More

    ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

    ಕುಮಟಾ: ತಾಲೂಕು ಆಸ್ಪತ್ರೆ ಸೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

    ಬಹುಪಾಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದ ಒಂದೆರಡು ದಿನ ಮಾತ್ರ ವೈದ್ಯರು ಸಿಗುತ್ತಾರೆ. ಕೆಲ ದಿನದ ಹಿಂದಷ್ಟೇ ಉದ್ಘಾಟನೆಗೊಂಡ ಕಲ್ಲಬ್ಬೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಗಿರುವ ವೈದ್ಯರಲ್ಲೇ ಒಬ್ಬರನ್ನು ವಾರಕ್ಕೊಮ್ಮೆ ನಿಯೋಜಿಸುವ ಪರಿಸ್ಥಿತಿ ನಿರ್ವಣವಾಗಿದೆ.

    ಸಂತೇಗುಳಿ, ಗೋಕರ್ಣ, ಕತಗಾಲ ಮುಂತಾದೆಡೆ ದಿನದ 24 ಗಂಟೆ ಆರೋಗ್ಯ ಸೇವೆಯ ತೀರಾ ಬೇಡಿಕೆ ಇದ್ದರೂ ಏನೂ ಮಾಡುವಂತಿಲ್ಲ. ಗೋಕರ್ಣಕ್ಕೆ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬಂದುಹೋಗುತ್ತಾರೆ. ಕಳೆದ 10 ವರ್ಷದಲ್ಲಿ 72 ಮಂದಿ ಸಮುದ್ರದಲ್ಲಿ ಮುಳುಗಿ ಸತ್ತಿದ್ದಾರೆ. ಸಮಯಕ್ಕೆ ಮರಣೋತ್ತರ ಪರೀಕ್ಷೆ ಮಾಡುವುದಕ್ಕೂ ವೈದ್ಯರಿರುವುದಿಲ್ಲ.

    ತಾಲೂಕಿನ ಸಮುದ್ರ ತೀರಗಳಲ್ಲಿ ರೆಸಾರ್ಟ್​ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಚತುಷ್ಪಥದ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಟ್ರಾಮಾ ಸೆಂಟರ್ ಇಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತೆ ಇಲ್ಲ. ಕುಮಟಾ-ಶಿರಸಿ ಮಾರ್ಗ ಹಾಗೂ ಕುಮಟಾ-ಸಿದ್ದಾಪುರ ಮಾರ್ಗದ ನಡುವೆ ಆಂಬುಲೆನ್ಸ್ ಸಹಿತ ತುರ್ತು ಆರೋಗ್ಯ ಸೇವೆ ಬೇಕಾದಾಗ ಉಂಟಾಗುವ ಪರಿಸ್ಥಿತಿಗೆ ಪರಿಹಾರ ಸಿಕ್ಕಿಲ್ಲ. ಕತಗಾಲ ಸುತ್ತಮುತ್ತಲ ಗ್ರಾಮಗಳು, ಸಂತೇಗುಳಿ ಸುತ್ತಮುತ್ತಲ ಒಳನಾಡು ಅರಣ್ಯ ಗ್ರಾಮಗಳು ಕೂಡಾ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಹೆಣಗಾಡಬೇಕಾಗುತ್ತದೆ.

    ಕೊರತೆಯ ನಡುವೆಯೂ ಉತ್ತಮ ಆರೋಗ್ಯ ಸೇವೆ ನೀಡುತ್ತಿರುವ ಆರೋಗ್ಯ ಸಿಬ್ಬಂದಿ ಅಸಹಾಯಕತೆ ಬಗ್ಗೆ ಸಾರ್ವಜನಿಕರಲ್ಲಿ ಬೇಸರದ ಜತೆಗೆ ಕನಿಕರವೂ ಇದೆ. ಆದರೆ, ಸರ್ಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಸಿಬ್ಬಂದಿ ಕೊರತೆ ನೀಗಿಸಬೇಕಿದೆ.

    ಕೊರತೆ ಎಷ್ಟು?: ತಾಲೂಕಿನಲ್ಲಿ ಒಟ್ಟು ಮಂಜೂರಾದ 118 ಹುದ್ದೆಗಳಲ್ಲಿ 46 ಹುದ್ದೆಗಳು ಖಾಲಿ ಇವೆ. ಅವುಗಳಲ್ಲಿ ಇಬ್ಬರು ವೈದ್ಯಾಧಿಕಾರಿಗಳು, 31 ಹಿರಿ-ಕಿರಿಯ ಶುಶ್ರೂಷಕರು, ಪ್ರಯೋಗಾಲಯ ತಂತ್ರಜ್ಞ, 3 ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಒಬ್ಬರು ಫಾರ್ವಸಿಸ್ಟ್ ಹಾಗೂ ನಾಲ್ವರು ಡಿ ದರ್ಜೆ ನೌಕರರ ಕೊರತೆ ಇದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ತಿಳಿಸಿದ್ದಾರೆ.

    ಆರೋಗ್ಯ ಇಲಾಖೆಯಡಿ ವೈದ್ಯರ ಕೊರತೆ ನೀಗಿಸುವುದು ರಾಜ್ಯದಲ್ಲೇ ಹರಸಾಹಸವಾಗಿದೆ. ಆದರೂ, ಸಾಕಷ್ಟು ಪ್ರಯತ್ನ ಮಾಡಿ ಸಿಬ್ಬಂದಿ ಕೊರತೆ ಸಹಿತ ತಾಲೂಕಿನ ಆರೋಗ್ಯ ವಿಭಾಗದ ಅಗತ್ಯಗಳನ್ನು ಹಂತಹಂತವಾಗಿ ಪೂರೈಸಲಾಗುತ್ತಿದೆ. ತುರ್ತು ಆರೋಗ್ಯ ಸೇವೆಗೂ ಕಟ್ಟೆಚ್ಚರ ವಹಿಸಲಾಗಿದೆ.

    | ದಿನಕರ ಶೆಟ್ಟಿ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts