More

    ಆರೋಗ್ಯ ತಪಾಸಣೆಗೆ ‘ವಾತ್ಸಲ್ಯ’

    ಹಾವೇರಿ: ಕರೊನಾ ಸಂಭವನೀಯ 3ನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಮಕ್ಕಳ ಆರೋಗ್ಯ ತಪಾಸಣೆ ಶಿಬಿರಕ್ಕೆ ‘ವಾತ್ಸಲ್ಯ’ ಎಂದು ನಾಮಕರಣ ಮಾಡಲಾಗಿದ್ದು, ಇದು ದೇಶದಲ್ಲಿಯೇ ಮೊದಲು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಈಗಾಗಲೇ ರಾಜ್ಯದ ಗಮನ ಸೆಳೆದಿದೆ. ಜಿಲ್ಲೆಯಲ್ಲಿ ಆರಂಭಿಸಿರುವ ಮಕ್ಕಳ ಆರೋಗ್ಯ ಶಿಬಿರದಲ್ಲಿ ತಪಾಸಣೆಗೊಳಗಾದ ಮಗುವಿಗೆ ವಾತ್ಸಲ್ಯ ಹೆಸರಿನ ಪ್ರತ್ಯೇಕ ಆರೋಗ್ಯ ಕಾರ್ಡ್ ನೀಡಲಾಗುವುದು. ಈಗಾಗಲೇ ಈ ಕಾರ್ಯಕ್ರಮಕ್ಕಾಗಿ 3 ಲಕ್ಷ ಆರೋಗ್ಯ ಕಾರ್ಡ್ ಮುದ್ರಣಗೊಳ್ಳುತ್ತಿವೆ. ಕಾರ್ಡ್​ನಲ್ಲಿ ಮಕ್ಕಳ ವಿವರದೊಂದಿಗೆ ಅವರ ಆರೋಗ್ಯ ಮಾಹಿತಿ, ವೈದ್ಯಕೀಯ ಸಲಹೆ, ಶಿಫಾರಸ್ಸುಗಳನ್ನು ನಮೂದಿಸಲಾಗುವುದು ಎಂದರು.

    ಜಿಲ್ಲೆಯಲ್ಲಿ 1,320 ಶಾಲೆಗಳು, 1,918 ಅಂಗನವಾಡಿಗಳಲ್ಲಿ ಈಗಾಗಲೇ 314 ಶಾಲೆಗಳು ಹಾಗೂ 510 ಅಂಗನವಾಡಿ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲಾಗಿದೆ. 18 ವರ್ಷದೊಳಗಿನ 2,98,875 ಮಕ್ಕಳು ಜಿಲ್ಲೆಯಲ್ಲಿದ್ದು, ಎಲ್ಲರ ಆರೋಗ್ಯ ತಪಾಸಣೆ ಗುರಿ ಹೊಂದಲಾಗಿದೆ. ಈವರೆಗೆ 58,560 ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇದರಲ್ಲಿ 3,515 ಮಕ್ಕಳಿಗೆ ತಪಾಸಣೆ ವೇಳೆ ವಿವಿಧ ಆರೋಗ್ಯ ಸಮಸ್ಯೆಗಳು ಕಂಡುಬಂದಿವೆ. 313 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳು ಪತ್ತೆಯಾಗಿದ್ದಾರೆ. ಬೆಳವಣಿಗೆ ಕುಂಠಿತ 180 ಮಕ್ಕಳನ್ನು ಗುರುತಿಸಲಾಗಿದೆ. 590 ಮಕ್ಕಳಿಗೆ ಸೌಮ್ಯ ಸ್ವಭಾವದ ಕೋವಿಡ್ ಲಕ್ಷಣಗಳು ಕಂಡುಬಂದಿದೆ. ಸೌಮ್ಯಲಕ್ಷಣ ಕಂಡುಬಂದ ಎಲ್ಲ ಮಕ್ಕಳಿಗೂ ಆರ್​ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಎಲ್ಲ ಮಕ್ಕಳ ವರದಿ ನೆಗಟಿವ್ ಬಂದಿದೆ. ತೀವ್ರ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ಸೂಕ್ತ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ. ವಿವಿಧ ಆರೋಗ್ಯ ಸಮಸ್ಯೆಯಿರುವ ಮಕ್ಕಳಿಗೆ ಸುವರ್ಣ ಆರೋಗ್ಯ ಟ್ರಸ್ಟ್ ಯೋಜನೆಯಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದರು.

    ಮಕ್ಕಳ ಆರೋಗ್ಯ ತಪಾಸಣೆಗೆ ಜಿಲ್ಲೆಯ ಎಲ್ಲ ವೈದ್ಯರೂ, ಅರೆವೈದ್ಯಕೀಯ ಸಿಬ್ಬಂದಿ, ಖಾಸಗಿ ಆಸ್ಪತ್ರೆಯ 27 ಮಕ್ಕಳ ವೈದ್ಯರು ಕೈಜೋಡಿಸಿದ್ದಾರೆ. ಜುಲೈ 30ರೊಳಗಾಗಿ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ. ಮೊದಲ ಸುತ್ತಿನಲ್ಲಿ ಆರೋಗ್ಯ ತಪಾಸಣೆಯಿಂದ ಹೊರಗಳಿದ ಮಕ್ಕಳಿಗೆ 2ನೇ ಸುತ್ತಿನಲ್ಲಿ ಕಾರ್ಯಕ್ರಮ ಹಾಕಿಕೊಂಡು ನಿಗದಿತ ಗುರಿಯಂತೆ ಎಲ್ಲ ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗುವುದು. ಕೋವಿಡ್ ಸೋಂಕಿತ ಮಕ್ಕಳ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಯಲ್ಲಿ 30 ಹಾಸಿಗೆ ಹಾಗೂ ಪ್ರತಿ ತಾಲೂಕಿನಲ್ಲಿ ತಲಾ 10 ಹಾಸಿಗೆಗಳ ಐಸಿಯು ಸಹಿತ ಮಕ್ಕಳ ವಿಶೇಷ ಕೋವಿಡ್ ವಾರ್ಡ್ ಸಿದ್ಧಪಡಿಸಲಾಗಿದೆ ಎಂದರು.

    ಸಿಇಒ ಮಹಮ್ಮದ್ ರೋಷನ್ ಮಾತನಾಡಿ, ತೀವ್ರ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಪ್ರೋಟಿನ್ ಪೌಡರ್, ಹಸಿವು ಹೆಚ್ಚಿಸುವ ಮಾತ್ರೆಗಳು, ಪೌಷ್ಟಿಕ ಆಹಾರ ಸಾಮಗ್ರಿ ಜತೆಗೆ ಬಾಲವಿಕಾಸ ಯೋಜನೆಯಡಿ ತಿಂಗಳಿಗೆ 25 ಮೊಟ್ಟೆಗಳ ವಿತರಣೆ ಜತೆಗೆ ಎಂಟು ಮೊಟ್ಟೆಗಳನ್ನು ಹೆಚ್ಚುವರಿಯಾಗಿ ನೀಡಲು ಕ್ರಮವಹಿಸಲಾಗಿದೆ. ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಡ್ರೈರೇಷನ್ ವಿತರಣೆಗೆ ಕ್ರಮವಹಿಸಲಾಗಿದೆ ಎಂದರು. ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ಸುದ್ದಿಗೋಷ್ಠಿಯಲ್ಲಿದ್ದರು.

    ತಜ್ಞ ವೈದ್ಯರ ತಂಡದ ವರದಿ ಶೀಘ್ರ: ಜಿಲ್ಲೆಯಲ್ಲಿ ಕರೊನಾದಿಂದ ಸಾವಿನ ಪ್ರಮಾಣ ಹೆಚ್ಚಿದ್ದರಿಂದ ಅದರ ಅಧ್ಯಯನಕ್ಕಾಗಿ ಜಿಲ್ಲೆಗೆ ನಾಲ್ಕು ಜನ ತಜ್ಞ ವೈದ್ಯರ ತಂಡ 2ದಿನಗಳ ಪರಿಶೀಲನೆ ಮುಗಿಸಿದೆ. ಸಾವಿನ ಪ್ರಮಾಣ ನಿಯಂತ್ರಣಕ್ಕೆ ಏನು ಮಾಡಬೇಕು ಎಂಬ ಕುರಿತು ಶೀಘ್ರದಲ್ಲಿಯೇ ಅವರು ವರದಿ ನೀಡಲಿದ್ದಾರೆ. ಬ್ಲ್ಯಾಕ್ ಫಂಗಸ್ ಒಟ್ಟು 53 ಪ್ರಕರಣಗಳು ವರದಿಯಾಗಿದ್ದವು. ಇದೀಗ 22 ಜನರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ಔಷಧದದ ಕೊರತೆಯಿಲ್ಲ. ಶಸ್ತ್ರ ಚಿಕಿತ್ಸೆಯನ್ನು ಮುಂದಿನ ದಿನಗಳಲ್ಲಿ ಇಲ್ಲಿಯೇ ನಡೆಸಲು ಜುಲೈ 1ರಿಂದ ಜಿಲ್ಲಾಸ್ಪತ್ರೆಯ ವೈದ್ಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

    ರಾಜ್ಯದಲ್ಲಿ ವಾತ್ಸಲ್ಯ ಅಳವಡಿಕೆ: ವಾತ್ಸಲ್ಯ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸುವ ಆಶಯ ಹೊಂದಿದೆ. ಈ ಕಾರ್ಯಕ್ರಮ ಕುರಿತು ಸರ್ಕಾರದ ಅಭಿವೃದ್ಧಿ ಅಪರ ಕಾರ್ಯದರ್ಶಿ ವಂದನಾ ಶರ್ಮಾ ಹಾಗೂ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೀದ್ ಅಕ್ತರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಸಿಇಒ ಮಹಮ್ಮದ್ ರೋಷನ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts