More

    250 ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ

    ಚಿಕ್ಕಬಳ್ಳಾಪುರ: ದೇಶಕ್ಕೆ ಮಾದರಿಯಾಗಿ ರಾಜ್ಯದ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದರು.

    ತಾಲೂಕಿನ ಪೆರೇಸಂದ್ರದಲ್ಲಿ ಬುಧವಾರ ನೂತನ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, 25 ಸಾವಿರ ಚದರ ಅಡಿಯಲ್ಲಿ ತಲಾ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆ ಗುಣಮಟ್ಟದ ಆರೋಗ್ಯ ಸೌಲಭ್ಯ ಸಿಗಲಿದೆ. ಹಾಲಿ 6 ಹಾಸಿಗೆಗಳ ಬದಲಾಗಿ 12 ಹಾಸಿಗೆಗಳ ವ್ಯವಸ್ಥೆ ಇರಲಿದೆ. ಮೂವರು ವೈದ್ಯರು, ದಾದಿಯರು ಸೇರಿ ಎಲ್ಲ ಹುದ್ದೆ ಸಂಖ್ಯೆಗಳು ದ್ವಿಗುಣಗೊಳ್ಳಲಿದೆ ಎಂದರು.

    ವೈದ್ಯಾಧಿಕಾರಿಗಳು ಸೇರಿ ಸಿಬ್ಬಂದಿ ಉಳಿದುಕೊಳ್ಳಲು ವಸತಿ ಗೃಹಗಳನ್ನು ನಿರ್ಮಿಸಲಾಗುತ್ತದೆ. ಕಡ್ಡಾಯವಾಗಿ ಸಂಬಂಧಪಟ್ಟವರು ಕೇಂದ್ರ ಸ್ಥಾನದಲ್ಲಿಯೇ ಇದ್ದು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂದರು. ಜಿಲ್ಲೆಯಲ್ಲಿ ಪೆರೇಸಂದ್ರ, ಮಂಡಿಕಲ್ಲು ಮತ್ತು ದಿಬ್ಬೂರು ಸೇರಿ 3 ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾಮಗಾರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿನ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದರು.

    ಡಿಸಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಮಿಥುನ್ ಕುಮಾರ್, ಎಸಿ ಡಾ ಜಿ.ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಜಿಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ತಹಸೀಲ್ದಾರ್ ಗಣಪತಿಶಾಸ್ತ್ರಿ, ಮೆಡಿಕಲ್ ಕಾಲೇಜಿನ ಸಿಇಒ ಸಿದ್ಧೀಕ್, ಕಾರ್ಯಪಾಲಕ ಅಭಿಯಂತರ ಮಂಜಪ್ಪ ಮತ್ತಿತರರು ಇದ್ದರು.

    ಸಕಾಲದಲ್ಲಿ ಚಿಕಿತ್ಸೆ ಪಡೆಯಿರಿ: ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ಅವಕಾಶವಿದ್ದರೂ ವಿದ್ಯಾವಂತ ಮಹಿಳೆಯರು ಪರೀಕ್ಷೆಗೊಳಪಡಲು ಹಿಂಜರಿಯುತ್ತಿದ್ದಾರೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕ ಆಸ್ಪತ್ರೆ, ಆರೋಗ್ಯ ಕೇಂದ್ರಗಳು ಹಾಗೂ ಚಿಕಿತ್ಸಾ ಕೇಂದ್ರಗಳಲ್ಲಿ ದೊರೆಯುವ ಆರೋಗ್ಯ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತಲೂ ಕಾಯಿಲೆ ಬರದಂತೆ ಎಚ್ಚರವಹಿಸುವುದು ಮುಖ್ಯ ಎಂದರು.

    ಹೊಲಿಗೆ ಯಂತ್ರ ವಿತರಣೆ: ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯಿಂದ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಕರೊನಾದಿಂದ ಮೃತಪಟ್ಟ ಕುಟುಂಬದ ಮಹಿಳೆಗೆ ಹೊಲಿಗೆ ಯಂತ್ರ, ಹೈಜಿನಿಕ್ ಮತ್ತು ಆಹಾರ ಕಿಟ್ ಅನ್ನು ಸಚಿವ ಡಾ ಕೆ.ಸುಧಾಕರ್ ವಿತರಿಸಿದರು. ಜಿಲ್ಲೆಯಲ್ಲಿ ರಕ್ತದ ಕೊರತೆ ನೀಗಿಸಿ, ಜನರ ಪ್ರಾಣ ರಕ್ಷಿಸುವಲ್ಲಿ ರೆಡ್ ಕ್ರಾಸ್ ಸಂಸ್ಥೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಡಿಸಿ ಆರ್.ಲತಾ, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಕೋಡಿರಂಗಪ್ಪ, ಕಾರ್ಯದರ್ಶಿ ರವಿ, ಖಜಾಂಚಿ ಎಂ.ಜಯರಾಮ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts