More

    ಪೋಲಿಯೋ ನಿರ್ಮೂಲನೆಯಲ್ಲಿ ಆರೋಗ್ಯ, ಶಿಶು ಅಭಿವೃದ್ಧಿ ಇಲಾಖೆ, ರೋಟರಿ ಪಾತ್ರ ಹಿರಿದು: ಶಾಸಕ ಜಿ.ಎಚ್.ಶ್ರೀನಿವಾಸ್

    ತರೀಕೆರೆ: ಪೋಲಿಯೋ ನಿರ್ಮೂಲನೆಯಲ್ಲಿ ಆರೋಗ್ಯ, ಶಿಶು ಅಭಿವೃದ್ಧಿ ಇಲಾಖೆ ಹಾಗೂ ರೋಟರಿ ಸಂಸ್ಥೆ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

    ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಹಲವರನ್ನು ಕಾಡುತ್ತಿದ್ದ ಪೋಲಿಯೋ ಮಾರಿ ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಯ ಶ್ರಮದಿಂದ ಹಂತ ಹಂತವಾಗಿ ಹತೋಟಿಗೆ ಬಂದಿದೆ. ತಾಯಂದಿರು ಮರೆಯದೆ ಪೋಲಿಯೋ ಹನಿ ಹಾಕಿಸುವ ಮೂಲಕ ಮಕ್ಕಳನ್ನು ರೋಗಮುಕ್ತಗೊಳಿಸಬೇಕು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಕಾಣಿಸಿಕೊಂಡಿದ್ದು, ತಾಲೂಕಿನಲ್ಲಿ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ಜಿ.ಚಂದ್ರಶೇಖರ್ ಮಾತನಾಡಿ, ದೇಶದಲ್ಲಿ ಪೋಲಿಯೋ ನಿರ್ಮೂಲನೆಯಾಗಿದ್ದು, ಕಳೆದ 13 ವರ್ಷಗಳಿಂದ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. ತರೀಕೆರೆ 10,995, ಅಜ್ಜಂಪುರ ತಾಲೂಕಿನಲ್ಲಿ 5,527 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಇದಕ್ಕಾಗಿ ತರೀಕೆರೆ ತಾಲೂಕಿನ ವಿವಿಧೆಡೆ 77 ಸ್ಥಿರ, 3 ಮೊಬೈಲ್ ಹಾಗೂ 10 ಟ್ರಾನ್ಸಿಟ್ ಬೂತ್ ಸ್ಥಾಪಿಸಲಾಗಿದೆ. 360 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ 37 ಸ್ಥಿರ, 5 ಟ್ರಾನ್ಸಿಟ್ ಬೂತ್ ತೆರೆದು 168 ಲಸಿಕಾದಾರರ ಮೂಲಕ ಪೋಲಿಯೋ ಹನಿ ಹಾಕಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
    ಗ್ರಾಮಾಂತರ ಪ್ರದೇಶದಲ್ಲಿ 2, ಪಟ್ಟಣ ಪ್ರದೇಶದಲ್ಲಿ 3 ದಿನಗಳ ಕಾಲ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದೆ ಉಳಿದ ಎಲ್ಲ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಯೋಜನೆ ರೂಪಿಸಲಾಗಿದೆ. ಪಾಲಕರು ಆಸಕ್ತಿ ವಹಿಸಿ ಲಸಿಕಾದಾರರ ಕರ್ತವ್ಯ ನಿರ್ವಹಣೆಗೆ ಸಹಕರಿಸಬೇಕು ಎಂದರು.
    ಪುರಸಭೆ ಉಪಾಧ್ಯಕ್ಷೆ ಆರ್.ದಿವ್ಯಾ, ಸದಸ್ಯ ಟಿ.ಜಿ.ಲೋಕೇಶ್, ರೋಟರಿ ಸಂಸ್ಥೆ ಸಹಾಯಕ ಮಾಜಿ ಗವರ್ನರ್ ಜಿ.ಸಿ.ಶರತ್, ಆಡಳಿತ ವೈದ್ಯಾಧಿಕಾರಿ ಡಾ. ಮೋಹನ್, ವೈದ್ಯರಾದ ಡಾ. ಮಂಜುನಾಥ್, ಡಾ. ನಾಗರಾಜ್, ಡಾ. ಚನ್ನಬಸಪ್ಪ, ಡಾ. ರವಿಶಂಕರ್, ಆಯುಷ್ ವೈದ್ಯ ಡಾ. ಬಿ.ವಿ.ಕಿಶೋರ್, ಆರೋಗ್ಯ ಶಿಕ್ಷಣಾಧಿಕಾರಿ ಜಿ.ಶಿವಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts