು ಗಂಗಾಪೂಜೆ ನೆರವೇರಿಸಲಾಗುತ್ತದೆ.

    ಬಂಟ್ವಾಳ ಜಲಾವೃತ
    ಬಂಟ್ವಾಳದಲ್ಲಿ ನೇತ್ರಾವತಿ ನದಿನೀರಿನ ಮಟ್ಟ ಮಧ್ಯಾಹ್ನ ವೇಳೆಗೆ 9.9 ಮೀಟರ್ (ಅಪಾಯದ ಮಟ್ಟ 8.5 ಮೀ.) ತಲುಪಿದೆ. ಪರಿಣಾಮ ತಗ್ಗು ಪ್ರದೇಶಗಳಾದ ಗೂಡಿನಬಳಿ, ಬಡ್ಡಕಟ್ಟೆ, ಅಜಿಲಮೊಗರು, ಆಲಡ್ಕ ಪಡ್ಪು, ಪಾಣೆಮಂಗಳೂರು, ಜಕ್ರಿಬೆಟ್ಟು-ಬಂಟ್ವಾಳ ಪೇಟೆ ಸಂಪರ್ಕ ರಸ್ತೆ ಮೊದಲಾದ ಪ್ರದೇಶಗಳು ಮುಳುಗಡೆಯಾಗಿ ಮನೆ- ಅಂಗಡಿಗಳಿಗೆ ನೀರು ನುಗ್ಗಿದೆ. ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಶಂಭೂರು ಡ್ಯಾಂನಿಂದ ಆಗಾಗ ಸೈರನ್ ಮೊಳಗಿಸಿ ನೀರು ಹೊರಬಿಡಲಾಗುತ್ತಿದೆ.

    102 ಗ್ರಾಮಗಳು ಅತಿಸೂಕ್ಷ್ಮ ಪರಿಗಣನೆ
    ಮಂಗಳೂರು: ಜಿಲ್ಲೆಯಲ್ಲಿ ನೆರೆ ಅಥವಾ ಭೂ ಕುಸಿತದ ಸಾಧ್ಯತೆ ಇರುವ 70 ಗ್ರಾಮ ಪಂಚಾಯಿತಿ ವ್ಯಾಪ್ತಿಯ 102 ಗ್ರಾಮಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಈ ಗ್ರಾಮ ಪಂಚಾಯಿತಿಗಳಲ್ಲಿ ವಿಪತ್ತು ಎದುರಾದರೆ ನಿಭಾಯಿಸಲು ವಿಪತ್ತು ನಿರ್ವಹಣೆ ಯೋಜನೆ ಅನುಷ್ಠಾನ ನಿರ್ವಹಣಾ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದ್ದಾರೆ.
    ಚುನಾಯಿತ ಪ್ರತಿನಿಧಿಗಳ ಅವಧಿ ಪೂರ್ಣಗೊಂಡಿರುವ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ನೇಮಕ ಮಾಡಿದ್ದು, ಅವರ ಅಧ್ಯಕ್ಷತೆಯಲ್ಲಿಯೇ ವಿಪತ್ತು ನಿರ್ವಹಣಾ ಸಮಿತಿ ಕಾರ್ಯನಿರ್ವಹಿಸಲಿದೆ. ಈ ತಂಡದಲ್ಲಿ ಪಿಡಿಒ, ವೈದ್ಯಾಧಿಕಾರಿಗಳು, ಮುಖ್ಯ ಶಿಕ್ಷಕರು, ಎಸ್‌ಐ ಮತ್ತಿತರರಿರುತ್ತಾರೆ. ಇವರಿಗೆ ರಾಜ್ಯ ವಿಪತ್ತು ನಿರ್ವಹಣಾ ಯೋಜನೆ ತಂಡದಿಂದ ತರಬೇತಿ ನೀಡಲಾಗುತ್ತದೆ.

    ಸೂಕ್ಷ್ಮ ಗ್ರಾಪಂ: ಮಂಗಳೂರು ತಾಲೂಕಿನ ಹರೇಕಳ, ಗುರುಪುರ, ಮಲ್ಲೂರು, ಅಡ್ಯಾರ್, ಉಳಾಯಿಬೆಟ್ಟು, ಮಳವೂರು, ಚೇಳ್ಯಾರು, ಸೂರಿಂಜೆ, ಬಂಟ್ವಾಳ ತಾಲೂಕಿನ ಬಿ ಕಸ್ಬ, ನಾವೂರು, ಅಮ್ಟಾಡಿ, ಮಣಿನಾಲ್ಕೂರು, ಸರಪಾಡಿ, ಪೆರ್ನೆ, ಬಿ.ಮೂಡ, ಪಾಣೆಮಂಗಳೂರು, ಕಡೇಶಿವಾಲಯ, ಬರಿಮಾರು, ಸಜಿಪ ಮುನ್ನೂರು, ಪುದು, ಸಜಿಪ ಮೂಡ, ಸಜಿಪ ನಡು, ಕರಿಯಂಗಳ, ಮೂಲ್ಕಿ ತಾಲೂಕಿನ ಬಳ್ಕುಂಜೆ, ಅತಿಕಾರಿಬೆಟ್ಟು, ಐಕಳ, ಕಟೀಲು, ಕಿಲ್ಪಾಡಿ, ಹಳೆಯಂಗಡಿ, ಕೆಮ್ರಾಲ್, ಮೂಲ್ಕಿ, ಐಕಳ, ಸುಳ್ಯ ತಾಲೂಕಿನ ಸಂಪಾಜೆ, ಅರಂತೋಡು, ಅಲೆಟ್ಟಿ, ಮರ್ಕಂಜ, ಹರಿಹರ ಪಲ್ಲತ್ತಡ್ಕ, ಕಡಬ ತಾಲೂಕಿನ ಕೊಲ್ಲಮೊಗ್ರು, ಸುಬ್ರಹ್ಮಣ್ಯ, ಕುಟ್ರುಪ್ಪಾಡಿ, ಶಿರಾಡಿ, ಕೌಕ್ರಾಡಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಹಿರೇಬಂಡಾಡಿ, 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಬಜತ್ತೂರು, ಪುತ್ತೂರು ಕಸ್ಬ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ಮುಂಡಾಜೆ, ಲಾಯಿಲ, ಕೊಯ್ಯೂರು, ನಾಡ, ಇಂದಬೆಟ್ಟು, ನಾವೂರು, ಚಾರ್ಮಾಡಿ, ನೆರಿಯ, ಕಲ್ಮಂಜ, ಧರ್ಮಸ್ಥಳ, ಬೆಳಾಲು, ಬಂದಾರು, ಇಳಂತಿಲ, ನಿಡ್ಲೆ, ಶಿಶಿಲ, ನಾರಾವಿ, ವೇಣೂರು, ಅಳದಂಗಡಿ, ಶಿರ್ಲಾಲು ಹಾಗೂ ಆರಂಬೋಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts