More

    ಆರೋಗ್ಯ ಬಯಸುವವರಿಗೆ ಇದು ‘ಕಿವಿ’ಮಾತು: 10 ಬಹೂಪಯೋಗಿ ಅಂಶಗಳು..

    ಬೆಂಗಳೂರು: ಕಿವಿಹಣ್ಣಿನ ಸೇವನೆ ಆರೋಗ್ಯಕ್ಕೆ ಬಹುಪ್ರಯೋಜನಕಾರಿಯಾಗಿದೆ. ಇದು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಸಂಪದ್ಭರಿತ ಹಣ್ಣಾಗಿದ್ದು, ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಸೂಕ್ಷ್ಮ ರೋಮಗಳಿಂದ, ಕಂದುಬಣ್ಣದಲ್ಲಿ ಮೊಟ್ಟೆ ಆಕಾರದಲ್ಲಿರುವ ಕಿವಿಹಣ್ಣು ವಿಟಮಿನ್ ಸಿ ಪೋಷಕಾಂಶದ ಸಮೃದ್ಧ ಆಗರವಾಗಿದೆ. ಈ ಹಣ್ಣುಗಳು ಹುಳಿಮಿಶ್ರಿತ ಸಿಹಿ ರುಚಿ ಹೊಂದಿದ್ದು, ಕಂದು ಬಣ್ಣದ ಸಿಪ್ಪೆ ಸುಲಿದರೆ ತಿಳಿ ಹಸಿರಿನ ತಿರುಳಿನಲ್ಲಿ ಸಣ್ಣ ಸಣ್ಣ ಕಪ್ಪು ಬೀಜಗಳೊಂದಿಗೆ ವಿಶಿಷ್ಟ ಪರಿಮಳ ಸೂಸುತ್ತದೆ.

    ಕಿವಿಯು ಫೈಬರ್, ವಿಟಮಿನ್ ಸಿ, ಪೋಲೇಟ್, ತಾಮ್ರ, ಪೊಟ್ಯಾಶಿಯಂ, ಉತ್ಕರ್ಷಣಾ ನಿರೋಧಕಗಳು, ವಿಟಮಿನ್ ಇ ಮತ್ತು ಕೆ ಯಂತಹ ಸಂಪೂರ್ಣ ಶ್ರೇಣಿಯ ಪೋಷಕಾಂಶಗಳನ್ನು ಹೊಂದಿದೆ. ಕಿವಿಹಣ್ಣು ವಾರ್ಷಿಕ ಬೆಳೆಯಾಗಿದ್ದು, ಎಲ್ಲ ಋತುಮಾನದಲ್ಲಿಯೂ ದೊರಕುವ ಹಣ್ಣು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನವೆಂಬರ್​​ನಿಂದ ಮೇ ವರೆಗೆ ಕಿವಿಹಣ್ಣು ಬೆಳೆದರೆ, ನ್ಯೂಜಿಲ್ಯಾಂಡ್‍ನಲ್ಲಿ ಜೂನ್‍ನಿಂದ ಅಕ್ಟೋಬರ್​ವರೆಗೆ ಕಿವಿಹಣ್ಣು ಕೃಷಿ ಮಾಡುತ್ತಾರೆ.

    ಈ ಕಿವಿಹಣ್ಣಿನಲ್ಲಿ 50 ವಿವಿಧ ಪ್ರಭೇದಗಳಿದ್ದು, ಇದರ ತಿರುಳು ಚಿನ್ನದ ಬಣ್ಣದ ಕಸ್ಟರ್ಡ್‍ನಂತಹ ಬಣ್ಣ ಹೊಂದಿದ್ದರೆ, ಮತ್ತೆ ಕೆಲವು ತಿಳಿಗುಲಾಬಿ ಬಣ್ಣದಿಂದ ಹಾಗೂ ರುಚಿಯಿಂದಲೂ ವೈವಿಧ್ಯತೆ ಹೊಂದಿವೆ. ಇವುಗಳ ಹೊರಮೈ ಒಂದೇ ತರಹ ಇದ್ದರೂ, ಒಳಗಿನ ತಿರುಳಿನ ಬಣ್ಣ ಮಾತ್ರ ಬೇರೆ ಬೇರೆಯಾಗಿರುತ್ತದೆ.

    ಕಿವಿಹಣ್ಣು ಪೌಷ್ಟಿಕಾಂಶಗಳ ಆಗರ

    ಕಿವಿಹಣ್ಣು ಅತಿಹೆಚ್ಚು ವಿಟಮಿನ್ ಸಿ ಅಂಶವನ್ನು ಹೊಂದಿದೆ ಎಂದು ನಾವು ಕೇಳಿದ್ದೇವೆ. ಆದರೆ ಅದರೊಂದಿಗೆ ನೀವು ನಂಬಲಾಗದ ಅದೆಷ್ಟೋ ಪೌಷ್ಟಿಕಾಂಶಗಳು ಇದರಲ್ಲಿ ಸೇರಿವೆ. 
    100 ಗ್ರಾಂ ಕಚ್ಚಾ ಕಿವಿ ಹಣ್ಣಿನ ಪೌಷ್ಟಿಕಾಂಶದ ವಿವರ: ಶೇ.61 ಕ್ಯಾಲರಿಗಳು, ಶೇ.0.5 ಗ್ರಾಂ ಕೊಬ್ಬು, 3 ಮಿಗ್ರಾಂ ಸೋಡಿಯಂ, 15 ಗ್ರಾಂ ಕಾರ್ಬೋಹೈಡ್ರೇಟ್‍ಗಳು, 9 ಗ್ರಾಂ ಸಕ್ಕರೆ, 3 ಗ್ರಾಂ ಆಹಾರದ ಫೈಬರ್, 1.1 ಗ್ರಾಂ ಪ್ರೋಟೀನ್.

    ಆಸ್ಕೋರ್ಬಿಕ್ ಆಮ್ಲ ಎಂದೂ ಕರೆಯಲ್ಪಡುವ ವಿಟಮಿನ್ ಸಿ ದೇಹದ ಅಂಗಾಂಶಗಳ ಬೆಳವಣಿಗೆ, ದುರಸ್ತಿ ಮತ್ತು ನಮ್ಮ ರೋಗನಿರೋಧಕಶಕ್ತಿ ವೃದ್ಧಿಗೆ ಕಾರಣವಾಗಿದೆ. ವಿಟಮಿನ್ ಸಿ ಜತೆಗೆ, ಕಿವಿ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಕೆ ಹೊಂದಿದೆ.

    ವಿಟಮಿನ್ ಕೆ, ಕೊಬ್ಬಿನಲ್ಲಿ ಕರಗುವ ಪೌಷ್ಟಿಕಾಂಶವಾಗಿದ್ದು, ಇದು ರಕ್ತ ಹೆಪ್ಪುಗಟ್ಟುವಿಕೆ, ಚಯಾಪಚಯ ಮತ್ತು ರಕ್ತದ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುತ್ತದೆ. ತಾಮ್ರವು ಕೆಂಪು ರಕ್ತಕಣಗಳನ್ನು ರೂಪಿಸಲು ಕಬ್ಬಿಣದೊಂದಿಗೆ ಕೆಲಸ ಮಾಡುವ ಪೋಷಕಾಂಶವಾಗಿದೆ. ಆರೋಗ್ಯಕರ ಮೂಳೆಗಳು, ನರಗಳು ಮತ್ತು ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುವುದಲ್ಲದೆ, ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಿವಿ ಸರಿಯಾದ ಪ್ರಮಾಣದಲ್ಲಿ ಫೋಲೇಟ್, ಪೊಟ್ಯಾಶಿಯಂ ಮತ್ತು ಫೈಬರ್ ಅಂಶವನ್ನು ಹೊಂದಿದೆ.

    ಕಿವಿ ಹಣ್ಣಿನಿಂದಾಗುವ ಆರೋಗ್ಯಕಾರಿ ಪ್ರಯೋಜನಗಳು

    1. ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ: ಕಿವಿ ಹಣ್ಣು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಜತೆಗೆ ರಕ್ತದಲ್ಲಿನ ಕೊಬ್ಬಿನ ಪ್ರಮಾಣವನ್ನು ತಗ್ಗಿಸುವ ಮೂಲಕ ರಕ್ತದೊತ್ತಡ ನಿಯಂತ್ರಿಸುತ್ತದೆ ಎನ್ನುತ್ತವೆ ಸಂಶೋಧನೆಗಳು.
      ರಕ್ತಹೆಪ್ಪುಗಟ್ಟುವುದನ್ನು ತಡೆಯಲು ಆಸ್ಪಿರಿನ್ ಎಂಬ ಔಷಧ ಸಾಮಾನ್ಯವಾಗಿ ಬಳಸುತ್ತಾರೆ. ಆದರೆ ಈ ಔಷಧ ಜಠರ ಹಾಗೂ ಕರುಳುಗಳಲ್ಲಿ ಉರಿಯೂತ ಉಂಟುಮಾಡಬಹುದು. ಜತೆಗೆ ಇದರಿಂದ ಹೊಟ್ಟೆಯಲ್ಲಿ ಹುಣ್ಣು ಆಗುವ ಸಾಧ್ಯತೆಗಳೂ ಇವೆ. ಇಂತಹ ಸಮಯದಲ್ಲಿ ನಿತ್ಯವು ಎರಡರಿಂದ ಮೂರು ಕಿವಿಹಣ್ಣುಗಳನ್ನು ಸೇವಿಸುವುದನ್ನು ರೂಢಿಸಿಕೊಂಡರೆ, ಇದು ರಕ್ತ ತಿಳಿಗೊಳಿಸುವುದಲ್ಲದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎನ್ನುತ್ತವೆ ಸಂಶೋಧನೆಗಳು.
    2. ಅಸ್ತಮಾ ತಡೆಯಲು ಸಹಾಯ: ಅಸ್ತಮಾದಿಂದ ಉಬ್ಬಸ ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು. ಆದರೆ ಕಿವಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿರುವುದರಿಂದ ಅಸ್ತಮಾದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಕಿವಿಯನ್ನು ನಿಯಮಿತವಾಗಿ ಸೇವಿಸುವವರಲ್ಲಿ ಶ್ವಾಸಕೋಶದ ಕಾರ್ಯವು ಸುಧಾರಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.
    3. ಜೀರ್ಣಕ್ರಿಯೆ ಸುಧಾರಣೆ: ಈ ಹಣ್ಣಿನಲ್ಲಿ ನಾರಿನಂಶ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನಾರಿನಂಶದ ಹೊರತಾಗಿ ಇದರ ತಿರುಳಿನಲ್ಲಿರುವ ಆಕ್ಟಿನೈಡಿನ್ ಎಂಬ ಕಿಣ್ವ ಜಠರದಲ್ಲಿ ಪ್ರೋಟಿನ್‍ಗಳನ್ನು ಒಡೆದು ಜೀರ್ಣವಾಗಲು ಸಹಾಯ ಮಾಡುತ್ತದೆ.
      ಊಟ ರುಚಿಯಾಗಿತ್ತೆಂದು ಒಂದು ತುತ್ತು ಹೆಚ್ಚಾಗಿ ತಿಂದರೆ ಕಿವಿ ಹಣ್ಣನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ ವೈದ್ಯರು. ಏಕೆಂದರೆ ಮಾಂಸಾಹಾರ, ಮೀನುಗಳಲ್ಲಿರುವ ಪ್ರೋಟಿನ್ ಅಂಶವನ್ನು ಆಕ್ಟಿನೈಡ್ ಕಿಣ್ವ ಒಡೆದು ಜೀರ್ಣವಾಗುವಂತೆ ಮಾಡುತ್ತದೆ. ಇದು ಹೊಟ್ಟೆ ಉಬ್ಬರವನ್ನು ತಡೆಯುತ್ತದೆ.
    4. ರಕ್ತದೊತ್ತಡ ನಿಯಂತ್ರಿಸುತ್ತದೆ: ಕಿವಿ ರಕ್ತದೊತ್ತಡವನ್ನು ಕಡಿಮೆ ಮಾಡುವ ಮೂಲಕ ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ಎಂಟು ವಾರಗಳ ಕಾಲ ದಿನಕ್ಕೆ 3 ಕಿವಿಗಳನ್ನು ಸೇವಿಸಿದವರ ಡಯಾಸ್ಟೊಲಿಕ್ ಮತ್ತು ಸಿಸ್ಟೊಲಿಕ್ ರಕ್ತದೊತ್ತಡದಲ್ಲಿ ಇಳಿಕೆ ಕಂಡುಬಂದಿದೆ ಎಂದು ಅಧ್ಯಯನವು ತಿಳಿಸಿದೆ. ಕಿವಿಯಲ್ಲಿ ಉತ್ಕರ್ಷಣ ನಿರೋಧಕ, ಲುಟೀನ್ ಇದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ.
    5. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಕಿವಿಯಲ್ಲಿರುವ ವಿಟಮಿನ್ ಸಿ ಅಂಶವು ಜೀವಕೋಶಗಳ ಕಾರ್ಯಕ್ಕೆ ಮತ್ತು ಇವುಗಳ ರಕ್ಷಣೆಗೆ ನೆರವು ನೀಡುತ್ತದೆ. ಇದು ಅಂಗಾಂಶಗಳ ಬೆಳವಣಿಗೆ ಮತ್ತು ದುರಸ್ತಿಗೆ ಕಾರಣವಾಗಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ. ಅತಿ ಹೆಚ್ಚಿನ ಪ್ರಮಾಣದಲ್ಲಿ ವಿ.ಸಿ ಪೋಷಕಾಂಶ ಹೊಂದಿರುವುದರಿಂದ ಇದು ನಮ್ಮ ಇಮ್ಯುನ್ ಸಿಸ್ಟಮ್‍ಮೇಲೆ ಅದ್ಬುತ ಪರಿಣಾಮವನ್ನೇ ಬೀರುತ್ತದೆ ಎನ್ನಲಾಗಿದೆ. ಕಿವಿಯ ನಿಯಮಿತ ಸೇವನೆಯಿಂದ ಸಾಮಾನ್ಯ ಶೀತ, ಕೆಮ್ಮು, ಸೋಂಕು ಮತ್ತು ಜ್ವರದಿಂದ ದೂರವಿರಬಹುದು ಎನ್ನುತ್ತವೆ ವೈದ್ಯಕೀಯ ವರದಿಗಳು.
    6. ಡಿಎನ್‍ಎ ಹಾನಿ ಕಡಿಮೆ ಮಾಡುತ್ತದೆ: ನಮ್ಮ ದೇಹದ ಪ್ರತಿ ಜೀವಕೋಶದ ಡಿಎನ್‍ಎ ರಚನೆ ವಿಶಿಷ್ಟವಾಗಿದ್ದು, ನಮ್ಮ ಗುಣಲಕ್ಷಣಗಳಿಗೆ ಕಾರಣವಾಗಿದೆ. ಈ ರಚನೆ ಬದಲಾದಾಗ ಅನಾರೋಗ್ಯ ಉಂಟಾಗುತ್ತದೆ. ಈ ಬದಲಾವಣೆಯನ್ನು ಸರಿಪಡಿಸಿ ಡಿಎನ್‍ಎ ರಚನೆಯನ್ನು ಮೂಲ ಸ್ವರೂಪಕ್ಕೆ ಹಿಂದಿರುಗಿಸುವಲ್ಲಿ ಕಿವಿಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ. ಕಿವಿಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳಿದ್ದು, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರರ್ಥ ಕಿವಿ ದೀರ್ಘಕಾಲದ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
    7. ದೃಷ್ಟಿ ನಷ್ಟವನ್ನು ತಪ್ಪಿಸುತ್ತದೆ: ಕಿವಿಯಲ್ಲಿ ಜಿಯಾಕ್ಸಾಂಥಿನ್ ಮತ್ತು ಲುಟೀನ್ (ಕಣ್ಣಿನ ವಿಟಮಿನ್) ಅಂಶಗಳು ಇರುತ್ತವೆ. ಈ ಎರಡು ಸಂಯುಕ್ತಗಳು ಉತ್ಕರ್ಷಣ ನಿರೋಧಕಗಳಂತೆ ಕಾರ್ಯ ನಿರ್ವಹಿಸುತ್ತವೆ. ಇವು ನಮ್ಮ ಕಣ್ಣುಗಳಿಗೆ ಅಗತ್ಯ ಪೋಷಕಾಂಶ ವಿಟಮಿನ್ ಎ ರೂಪಿಸುತ್ತವೆ. ಇವು ನಮ್ಮ ರೆಟಿನಾಗಳಿಗೆ ಹಾನಿ ಮಾಡುವ ಹೆಚ್ಚುವರಿ ಬೆಳಕನ್ನು ಹೀರಿಕೊಳ್ಳುತ್ತವೆ. ಕಣ್ಣಿನ ಪೊರೆ ಮತ್ತು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳಿಂದ ರಕ್ಷಿಸುತ್ತದೆ.
    8. ಉರಿಯೂತದ ವಿರುದ್ಧ ಹೋರಾಡುತ್ತದೆ: ಬ್ರೊಮೆಲೈನ್ ಇದು ಕಿವಿ, ಅನಾನಸ್ ಮತ್ತು ಹಸಿರು ಪಪ್ಪಾಯಿಯಲ್ಲಿ ಕಂಡುಬರುವ ಕಿಣ್ವವಾಗಿದ್ದು, ಪ್ರೋಟಿನ್‍ಗಳನ್ನು ಒಡೆಯುತ್ತವೆ ಮತ್ತು ಉರಿಯೂತವನ್ನು ಗುಣಪಡಿಸುತ್ತವೆ. ಕಿವಿಯನ್ನು ಸೇವಿಸಿದ ನಂತರ ಬ್ರೊಮೆಲಿನ್ ರಕ್ತಪ್ರವಾಹಕ್ಕೆ ಬಿಡುಗಡೆಯಾಗುತ್ತದೆ. ಅಲ್ಲಿ ಅದು ಉರಿಯೂತದ ಸಂಕೀರ್ಣಗಳನ್ನು ಒಡೆಯುತ್ತದೆ.
    9. ಚರ್ಮದ ಆರೋಗ್ಯ ಸುಧಾರಣೆ: ಕಾಲಜನ್ ಚರ್ಮದ ರಚನೆಯನ್ನು ಬೆಂಬಲಿಸುವ ಮತ್ತು ಮೂಳೆಗಳನ್ನು ಬಲಪಡಿಸುವ ಅತ್ಯಗತ್ಯ ಪೋಷಕಾಂಶವಾಗಿದೆ. ಕಿವಿಯಲ್ಲಿರುವ ವಿಟಮಿನ್ ಸಿ ದೇಹದಲ್ಲಿ ಕಾಲಜನ್ ಸಂಶ್ಲೇಷಣೆಯಲ್ಲಿ ಪ್ರಮುಖ ಅಂಶವಾಗಿದೆ. ಕಿವಿ ತಿನ್ನುವುದರಿಂದ ಚರ್ಮದ ರಚನೆಗೆ ಮತ್ತು ತೇವಾಂಶ ಕಾಪಾಡಿಕೊಂಡು ಚರ್ಮ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಕಿವಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ಮತ್ತು ವಿ.ಸಿ ಅಂಶವು ಮೊಡವೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.
    10. ತೂಕ ನಷ್ಟಕ್ಕೆ ಪರಿಣಾಮಕಾರಿ ಕಿವಿ: ತೂಕ ಇಳಿಕೆಗೆ ಕಿವಿ ಹಣ್ಣು ದಿ ಬೆಸ್ಟ್ ಹಣ್ಣು. ಇದು ಹೆಚ್ಚಿನ ನೀರಿನಂಶ ಹೊಂದಿದ್ದು, ಕಡಿಮೆ ಪ್ರಮಾಣದ ಕ್ಯಾಲರಿ ಮತ್ತು ಉತ್ತಮ ಫೈಬರ್ ಅಂಶ ಹೊಂದಿದೆ. ಇದನ್ನು ಲಘು ಆಹಾರವಾಗಿ ಅಥವಾ ಉಪಹಾರ ಸ್ಮೂಥಿಯ ಭಾಗವಾಗಿ ಬಳಸಬಹುದು. ಕಿವಿ ಹಣ್ಣಿನಲ್ಲಿ ಯಥೇಚ್ಛ ವಿಟಮಿನ್ ಸಿ ಪೋಷಕಾಂಶ ಇರುವುದರಿಂದ ತೂಕ ಇಳಿಕೆಗೆ ಪರಿಣಾಮಕಾರಿಯಾಗಿದೆ.

    ಹಣೆಯೇ ಹೇಳುತ್ತೆ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ..; ನಿಮ್ಮ ವ್ಯಕ್ತಿತ್ವವನ್ನೂ ಇಲ್ಲಿ ತಿಳಿದುಕೊಳ್ಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts