More

    ಸೋಲು-ಗೆಲುವು ಎರಡನ್ನೂ ಕಂಡವರು

    ಅವಿನಾಶ್ ಜೈನಹಳ್ಳಿ ಮೈಸೂರು
    ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದುದ್ದಕ್ಕೂ ಸಹಜವಾಗಿಯೇ ಹೋರಾಟದ ಮನೋಭಾವ ರೂಢಿಸಿಕೊಂಡು ಬಂದವರು ಮತ್ತು ಅದರಲ್ಲಿ ಸೋಲು-ಗೆಲುವು ಎರಡನ್ನೂ ಕಂಡವರು. ಹಿಂದುಳಿದ ವರ್ಗಗಳ ಬಗ್ಗೆ ಅಪಾರ ಕಾಳಜಿಯುಳ್ಳ ಅವರು ಇದೀಗ ಎರಡನೇ ಬಾರಿಗೆ ಮುಖ್ಯಮಂತ್ರಿ ಗಾದಿಯ ಬಳಿ ಬಂದು ನಿಂತಿದ್ದು, ಮೇ 20ರಂದು ಪ್ರಮಾಣ ವಚನ ಸ್ಪೀಕರಿಸಲಿದ್ದಾರೆ. ಇದು ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಮಹತ್ವದ ಮೈಲಿಗಲ್ಲು ಕೂಡ.

    ಈ ಹಿಂದೆ ಜೆಡಿಎಸ್‌ನಲ್ಲಿದ್ದಾಗ 2 ಬಾರಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದು ಇತಿಹಾಸ. 1996ರಲ್ಲಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿ ಆಯ್ಕೆಯಾದಾಗ ತೆರವಾದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಪ್ರಬಲ ಸ್ಪರ್ಧಿಯಾಗಿದ್ದರು. ಅಂದು ದೇವೇಗೌಡರ ಆಯ್ಕೆಯೂ ಸಿದ್ದರಾಮಯ್ಯ ಅವರೇ ಆಗಿದ್ದರು. ಆದರೆ ರಾಮಕೃಷ್ಣ ಹೆಗಡೆ ಅವರ ಬೆಂಬಲ ಹಾಗೂ ಹಿರಿತನದ ಆಧಾರದ ಮೇಲೆ ಆಗ ಜೆ.ಎಚ್. ಪಟೇಲರಿಗೆ ಮುಖ್ಯಮಂತ್ರಿ ಗಾದಿ ಒಲಿದು, ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಂತರ 2004ರಲ್ಲಿ ಕಾಂಗ್ರೆಸ್-ಜಾ.ದಳ ಮೈತ್ರಿ ಸರ್ಕಾರ ರಚನೆ ಕಾಲಕ್ಕೂ ಸಿದ್ದರಾಮಯ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ದೇವೇಗೌಡರೇ ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ಒಪ್ಪಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮತ್ತೆ ಉಪಮುಖ್ಯಮಂತ್ರಿ ಹುದ್ದೆಗೆ ಸೀಮಿತಗೊಳಿಸಿದರು. ಆ ವೇಳೆಗಾಗಲೇ ಸಿದ್ದರಾಮಯ್ಯ ರಾಜಕೀಯವಾಗಿ ಪ್ರಬಲರಾಗಿದ್ದುದು, ತಮಗೇ ಮುಳುವಾಗಬಹುದೆಂಬ ಆತಂಕದಿಂದ ದೇವೇಗೌಡರು ಇವರನ್ನು ಮುಖ್ಯಮಂತ್ರಿ ಗಾದಿಯಿಂದ ದೂರವಿಡಲು ಕಾರಣವಾಗಿದ್ದು ರಹಸ್ಯವೇನಲ್ಲ. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದರು.

    ರಾಜ್ಯ ರಾಜಕೀಯದಲ್ಲಿ ಎಚ್.ಡಿ. ದೇವೇಗೌಡರನ್ನ್ನು ಎದುರು ಹಾಕಿಕೊಂಡವರ ರಾಜಕೀಯ ಜೀವನ ಮುಗಿದಂತೆ ಎಂಬ ಮಾತಿದೆ. ಆದರೆ ಅದಕ್ಕೆ ಸಿದ್ದರಾಮಯ್ಯ ಅಪವಾದವಾಗಿದ್ದಾರೆ. ತಮಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದರೆಂಬ ಕಾರಣಕ್ಕೆ ದೇವೇಗೌಡರ ವಿರುದ್ಧ ಮುನಿಸಿಕೊಂಡ ಸಿದ್ದರಾಮಯ್ಯ ನಂತರ ಉಪಮುಖ್ಯಮಂತ್ರಿ ಹುದ್ದೆಗೂ ಸಂಚಕಾರ ಬಂದಾಗ ಸಿಡಿದೆದ್ದು, ತಮ್ಮ ರಾಜಕೀಯ ಅಸ್ತಿತ್ವ ಸಾಬೀತುಪಡಿಸಲು ಅಹಿಂದ ಸಂಘಟನೆಯತ್ತ ಮುಖ ಮಾಡಿದರು. ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ, ಉಪಚುನಾವಣೆಯ ಹಣಾಹಣಿಯಲ್ಲಿ ಮತ್ತೆ ಗೆದ್ದು ತೊಡೆ ತಟ್ಟಿದರು. 2013ರಲ್ಲಿ ಯಾರ ಹಂಗಿಲ್ಲದೆ ಕಾಂಗ್ರೆಸ್ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವಷ್ಟು ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿತ್ತು. ಆ ವೇಳೆ ಸಿದ್ದರಾಮಯ್ಯ ಪ್ರಥಮ ಬಾರಿಗೆ ಮುಖ್ಯಮಂತ್ರಿಯಾದರು. ಡಿ.ದೇವರಾಜ ಅರಸು ನಂತರ ಮೈಸೂರು ಭಾಗದ ನಾಯಕರೊಬ್ಬರಿಗೆ 2013ರಲ್ಲಿ ಈ ಉನ್ನತ ಹುದ್ದೆ ಲಭಿಸಿತ್ತು. ಇದೀಗ ಅರಸು ಅವರಂತೆಯೇ 2ನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಒಲಿದು ಬಂದಿರುವುದು ಗಮನಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts