More

    ಎರಡು ದಿನ ಆರೆಂಜ್ ಅಲರ್ಟ್

    ಮಂಗಳೂರು/ಉಡುಪಿ: ದ.ಕ.ಹಾಗೂ ಉಡುಪಿ ಜಿಲ್ಲೆಯಲ್ಲಿ ಮಳೆ ಬಿರುಸು ಪಡೆಯುತ್ತಿದೆ.
    ದ.ಕ. ಜಿಲ್ಲೆಯಲ್ಲಿ ಬುಧವಾರ ಸಾಧಾರಣದಿಂದ ಉತ್ತಮ ಮಳೆಯಾಗಿದೆ. ಬೆಳಗ್ಗಿನ ಅವಧಿಯಲ್ಲಿ ಮೋಡ ಕವಿದ ಬಿಸಿಲಿನ ವಾತಾವರಣವಿತ್ತು. ಮಧ್ಯಾಹ್ನ ಬಳಿಕ ಬಿರುಸು ಪಡೆದು, ಬಳಿಕ ವಿವಿಧೆಡೆ ಉತ್ತಮವಾಗಿ ಸುರಿದಿದೆ. ಸುಳ್ಯ, ಬೆಳ್ತಂಗಡಿ ಪುತ್ತೂರು ತಾಲೂಕಿನ ವಿವಿಧೆಡೆ ಭಾರಿ ಮಳೆಯಾ ಗಿದೆ. ಕರಾವಳಿಯಲ್ಲಿ ಇನ್ನೆರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮಳೆ ಹೆಚ್ಚಾಗುವ ಸಾಧ್ಯತೆಯಿದೆ. ಬುಧವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 76.4 ಮಿ.ಮೀ. ಮಳೆಯಾಗಿದೆ. ಬಂಟ್ವಾಳದಲ್ಲಿ 73.1 ಮಿ.ಮೀ, ಬೆಳ್ತಂಗಡಿಯಲ್ಲಿ 72.2, ಮಂಗಳೂರು 61.1, ಪುತ್ತೂರಿನಲ್ಲಿ 71.4, ಸುಳ್ಯದಲ್ಲಿ 104.1 ಮಿ.ಮೀ.ಮಳೆ ಸುರಿದಿದೆ.
    ಉಡುಪಿ ಜಿಲ್ಲಾದ್ಯಂತ ಬುಧವಾರ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಧಾರಾಕಾರ ಮಳೆ ಸುರಿದಿದೆ. ಉಡುಪಿ, ಕಾಪು, ಪಡುಬಿದ್ರಿ, ಕಾರ್ಕಳ, ಹಿರಿಯಡ್ಕ, ಬ್ರಹ್ಮಾವರ, ಕುಂದಾಪುರ, ಬೈಂದೂರು ಮೊದಲಾದ ಕಡೆ ರಾತ್ರಿ ವೇಳೆ ಉತ್ತಮ ಮಳೆಯಾಗಿದೆ. ಬೈಂದೂರು ತಾಲೂಕಿನ ಶಿರೂರು, ಕೊಲ್ಲೂರು, ಕುಂದಾಪುರ ತಾಲೂಕಿನ ಗುಲ್ವಾಡಿ, ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮಗಳಲ್ಲಿ ಗಾಳಿ ಮಳೆಯಿಂದ ಮನೆಗಳಿಗೆ ಹಾನಿಯಾಗಿದೆ. ಬೈಂದೂರು ತಾಲೂಕಿನ ಮುದುರು ಗ್ರಾಮದಲ್ಲಿ ಬಾಳೆ ಕೃಷಿ ಗಾಳಿ ಮಳೆಯಿಂದಾಗಿ ಹಾನಿಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಉಡುಪಿ ತಾಲೂಕಿನಲ್ಲಿ 100.6 ಮಿಮೀ, ಕುಂದಾಪುರದಲ್ಲಿ 128.5, ಕಾರ್ಕಳ 107.5 ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 116 ಮಿ.ಮೀ.ಮಳೆ ಸುರಿದಿದೆ.

    ನೇತ್ರಾವತಿಯಲ್ಲಿ ಹರಿವು ಹೆಚ್ಚಳ
    ಬಂಟ್ವಾಳ: ನಾಲ್ಕಾರು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನೇತ್ರಾವತಿ ನದಿಯ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದೆ. ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವ ಕಾರಣ, ಬಂಟ್ವಾಳದಲ್ಲಿ ಬುಧವಾರ ಬೆಳಗ್ಗೆ ನೀರಿನ ಮಟ್ಟ 5.2 ಮೀ. ಇತ್ತು. ಜುಲೈ 6ರಂದು 2.9 ಮೀ, 7ರಂದು 4.1 ಮೀ ಇದ್ದರೆ, ಬುಧವಾರ 5.2ಮೀಟರ್ ಏರಿದೆ. ಶಂಭೂರು ಎಎಂಆರ್‌ಡ್ಯಾಂನಲ್ಲಿ ನೀರು ಭರ್ತಿಯಾಗಿ ವಿದ್ಯುತ್ ಉತ್ಪಾದನೆ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts