More

    ಹ್ಯಾಕರ್ಸ್ ಮೋಹಕ್ಕೆ ಬಿದ್ದ, ಪತ್ನಿಯಿಂದಲೇ ದೂರಾದ!…ಸೈಬರ್ ಜಾಲದಲ್ಲಿ 37 ಲಕ್ಷ ರೂ. ಕಳಕೊಂಡ

    ಬ್ಯಾಂಕ್ ಖಾತೆಗೆ ಕನ್ನ, ಬಿಟ್​ಕಾಯಿನ್ ವಂಚನೆ, ಡಾಟಾ ಕಳ್ಳತನದಂಥ ಹಲವು ಸೈಬರ್ ಖದೀಮರ ಕೈ ಚಳಕದ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಟೆಕ್ಕಿ ಆನ್​ಲೈನ್​ನಲ್ಲಿ ವಿದೇಶಿ ಕಂಪನಿ ಉದ್ಯೋಗ ಹುಡುಕಲು ಹೊಗಿ ಸೈಬರ್ ಕಳ್ಳರ ಖೆಡ್ಡಕ್ಕೆ ಬಿದ್ದು 25 ಲಕ್ಷ ರೂ. ಕಳೆದುಕೊಂಡಿದ್ದಾನೆ. ಈ ಹಣ ವಾಪಾಸ್ ಪಡೆಯಲು

    ಡಾರ್ಕ್​ವೆಬ್ ಮೂಲಕ ಹ್ಯಾಕರ್ಸ್ ಅನ್ನು ಸಂಪರ್ಕಿಸಿ ಅವರಿಗೂ 12 ಲಕ್ಷ ರೂ. ಕೊಟ್ಟು ಕೈಸುಟ್ಟಿಕೊಂಡಿದ್ದಾನೆ. ಇಷ್ಟು ಸಾಲದೆಂಬಂತೆ, ಮಹಿಳಾ ಹ್ಯಾಕರ್ಸ್ ಮೋಹಕ್ಕೆ ಬಿದ್ದ ಆತನನ್ನು ಪತ್ನಿಯೂ ತೊರೆದಿದ್ದಾಳೆ… ಇದೀಗ ಪತ್ನಿ ಬೇಕು ಎಂದು ಆತ ನಗರ ಪೊಲೀಸ್ ಆಯುಕ್ತರ ಕಚೇರಿಯ ಪರಿಹಾರ್ ಕೌಟುಂಬಿಕ ಸಲಹಾ ಕೇಂದ್ರದ ಮೊರೆ ಹೋಗಿದ್ದಾನೆ. 34 ವರ್ಷದ ವೈಟ್​ಫೀಲ್ಡ್ ನಿವಾಸಿ ನವೀನ್ (ಹೆಸರು ಬದಲಿಸಿದೆ) ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ. ಸಹೋದ್ಯೋಗಿ ಮೋನಿಕಾಳನ್ನು (ಹೆಸರು ಬದಲಿಸಿದೆ) ಪ್ರೀತಿಸಿ ವಿವಾಹವಾಗಿದ್ದ. ದಂಪತಿ ಸಾಲ ಮಾಡಿ ನಗರದಲ್ಲಿ ಅಪಾರ್ಟ್​ವೆುಂಟ್ ಖರೀದಿಸಿದ್ದರು. ದಂಪತಿಗೆ 1 ವರ್ಷದ ಮಗು ಇದೆ. ಈ ನಡುವೆ ಹೆಚ್ಚು ಹಣ ಸಂಪಾದಿಸಿ ಬೇಗ ಸಾಲ ತೀರಿಸಬೇಕು ಎಂದು ಯೋಜಿಸಿದ್ದ ನವೀನ್, ಕೆಲಸಕ್ಕೆ ರಾಜೀನಾಮೆ ನೀಡಿ, ವಿದೇಶಿ ಕಂಪನಿ ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದ.

    ಆನ್​ಲೈನ್​ನಲ್ಲಿ ವಂಚನೆ: 2 ತಿಂಗಳ ಹಿಂದೆ ಆನ್​ಲೈನ್​ನಲ್ಲಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ದುಬೈ ನಲ್ಲಿರುವ ಸಾಫ್ಟ್ ವೇರ್ ಕಂಪನಿಯಲ್ಲಿ ಉದ್ಯೋಗ ಇರುವ ಬಗ್ಗೆ ಜಾಹೀರಾತು ನೋಡಿ, ಆ ವೆಬ್​ಸೈಟ್​ಗೆ ರೆಸ್ಯೂಮ್ ಕಳಿಸಿದ್ದ. ದುಬೈ ಕಂಪನಿ ಹೆಸರಲ್ಲಿ ಈತನಿಗೆ ಕರೆ ಮಾಡಿದ ವ್ಯಕ್ತಿಗಳು, ಪ್ರತಿ ತಿಂಗಳು ಲಕ್ಷಾಂತರ ರೂ. ವೇತನ, ಒಂದು ವರ್ಷಕ್ಕೆ ದುಬೈನಲ್ಲಿ ಕುಟುಂಬ ಸಮೇತ ನೆಲೆಸಲು ಐಷಾರಾಮಿ ಗೆಸ್ಟ್​ಹೌಸ್, ವೀಸಾ, ಇನ್ಶೂರೆನ್ಸ್ ಹಾಗೂ ಇನ್ನಿತರ ಸೌಲಭ್ಯವನ್ನು ನೀಡುವುದಾಗಿ ತಿಳಿಸಿದ್ದರು. ಆದರೆ, ಕೆಲಸಕ್ಕೆ ಸೇರುವ ಮೊದಲು 25 ಲಕ್ಷ ರೂ. ಕೊಡಬೇಕು. ಕೆಲಸ ಬಿಡುವ ವೇಳೆ ಆ ಹಣ ವಾಪಸ್ ಆಗಲಿದೆ ಎಂದಿದ್ದರು. ಈ ಬಗ್ಗೆ ಪತ್ನಿಗೆ ತಿಳಿಸಿದ ನವೀನ್, ಕೆಲಸ ಗಿಟ್ಟಿಸಿಕೊಳ್ಳಲೇಬೇಕೆಂದು ಮೂರ್ನಾಲ್ಕು ಬ್ಯಾಂಕ್​ಗಳಿಂದ ಸಾಲ ಪಡೆದು 25 ಲಕ್ಷ ರೂ. ಹೊಂದಿಸಿ ಆನ್​ಲೈನ್ ಮೂಲಕ ದುಬೈ ಕಂಪನಿಗೆ ನೀಡಿದ್ದ. ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟವರು ಕೆಲ ಸಮಯದ ಬಳಿಕ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅನುಮಾನಗೊಂಡು ವೆಬ್​ಸೈಟ್ ಪರಿಶೀಲಿಸಿದಾಗ ಆ ಕಂಪನಿ ಹೆಸರಿನ ವೆಬ್​ಸೈಟ್ ಇರಲಿಲ್ಲ. ಆಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ.

    ಪತಿಯನ್ನು ತೊರೆದ ಪತ್ನಿ

    ಈ ನಡುವೆ ಸಾಲ ನೀಡಿದ್ದ ಬ್ಯಾಂಕ್​ನಿಂದ ಬಡ್ಡಿ ಕಟ್ಟುವಂತೆ ನವೀನ್​ಗೆ ನೋಟಿಸ್ ಬಂದಿತ್ತು. ಬಡ್ಡಿ ಕಟ್ಟಲು ಹಣ ಇಲ್ಲದಿದ್ದರಿಂದ ಪತ್ನಿಗೆ ಗೊತ್ತಾಗದಂತೆ ತನ್ನ ಫ್ಲಾ್ಯಟ್ ಮಾರಿದ್ದ. ಇತ್ತೀಚೆಗೆ ನವೀನ್ ಪತ್ನಿ ಮೋನಿಕಾ ಆತನ ಮೊಬೈಲ್ ಪರಿಶೀಲಿಸಿದಾಗ ವಿದೇಶಿ ಹ್ಯಾಕರ್ಸ್ ಜತೆ ಸಲುಗೆಯಿಂದ ಮಾತನಾಡಿದ್ದು ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ನಡೆದ ಸಂಗತಿಯನ್ನು ವಿವರಿಸಿದ್ದ. ಆಕ್ರೋಶಗೊಂಡ ಪತ್ನಿ, ಬ್ಯಾಂಕ್ ಸಾಲವನ್ನು ವಿದೇಶಿ ಮಹಿಳೆಗೆ ಕೊಟ್ಟಿದ್ದಾನೆ ಎಂದು ಭಾವಿಸಿ ಆತನನ್ನು ತೊರೆದಿದ್ದಾಳೆ.

    ಹ್ಯಾಕರ್ಸ್ ಮೊರೆ ಹೋದ

    ವಿದೇಶಿ ಉದ್ಯೋಗದ ಆಸೆಯಲ್ಲಿ 25 ಲಕ್ಷ ರೂ. ಕಳೆದುಕೊಂಡ ವಿಚಾರವನ್ನು ಪತ್ನಿ ಗಮನಕ್ಕೆ ತಾರದ ಟೆಕ್ಕಿ, ಹ್ಯಾಕರ್ಸ್​ಗಳ ಮೊರೆ ಹೋಗಿ ಕಳೆದುಕೊಂಡ ಹಣ ಪಡೆಯಲು ಪ್ರಯತ್ನಿಸಿದ್ದ. ಅದರಂತೆ ಡಾರ್ಕ್​ವೆಬ್ ವೆಬ್​ಸೈಟ್​ಗೆ ಹೋಗಿ ಅಮೆರಿಕದ ಇಬ್ಬರು ಹ್ಯಾಕರ್ಸ್​ಗಳನ್ನು ಸಂರ್ಪಸಿ ತನಗಾದ ವಂಚನೆ ವಿವರಿಸಿದ್ದ. ಕಳೆದುಕೊಂಡ ಹಣ ಮರಳಿಸುತ್ತೇವೆ. ಆದರೆ, 2 ಲಕ್ಷ ರೂ. ಮೊದಲೇ ನಮಗೆ ಪಾವತಿಸಬೇಕು ಎಂದು ಹ್ಯಾಕರ್ಸ್ ಹೇಳಿದ್ದರು. ಅದರಂತೆ ಅವರಿಗೆ ಆನ್​ಲೈನ್ ಮೂಲಕ 2 ಲಕ್ಷ ರೂ. ನೀಡಿದ್ದ. ಇಬ್ಬರು ಹ್ಯಾಕರ್ಸ್ ಪೈಕಿ ಮಹಿಳಾ ಹ್ಯಾಕರ್ ನವೀನ್ ಜತೆ ಚಾಟಿಂಗ್ ಮಾಡುತ್ತ ಸಲುಗೆ ಬೆಳೆಸಿಕೊಂಡಿದ್ದಳು. ‘ನನಗೆ ನಿನ್ನನ್ನು ಕಂಡರೆ ಇಷ್ಟ. ನಿನ್ನನ್ನು ಪ್ರೀತಿಸು ತ್ತೇನೆ’ ಎಂದಿದ್ದಳು. ಆಕೆಯ ಪ್ರೇಮಪಾಶಕ್ಕೆ ಸಿಲುಕಿದ ಟೆಕ್ಕಿ , ಆಕೆಯ ಬೇಡಿಕೆಯಂತೆ ಹಂತ- ಹಂತವಾಗಿ ಆನ್​ಲೈನ್ ಮೂಲಕ 10 ಲಕ್ಷ ರೂ. ಪಾವತಿಸಿದ್ದ. ನಂತರ ಹ್ಯಾಕರ್ಸ್ ಈತನ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಪರಿಹಾರ್ ಕೌಟುಂಬಿಕ ಸಲಹಾ ಕೇಂದ್ರದ ಕೌನ್ಸೆಲರ್ ಡಾ.ಬಿಂದ್ಯಾ ತಿಳಿಸಿದ್ದಾರೆ.

    | ಅವಿನಾಶ ಮೂಡಂಬಿಕಾನ ಬೆಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts