More

    ನೆರೆಯಿಂದಾಗಿ ಅಪಾಯದಲ್ಲಿ ಸೇತುವೆಗಳು

    ಬೆಳ್ತಂಗಡಿ: ಕೆಲದಿನಗಳಿಂದ ಘಟ್ಟಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ನದಿಗಳು ತುಂಬಿ ಹರಿಯುತ್ತಿದ್ದು, ಭಾರಿ ಪ್ರಮಾಣದಲ್ಲಿ ಮರಮಟ್ಟುಗಳು ಕೊಚ್ಚಿಕೊಂಡು ಬರುತ್ತಿರುವುದರಿಂದ ದಿಡುಪೆ ಮತ್ತು ಚಾರ್ಮಾಡಿ ಭಾಗದ ಸೇತುವೆಗಳು ಅಪಾಯಕ್ಕೆ ಸಿಲುಕಿವೆ.
    ಮಲವಂತಿಗೆ ಗ್ರಾಮದ ದಿಡುಪೆಯ ಕಲ್ಬೆಟ್ಟು ಎಂಬಲ್ಲಿ ನೇತ್ರಾವತಿ ಕಿನಾರೆಯ ಸೇತುವೆಗೆ ಬುಧವಾರ ಹಾನಿಯಾಗಿದೆ. 150ಕ್ಕೂ ಅಧಿಕ ಕುಟುಂಬಗಳು ಕೊಲ್ಲಿ ದೇವಸ್ಥಾನ ಭಾಗದಿಂದ ದಿಡುಪೆ ಸಂಪರ್ಕಕ್ಕೆ ಬಳಸುತ್ತಿರುವ ಈ ಸೇತುವೆ ಅಪಾಯದಲ್ಲಿದೆ.

    ಚಾರ್ಮಾಡಿಯಲ್ಲಿ ಮೃತ್ಯುಂಜಯ ಹೊಳೆಯ ಅಂತರ ಮತ್ತು ಅರಣೆಪಾದೆಯ ಸೇತುವೆಗಳೂ ಅಪಾಯದಲ್ಲಿವೆ. ಅರಣೆಪಾದೆ ಸೇತುವೆಯಲ್ಲಿ ಮರದ ದಿಮ್ಮಿಗಳು ತುಂಬುತ್ತಿದ್ದು, ಗುರುವಾರ ಎರಡು ಬಾರಿ ತೆರವುಗೊಳಿಸಲಾಗಿದೆ. ಮತ್ತೆ ಮತ್ತೆ ಸಿಲುಕುತ್ತಿರುವುದರಿಂದ ಸೇತುವೆ ಮುಳುಗಡೆಯಾಗಿ ತೋಟಕ್ಕೆ ನೀರು ನುಗ್ಗಿ ಹಾನಿಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಕೇಶವ ತಿಳಿಸಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್, ಚಾರ್ಮಾಡಿಯ ಅಂತರ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟಿನಲ್ಲಿ ಮರಗಳು ಸಿಲುಕಿ ನೀರು ನದಿಪಾತ್ರ ಬಿಟ್ಟು ಹರಿಯುತ್ತಿದೆ. ಜೆಸಿಬಿ ಸಹಾಯದಿಂದ ಮರಗಳನ್ನು ತೆರವುಗೊಳಿಸಲಾಗಿದ್ದು, ಎಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ. ಅಪಾಯ ಸಂಭವಿಸಿದರೆ ತಕ್ಷಣ ತಾಲೂಕು ಕಚೇರಿ ಅಥವಾ ಪಂಚಾಯಿತಿಗಳನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು.

    32 ಕುಟುಂಬಗಳು ಸ್ಥಳಾಂತರ
    ಕಳೆದ ಮಳೆಗಾಲದಲ್ಲಿ ಭೂಮಿ ಬಿರುಕು ಬಿಟ್ಟಿದ್ದ ಮಿತ್ತಬಾಗಿಲು ಗ್ರಾಮದ ಗಣೇಶ್ ನಗರ ಪ್ರದೇಶ ಅಪಾಯಕಾರಿಯಾಗಿದ್ದು, ಇಲ್ಲಿನ 32 ಕುಟುಂಬಗಳನ್ನು ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ತಿಳಿಸಿದ್ದಾರೆ. ಸಂಭಾವ್ಯ ಪ್ರವಾಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸ್ಥಳಾಂತರಗೊಂಡ ಕುಟುಂಬಗಳಿಗೆ ವಸತಿ, ಊಟ, ಶೌಚಗೃಹ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವಯಂಸೇವಕರನ್ನೂ ನಿಯೋಜಿಸಲಾಗಿದೆ. ಗಣೇಶ್ ನಗರದ ಮನೆಗಳಲ್ಲಿ ರಾತ್ರಿ ಉಳಿದುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಜನರು ಸಹಕರಿಸಬೇಕು ಎಂದು ತಿಳಿಸಿದರು. ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜಿ, ಇತರ ಅಧಿಕಾರಿಗಳು ಜತೆಗಿದ್ದರು.

    ಘಾಟಿಯಲ್ಲೂ ಮುನ್ನೆಚ್ಚರಿಕೆ ಕ್ರಮ
    ಚಾರ್ಮಾಡಿ ಘಾಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಕುಸಿತಗೊಂಡ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸಲಾಗಿದೆ. ಘಾಟಿಯಲ್ಲಿ ಭೂ ಕುಸಿತದ ಭೀತಿಯಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲಿ ಒಂದು ಜೆಸಿಬಿಯನ್ನು ಇರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts