More

    ಮಳೆ ಫಜೀತಿ ಪ್ರವಾಹ ಭೀತಿ: ಕೊಡಗು, ಕರಾವಳಿ, ಮಲೆನಾಡಿನಲ್ಲಿ ಧಾರಾಕಾರ ಮಳೆ

    2019ರ ಆಗಸ್ಟ್-ಅಕ್ಟೋಬರ್​ನಲ್ಲಿ ಸಂಭವಿಸಿದ ರಣಭೀಕರ ಪ್ರವಾಹದ ಆಘಾತದಿಂದ ರಾಜ್ಯ ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಮತ್ತೆ ನೆರೆ ಆತಂಕ ಸೃಷ್ಟಿಯಾಗಿದೆ. ಕಳೆದೆರಡು ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಬಹುತೇಕ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಕೆಲ ಭಾಗಗಳಲ್ಲಿ ವರುಣನ ಆರ್ಭಟ ತೀವ್ರವಾಗಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

    ಉತ್ತರ ಕನ್ನಡಕ್ಕೆ ಆಘಾತ

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರದಲ್ಲಿ ಭಾರಿ ಮಳೆಯಾಗುತ್ತಿದೆ. ಯಲ್ಲಾಪುರ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನೀರು ತುಂಬಿ ವಾಹನ ಸಂಚಾರ ಬಂದಾಗಿದೆ. ಗಂಗಾವಳಿ, ಅಘನಾಶಿನಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಇಕ್ಕೆಲಗಳ ಹಲವು ಗ್ರಾಮಗಳು ಮುಳುಗಿವೆ. ಜಿಲ್ಲೆಯಲ್ಲಿ 500 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅರ್ಧ ಜಿಲ್ಲೆ ಕತ್ತಲಲ್ಲಿ ಮುಳುಗಿದೆ. ಮೊಬೈಲ್, ದೂರವಾಣಿ ಸಂಪರ್ಕ ಸ್ಥಗಿತವಾಗಿದೆ. ಕಾರವಾರದಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು, ಕದ್ರಾ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ.

    ಕೊಚ್ಚಿ ಹೋದ ಯುವಕ: ಯಲ್ಲಾಪುರದ ಗುಳ್ಳಾಪುರ ಶೇವ್ಕಾರ್ ಸಮೀಪ ಬೈಕ್​ನ ಮೇಲೆ ಸೇತುವೆ ದಾಟಲು ಹೋದ ಹೊನ್ನಾವರ ಕಡ್ನೀರು ಕಾರಗದ್ದೆಯ ಸಂತೋಷ ಮೋಹನ ನಾಯ್ಕ(30) ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.

    ಹಾಸನದಲ್ಲಿ ಆರ್ಭಟ ಜೋರು

    ಎರಡು ದಿನಗಳಿಂದ ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಸಕಲೇಶಪುರ ಪಟ್ಟಣದಲ್ಲಿ ಹಾದು ಹೋಗಿರುವ ಹೇಮಾವತಿ ನದಿ ತುಂಬಿ ಹರಿಯುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಎರಡು ದಿನಗಳಲ್ಲಿ ಪ್ರಸಿದ್ಧ ಹೊಳೆಮಲ್ಲೇಶ್ವರಸ್ವಾಮಿ ದೇವಾಲಯ ಮುಳುಗಡೆಯಾಗಲಿದೆ. ಸಕಲೇಶಪುರ ತಾಲೂಕಿನಲ್ಲಿ ನೂರಾರು ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದು, ವಿದ್ಯುತ್ ಕಣ್ಮರೆಯಾಗಿದೆ. ಬೇಲೂರು ತಾಲೂಕಿನ ಯಗಚಿ ಜಲಾಶಯ ಭರ್ತಿಯಾಗಿದ್ದು, ನಿತ್ಯ 300 ಕ್ಯೂಸೆಕ್ ನೀರು ಹರಿಯಬಿಡಲಾಗುತ್ತಿದೆ. 2922 ಅಡಿ ಸಾಮರ್ಥ್ಯದ ಹೇಮಾವತಿ ಜಲಾಶಯದಲ್ಲಿ 2901 ಅಡಿ ನೀರು ಸಂಗ್ರಹವಾಗಿದೆ.

    ಕೆಆರ್​ಎಸ್​ಗೆ ಒಳಹರಿವು ಹೆಚ್ಚಳ

    ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆ.ಆರ್.ಸಾಗರ ಅಣೆಕಟ್ಟೆಗೆ ಎರಡು ದಿನಗಳಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಈ ಅವಧಿಯಲ್ಲಿ ನೀರಿನ ಮಟ್ಟ ಮೂರು ಅಡಿಗೂ ಹೆಚ್ಚು ಏರಿಕೆ ಕಂಡಿದೆ. 124.80 ಗರಿಷ್ಠ ಮಟ್ಟದ ಅಣೆಕಟ್ಟೆಯಲ್ಲಿ ಪ್ರಸ್ತುತ 110 ಅಡಿ ನೀರಿದ್ದು, ಒಳಹರಿವು 29,855ಕ್ಯೂಸೆಕ್, ಹೊರಹರಿವು 4715 ಕ್ಯೂಸೆಕ್ ಇದೆ. 30.144 (ಗರಿಷ್ಠ 49.454) ಟಿ.ಎಂ.ಸಿ.ನೀರಿನ ಸಂಗ್ರಹವಿದೆ.

    ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ

    ಬೆಳ್ತಂಗಡಿ: ಚಾರ್ವಡಿ ಘಾಟ್​ನ ಎರಡು, ಮೂರು ಮತ್ತು ನಾಲ್ಕನೇ ತಿರುವುಗಳ ಮಧ್ಯೆ ಭೂಕುಸಿತ ಸಂಭವಿಸಿ ರಸ್ತೆ ಮೇಲೆ ಬೃಹತ್ ಬಂಡೆಕಲ್ಲು ಉರುಳಿದ್ದರಿಂದ ಕೆಲಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. 30ಕ್ಕಿಂತಲೂ ಹೆಚ್ಚು ವಾಹನಗಳು ರಸ್ತೆ ಮಧ್ಯೆ ಸಿಲುಕಿದ್ದವು. ಚಾರ್ವಡಿ ಹಸನಬ್ಬ ಅವರ ಪುತ್ರ ಅಯಾಜ್ ಚಾರ್ವಡಿ, ಮೂಡಿಗೆರೆಯ ಚಾಲಕ ಖಲೀಲ್ ಮತ್ತಿತರರು ಕಲ್ಲನ್ನು ಸ್ವಲ್ಪ ಬದಿಗೆ ಸರಿಸಿ ಸಂಚಾರ ಸುಗಮಗೊಳಿಸಿದರು. ಬಳಿಕ ಮಾರ್ಗದಲ್ಲಿ ವಾಹನ ಸಂಚಾರ ತಡೆಯಲಾಯಿತು. ರಾತ್ರಿ 7 ಗಂಟೆಯ ನಂತರ ಚಾರ್ವಡಿ ಕಣಿವೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ ಆದೇಶ ಜಾರಿಯಲ್ಲಿದೆ.

    ಹಳಿ ಮೇಲೆ ಗುಡ್ಡ ಕುಸಿತ

    ನಿಜಾಮುದ್ದೀನ್-ವಾಸ್ಕೋಡಗಾಮ ಎಕ್ಸ್ ಪ್ರೆಸ್ ರೈಲಿನ ಮೇಲೆ ಬುಧವಾರ ಗುಡ್ಡ ಕುಸಿದಿದ್ದು, ರೈಲಿನಲ್ಲಿದ್ದ 142 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಯಾಸರ್​ಲಾಕ್​ನಿಂದ ಕರಂಜೋಲ್ ರೈಲ್ವೆ ಸ್ಟೇಶನ್ ಮಾರ್ಗ ಮಧ್ಯದಲ್ಲಿ ಗುಡ್ಡ ಕುಸಿತ ವಾಗಿದೆ. ಈ ರೈಲು ಸೋಮವಾರ ಮಧ್ಯಾಹ್ನ ದೆಹಲಿಯಿಂದ ಮಡಗಾಂವಗೆ ತೆರಳುತ್ತಿತ್ತು.

    ಧಾರವಾಡ-ಸವದತ್ತಿ ಸಂಚಾರ ಬಂದ್

    ಧಾರವಾಡ: ಧಾರಾಕಾರ ಮಳೆಯಿಂದ ಜಿಲ್ಲೆಯ ಜನಜೀವನ ಸ್ತಬ್ಧಗೊಂಡಿದೆ. ತುಪ್ಪರಿ ಹಳ್ಳದಲ್ಲಿ ಪ್ರವಾಹ ಬಂದಿದ್ದರಿಂದ ಹಾರೋಬೆಳವಡಿ ಬಳಿಯ ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಧಾರವಾಡ-ಸವದತ್ತಿ ಸಂಪರ್ಕ ಕಡಿತವಾಗಿದೆ. ಇಬ್ಬರ ರಕ್ಷಣೆ: ತುಪ್ಪರಿಹಳ್ಳದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಇಬ್ಬರನ್ನು ಮೊರಬ ಗ್ರಾಮಸ್ಥರು ರಕ್ಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ವಟ್ಟನೂರ ಗ್ರಾಮದ ಮಲ್ಲಪ್ಪ ಇಮ್ಮಡಿ (35) ಮತ್ತು ಕಿರಣ ವಟ್ಟನೂರ (20) ಬೈಕ್​ನಲ್ಲಿ ತೆರಳುವಾಗ ನೀರಿನ ಸೆಳೆವಿನಿಂದ ಅಪಾಯಕ್ಕೆ ಸಿಲುಕಿದ್ದರು. ಕಿರಣ ವಟನೂರ ಸೇತುವೆಯ ಗೂಟದ ಕಲ್ಲು ಹಿಡಿದು ನಿಂತಿದ್ದರೆ, ಮಲ್ಲಪ್ಪ ನೀರಿನ ರಭಸಕ್ಕೆ 300 ಮೀಟರ್ ಕೊಚ್ಚಿ ಹೋಗಿ ಮುಳ್ಳು ಕಂಟಿಗೆ ಸಿಲುಕಿಕೊಂಡಿದ್ದ. ಮೊರಬ ಗ್ರಾಮದ ರಾಜು ಪಾರ್ವತೆಮ್ಮನವರ 15 ಜನರ ಸಹಾಯ ಪಡೆದು ಹಗ್ಗದ ಮೂಲಕ ಪ್ರಾಣ ರಕ್ಷಿಸಿದರು.

    ಕರಾವಳಿ ತತ್ತರ

    ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಬುಧವಾರವೂ ಭಾರಿ ಗಾಳಿ ಸಹಿತ ಮಳೆ ಸುರಿದಿದೆ. ಬಲವಾಗಿ ಬೀಸುತ್ತಿರುವ ಗಾಳಿಗೆ ಅಲ್ಲಲ್ಲಿ ಮರಗಳು, ವಿದ್ಯುತ್ ತಂತಿಗಳು ಬಿದ್ದು ಹಾನಿಯಾಗಿದೆ. ಸಾವಿರಾರು ಅಡಕೆ ಮರಗಳು ಧರೆಗುರುಳಿವೆ. ನದಿಗಳು ತುಂಬಿ ಹರಿಯುತ್ತಿದ್ದು, ತೀರ ಪ್ರದೇಶದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದ್ದು, ಕುಮಾರಧಾರಾ ಹಳೆಯ ಸೇತುವೆ ಮುಳುಗಡೆಯಾಗಿದೆ.

    ಮಹಿಳೆ ಸಾವು: ಉಡುಪಿ ಜಿಲ್ಲೆಯ ನಿಟ್ಟೂರು-ಹನುಮಂತ ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮಳೆ ನೀರು ಹರಿಯುತ್ತಿದ್ದ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ. ಅಂಬಾಗಿಲು ಪುತ್ತೂರು ಗ್ರಾಮದ ಕಕ್ಕುಂಜೆ ನಿವಾಸಿ ಗುಲಾಬಿ(60) ಮೃತಪಟ್ಟವರು.

    ತುಂಗೆ, ಭದ್ರೆ, ಶರಾವತಿ ಭರ್ತಿ

    ಶಿವಮೊಗ್ಗ: ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನದಿ, ಹಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಆಗುಂಬೆ ಘಾಟಿಯಲ್ಲಿ ಮಣ್ಣು ಕುಸಿದಿದೆ. ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿಯ ಸಿದ್ದೇಶ್ವರ ಕಾಲನಿ ಸಮೀಪ ಮಂಗಳವಾರ ಮಾವಿನ ಮರ ಬಿದ್ದು ಎರಡು ಗಂಟೆ ಸಂಚಾರ ವ್ಯತ್ಯಯವಾಗಿತ್ತು.

    ರಸ್ತೆ ಸಂಪರ್ಕ ಕಡಿತ: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಕಾರಣ ದಾವಣಗೆರೆ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಹರಿಹರ ತಾಲೂಕಿನ ಉಕ್ಕಡಗಾತ್ರಿ- ಫತ್ಯಾಪುರ ನಡುವಿನ ರಸ್ತೆ ಮುಳುಗಿ ಸಂಪರ್ಕ ಕಡಿತಗೊಂಡಿದೆ.

    ಮನೆ ತೊರೆದ ಕುಟುಂಬಗಳು

    ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನಗಳಿಂದ ನಿರಂತರ ವರ್ಷಧಾರೆಯಾಗುತ್ತಿದೆ. ಕಳೆದ ವರ್ಷ ನೆರೆಯಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದ ಮಲೆಮನೆ-ಮೇಗೂರು ಗ್ರಾಮಸ್ಥರು ಈ ವರ್ಷವೂ ಆತಂಕಗೊಂಡಿದ್ದಾರೆ. 10ಕ್ಕೂ ಹೆಚ್ಚು ಕುಟುಂಬಗಳು ಗ್ರಾಮಗಳನ್ನು ತೊರೆದು ಬೇರೆ ಊರಲ್ಲಿರುವ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಕಳಸ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ. ಗುಡ್ಡ ಕುಸಿತಗಳು ಸಂಭವಿಸಿವೆ. ಗಾಳಿಯೊಂದಿಗೆ ಬಿರುಸಿನ ಮಳೆಯಾಗುತ್ತಿದೆ. ಕಳಸ-ಹೊರನಾಡು ಮಧ್ಯದ ಹೆಬ್ಬಾಳೆ ಸೇತುವೆ ಭದ್ರೆಯ ಪ್ರವಾಹಕ್ಕೆ ಮುಳುಗಡೆಯಾಗಿತ್ತು. ಕಳಸ-ಕುದುರೆಮುಖ ರಸ್ತೆಯಲ್ಲಿ 25ಕ್ಕೂ ಹೆಚ್ಚು ಮರಗಳು ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು.

    ಜನಜೀವನ ತತ್ತರ

    ಬೆಳಗಾವಿಯಲ್ಲಿ ನದಿ ಪಾತ್ರದ ಗ್ರಾಮಸ್ಥರಿಗೆ ಮತ್ತೆ ಪ್ರವಾಹ ಭೀತಿ ಆವರಿಸಿದೆ. ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳಿಗೆ ಅಪಾರ ನೀರು ಹರಿದು ಬರುತ್ತಿದೆ. ಪಶ್ಚಿಮ ಘಟ್ಟ ಸೆರಗಿನಲ್ಲಿರುವ ಖಾನಾಪುರ ತಾಲೂಕಿನಲ್ಲಿ ಭಾರಿ ಮಳೆಯಿಂದಾಗಿ 20ಕ್ಕೂ ಅಧಿಕ ಸೇತುವೆ ಮುಳುಗಡೆಯಾಗಿವೆ. 50ಕ್ಕೂ ಅಧಿಕ ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದೆ.

    ಕಪಿಲಾ ಪ್ರವಾಹ

    ಮೈಸೂರು ಜಿಲ್ಲೆಯ ಪ್ರಮುಖ ಜಲಾಶಯಗಳಾದ ಕಬಿನಿ, ತಾರಕ ಮತ್ತು ನುಗು ಭರ್ತಿಯಾಗುತ್ತಿದ್ದು, ಭಾರಿ ಪ್ರಮಾಣದ ನೀರನ್ನು ಕಪಿಲಾ ನದಿಗೆ ಬಿಡಲಾಗುತ್ತಿದೆ. ಕೇರಳದ ವಯನಾಡು ಮತ್ತು ಮೈಸೂರಿನಲ್ಲಿ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಭಾರಿ ಪ್ರಮಾಣದ ನೀರು ಜಲಾಶಯಗಳಿಗೆ ಹರಿದುಬರುತ್ತಿದೆ. ಕಪಿಲಾ ಅಪಾಯದ ಮಟ್ಟ ಮೀರಿದ್ದು, ಹೈ ಅಲರ್ಟ್ ಘೊಷಣೆ ಮಾಡಲಾಗಿದೆ.

    ತ್ರಿವೇಣಿ ಸಂಗಮ ಜಲಾವೃತ

    ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ತ್ರಿವೇಣಿ ಸಂಗಮ ಜಲಾವೃತವಾಗಿದೆ. ಭಾಗಮಂಡಲದಿಂದ ನಾಪೋಕ್ಲುವಿಗೆ ತೆರಳುವ ಅಯ್ಯಂಗೇರಿ ಸೇತುವೆ ಮೇಲೆ 2 ಅಡಿ ನೀರು ತುಂಬಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ನದಿ, ತೊರೆಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹ ಸೃಷ್ಟಿಯಾಗುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಮರ, ವಿದ್ಯುತ್ ಕಂಬಗಳು ಧರಸ್ಥಾಯಿಯಾಗುತ್ತಿವೆ. ಕೊಡಗು ಕಗ್ಗತ್ತಲಲ್ಲಿ ಮುಳುಗಿದೆ.

    ಮರ ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವು

    ಎಚ್.ಡಿ.ಕೋಟೆ: ಮಳೆಯಲ್ಲಿ ಆಶ್ರಯಕ್ಕೆಂದು ನಿಂತಿದ್ದ ಮರವೇ ಬುಡಸಮೇತ ಕಿತ್ತುಬಿದ್ದು ಅಣ್ಣೂರು ಗ್ರಾಮದ ಮಾದೇಗೌಡ (46) ಮೃತಪಟ್ಟರೆ, ಅದೇ ಗ್ರಾಮದ ಹನುಮಂತಶೆಟ್ಟಿ (60) ಹಾಗೂ ನಂಜುಂಡ (30) ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಬುಧವಾರ ಬೆಳಗ್ಗೆ 7 ಗಂಟೆಯಲ್ಲಿ ಮಳೆ ಬರುತ್ತಿದ್ದ ಕಾರಣ ಇವರು ಅಣ್ಣೂರು ಗ್ರಾಮದ ಬಸ್ ನಿಲ್ದಾಣದ ಬಳಿಯ ಸುಬಾಬುಲ್ಲ (ಹರ್ಕ್ಯುಲೆಸ್) ಮರದ ಕೆಳಗೆ ತರಕಾರಿ ಮಾರಲು ಹಾಕಿದ್ದ ಗುಡಿಸಿಲಿನ ಒಳಗೆ ಆಶ್ರಯ ಪಡೆದಿದ್ದರು. ಈ ಸಂದರ್ಭದಲ್ಲಿ ಮರ ಬುಡ ಸಮೇತ ಉರುಳಿ ಬಿದ್ದಿದೆ. ಮಾದೇಗೌಡ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹನುಮಂತಶೆಟ್ಟಿ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದ್ದರೆ, ನಂಜುಂಡ ಅವರ ಕಾಲು ಮುರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts