More

    ಆ ಕ್ಷಣ: ಕೊಲೆ ಮಾಡಿಯೂ ಬಚಾವಾದ…

    ಆ ಕ್ಷಣ: ಕೊಲೆ ಮಾಡಿಯೂ ಬಚಾವಾದ...ಐವತ್ತು ವರ್ಷ ವಯಸ್ಸಿನ ಚಂದ್ರಪ್ಪ ಜಿಲ್ಲಾ ಕೇಂದ್ರವೊಂದರಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ. ಆತ ನೆರೆ ಜಿಲ್ಲೆಯ ಶಾಂತಾಳನ್ನು ಲಗ್ನವಾಗಿದ್ದು ಅವರ ಏಕಮಾತ್ರ ಪುತ್ರ ಶ್ರೀನಿಧಿ ರಾಜ್ಯ ರಾಜಧಾನಿಯ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದು ಕಾಲೇಜಿನ ಬಳಿಯೇ ರೂಂ ಮಾಡಿಕೊಂಡಿದ್ದ. ಪತ್ನಿ ನೋಡಲು ಸುಂದರವಾಗಿದ್ದಾಳೆ, ಇತರ ಪುರುಷರು ಅವಳನ್ನು ತಮ್ಮತ್ತ ಸೆಳೆಯಬಹುದು ಎನ್ನುವ ಭಯ ಚಂದ್ರಪ್ಪನಿಗೆ ಆರಂಭದಿಂದಲೂ ಕಾಡುತ್ತಿತ್ತು. ಹೀಗಾಗಿ ಆತ ಅವಳನ್ನು ಮನೆಯಿಂದ ಹೊರಗೆ ಬರಲೇ ಬಿಡುತ್ತಿರಲಿಲ್ಲ. ಒಂದು ದಿನ ಪಕ್ಕದ ಮನೆಯ ಕುಮಾರ ಬಂದು, ‘ನೀನೇನೋ ಬೆಳಕು ಹರಿದಾಗಿನಿಂದ ರಾತ್ರಿಯವರೆಗೆ ಅಂಗಡಿಯಲ್ಲಿರುವೆ, ಈ ಸಮಯದಲ್ಲಿ ಮನೆಯಲ್ಲಿ ಏನಾಗುತ್ತಿದೆ ಎಂದು ನಿನಗೇನಾದರೂ ತಿಳಿದಿದೆಯೇ?’ ಎಂದಾಗ ಆಶ್ಚರ್ಯಗೊಂಡ ಚಂದ್ರಪ್ಪ, ಏನಾಗುತ್ತಿದೆ? ಎಂದ.

    ‘ನಿನ್ನ ಮನೆಗೆ ಕಾಲಕಾಲಕ್ಕೆ ಪಕ್ಕದೂರಿನ ರಾಜು ಎನ್ನುವವನು ಬರುವುದನ್ನು ನಾನು ನೋಡಿರುವೆ, ನೀನಿಲ್ಲದಾಗ ಅವನೇಕೆ ಬರಬೇಕು?’ ಎಂದ ಕುಮಾರ. ‘ನಮ್ಮ ಮದುವೆಯಾಗಿ 20 ವರ್ಷ ಕಳೆದಿದೆ. ರಾಜು ನನ್ನ ಹೆಂಡತಿಯ ಊರಿನವನೇ. ಅಲ್ಲದೆ ಅವಳಿಗೆ ಸೋದರ ಸಂಬಂಧಿಯೂ ಆಗಬೇಕು’ ಎಂದು ಉತ್ತರಿಸಿ ಚಂದ್ರಪ್ಪ ಅವನನ್ನು ಸಾಗಹಾಕಿದ. ಆ ರಾತ್ರಿ ಚಂದ್ರಪ್ಪ ತರಾಟೆಗೆ ತೆಗೆದುಕೊಂಡಾಗ ಶಾಂತಾ, ‘ನನಗೆ ಉಬ್ಬಸದ ರೋಗವಿರುವ ಕಾರಣ ರಾಜು ತನ್ನ ಗ್ರಾಮದ ನಾಟೀ ವೈದ್ಯರ ಮೂಲಕ ಔಷಧಿಗಳನ್ನು ತಂದುಕೊಡುತ್ತಾನೆ, ಈ ಕಾರಣಕ್ಕಾಗಿ ಅವನು ತಿಂಗಳಿಗೆರಡು ಬಾರಿ ಮನೆಗೆ ಬರುತ್ತಾನೆ’ ಎಂದಳು. ಪತ್ನಿಯನ್ನು ಹೆಚ್ಚು ಪ್ರಶ್ನಿಸದೇ ಚಂದ್ರಪ್ಪ ಸುಮ್ಮನಾದರೂ ಇಷ್ಟು ವರ್ಷ ಬಾರದಿದ್ದ ರಾಜು ಈಗೇಕೆ ಬರುತ್ತಿದ್ದಾನೆ ಎಂದು ಚಿಂತಿಸತೊಡಗಿದ. ಕುಮಾರ ಅವನ ಮನಸ್ಸಿನಲ್ಲಿ ಬಿತ್ತಿದ್ದ ವಿಷ ಬೀಜ ಮೊಳಕೆಯೊಡೆಯುತ್ತಿತ್ತು.

    ಒಂದು ದಿನ ಚಂದ್ರಪ್ಪ ಅಂಗಡಿಯಿಂದ ಏಕಾಏಕಿ ಮನೆಗೆ ಬಂದಾಗ ರಾಜು ಮತ್ತು ಶಾಂತಾ ಸಂಭಾಷಣೆಯಲ್ಲಿ ತೊಡಗಿದ್ದುದನ್ನು ಕಂಡು ಕೋಪಗೊಂಡ. ರಾಜುವನ್ನುದ್ದೇಶಿಸಿ, ‘ನಾನಿಲ್ಲದಾಗಲೇ ಏಕೆ ಬಂದಿರುವೆ? ಏನು ಸಮಾಚಾರ’ ಎಂದ. ಅಕ್ಕನಿಗಾಗಿ ಉಬ್ಬಸದ ಔಷಧಿಯನ್ನು ಊರಿನ ನಾಟೀವೈದ್ಯರು ಕೊಟ್ಟಿದ್ದರು, ಅದನ್ನು ಮುಟ್ಟಿಸಲು ಬಂದಿದ್ದೆ, ಎಂದ ರಾಜು ಸ್ವಲ್ಪ ಹೊತ್ತು ಕುಳಿತಿದ್ದು ಹೊರಟು ಹೋದ. ‘ರಾಜು ನನ್ನ ಸೋದರನಂತೆ, ಅವನು ಬಂದರೆ ನನ್ನ ತವರಿಗೆ ಹೋದ ಹಾಗೆ ಅನಿಸುತ್ತದೆ. ಅಮ್ಮನ ಮನೆಯಿಂದ ಕೆಲವು ವಸ್ತುಗಳನ್ನು ತಂದುಕೊಟ್ಟ, ಹಾಗೆಯೇ ಔಷಧಿಯನ್ನೂ ಕೊಟ್ಟಿದ್ದಾನೆ’ ಎಂದಳು ಶಾಂತಾ. ‘ನೀನೇನೂ ನಾಟಿ ಔಷಧಿ ಉಪಯೋಗಿಸಬೇಕಾದ್ದಿಲ್ಲ, ಇಲ್ಲಿನ ವೈದ್ಯರು ಕೊಟ್ಟ ಔಷಧಿ ಸರಿಹೋಗದಿದ್ದರೆ ದೊಡ್ಡ ಡಾಕ್ಟರ ಬಳಿಗೆ ಕರೆದೊಯ್ಯುವೆ’ ಎಂದ ಚಂದ್ರಪ್ಪ.

    ಆ ದಿನದಿಂದಲೇ ಚಂದ್ರಪ್ಪನ ತಲೆಯಲ್ಲಿ ಶಾಂತಾಳನ್ನು ಮುಗಿಸಬೇಕೆಂಬ ಯೋಚನೆ ಪ್ರಾರಂಭವಾಯಿತು. ಸದಾಕಾಲವೂ ಈ ಬಗ್ಗೆಯೇ ಚಿಂತಿಸತೊಡಗಿದ. ಏತನ್ಮಧ್ಯೆ ಒಂದು ದಿನ ಚಂದ್ರಪ್ಪನ ದೂರದ ಸಂಬಂಧಿಕ ಮೂರ್ತಿ ಅವನ ಅಂಗಡಿಗೆ ಬಂದ. ಮೂರ್ತಿ ರಾಜಧಾನಿಯಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಚಂದ್ರಪ್ಪನಿಗೆ ಅರಿವಿತ್ತು. ಆತ ತನ್ನದೇ ಆಂಬುಲೆನ್ಸ್ ಇಟ್ಟುಕೊಂಡು ರೋಗಿಗಳನ್ನು ಅವರವರ ಮನೆಗಳಿಂದ ಆಸ್ಪತ್ರೆಗಳಿಗೆ ಸಾಗಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಯಿತು. ಚಂದ್ರಪ್ಪ ಮೂರ್ತಿಯನ್ನು ಬಾರ್​ಗೆ ಕರೆದೊಯ್ದು ಚೆನ್ನಾಗಿ ಮದ್ಯ ಕುಡಿಸಿ ಹೇಗಾದರೂ ಮಾಡಿ ಶಾಂತಾಳನ್ನು ಕೊಲೆಮಾಡಿಸಬೇಕೆಂದು ಹೇಳಿ ಸಾಕಷ್ಟು ಹಣ ನೀಡುವುದಾಗಿ ಹೇಳಿದ. ಈ ಕೆಲಸಕ್ಕೊಪ್ಪಿದ ಮೂರ್ತಿ 25,000 ರೂ. ಕೇಳಿದ.

    ಮುಂದಿನ ವಾರ ಶಾಂತಾಳಿಗೆ ದೊಡ್ಡ ಡಾಕ್ಟರರಿಗೆ ತೋರಿಸಲು ಕರೆದೊಯ್ಯುತ್ತಿರುವೆ ಎಂದು ಹೇಳಿದ ಚಂದ್ರಪ್ಪ ಅವಳನ್ನು ರಾಜಧಾನಿಗೆ ಕರೆದೊಯ್ದು ಮಗ ಶ್ರೀನಿಧಿಯ ರೂಂನಲ್ಲಿ ಬಿಟ್ಟ. ಆಗ ಬೆಳಗಿನ 10 ಗಂಟೆಯಾಗಿತ್ತು. ‘ನಾನು ಕಾಲೇಜಿಗೆ ಹೋಗುವೆ, ನೀನು ರೂಮಿಗೆ ಬೀಗ ಹಾಕಿಕೊಂಡು ಹೋಗು’ ಎಂದು ತಾಯಿಗೆ ಹೇಳಿದ ಶ್ರೀನಿಧಿ 11 ಗಂಟೆಗೆ ಹೊರಟುಹೋದ. ಮಧ್ಯಾಹ್ನ 3 ಗಂಟೆಗೆ ಮೂರ್ತಿಯ ಆಂಬುಲೆನ್ಸಿನಲ್ಲಿ ಬಂದ ಚಂದ್ರಪ್ಪ ಪತ್ನಿಯನ್ನು ಆಸ್ಪತ್ರೆಗೆಂದು ಕರೆದುಕೊಂಡು ಹೋದ. ಸರ್ಕಾರಿ ಆಸ್ಪತ್ರೆಯೊಂದರ ಮುಂದೆ ವಾಹನ ನಿಲ್ಲಿಸಿ ಮೂರ್ತಿ ಮತ್ತು ಚಂದ್ರಪ್ಪ ಡಾಕ್ಟರನ್ನು ಕಂಡುಬರುತ್ತೇವೆ ಎಂದು ಹೇಳಿ ಶಾಂತಾಳನ್ನು ಆಂಬುಲೆನ್ಸಿನಲ್ಲಿಯೇ ಕೂರಿಸಿ ಹೊರಟುಹೋದರು.

    ಆಸ್ಪತ್ರೆಯಲ್ಲಿ ಮೂರ್ತಿ ತನಗೆ ಪರಿಚಯವಿದ್ದ ವೈದ್ಯರೊಬ್ಬರಿಗೆ ಚಂದ್ರಪ್ಪನನ್ನು ತೋರಿಸಿ, ಇವರ ಪತ್ನಿ ಹೃದಯಾಘಾತದಿಂದ ಸತ್ತು ಹೋಗಿದ್ದಾರೆ, ಶವವು ನನ್ನ ಆಂಬುಲೆನ್ಸಿನಲ್ಲಿದೆ ಎಂದು ಹೇಳಿ ಮರಣ ಪ್ರಮಾಣಪತ್ರ ಕೊಡಲು ಕೋರಿದ. ತನ್ನ ಪತ್ನಿಯ ಹೆಸರನ್ನು 50 ವರ್ಷ ವಯಸ್ಸಿನ ಶಾರದಾ ಎಂದೂ ತನ್ನ ಹೆಸರನ್ನು ರಾಮಪ್ಪ ಎಂದೂ ಹೇಳಿದ ಚಂದ್ರಪ್ಪ ವೈದ್ಯ ನರೇಶ್​ಗೆ ಸಾವಿರ ರೂ ಫೀಸ್ ನೀಡಿದ. ಆತ ಶವವನ್ನೇ ಪರೀಕ್ಷಿಸದೇ ಶಾರದಾ ಫಿಟ್ಸ್ ರೋಗಿಯಾಗಿದ್ದು ಹೃದಯಾಘಾತವಾಗಿ ಸತ್ತಿದ್ದಾಳೆ ಎಂದು ಸರ್ಟಿಫಿಕೆಟ್ ನೀಡಿದ.

    ಆಂಬುಲೆನ್ಸಿನಲ್ಲಿ ಕಾಯುತ್ತಿದ್ದ ಶಾಂತಾಳಿಗೆ ಡಾಕ್ಟರರು ನಾಳೆ ಬರಹೇಳಿದ್ದಾರೆ ಎಂದು ಹೇಳಿದ ಇಬ್ಬರೂ ವಾಹನವನ್ನು ರಾಷ್ಟ್ರೀಯ ಹೆದ್ದಾರಿಗೆ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶವೊಂದರಲ್ಲಿ ನಿಲ್ಲಿಸಿದರು. ಆಗ ಕತ್ತಲಾಗಿತ್ತು. ಆಂಬುಲೆನ್ಸ್​ನ ಹಿಂಭಾಗದಲ್ಲಿ ಕುಳಿತಿದ್ದ ಶಾಂತಾಳ ಕೈಕಾಲುಗಳನ್ನು ಚಂದ್ರಪ್ಪ ಬಿಗಿಯಾಗಿ ಹಿಡಿದುಕೊಂಡ. ಮೂರ್ತಿ ಅವಳ ಬಾಯಿಗೆ ಬಟ್ಟೆ ತುರುಕಿ ನೈಲಾನ್ ಹಗ್ಗವನ್ನು ಕುತ್ತಿಗೆಗೆ ಬಿಗಿದು ಅವಳನ್ನು ಕೊಲೆ ಮಾಡಿದ. ಆನಂತರ ಮಹಾನಗರಕ್ಕೆ ವಾಪಸಾದರು. ನಗರದ ಹೊರವಲಯದಲ್ಲಿದ್ದ ಬಟ್ಟೆ ಅಂಗಡಿಯೊಂದರಲ್ಲಿ ಎರಡು ಮೀಟರ್ ಬಿಳಿಯ ಬಟ್ಟೆ ಖರೀದಿಸಿದರು. ಆನಂತರ ನಿರ್ಜನ ರಸ್ತೆಯೊಂದರಲ್ಲಿ ವಾಹನವನ್ನು ನಿಲ್ಲಿಸಿದ ಮೂರ್ತಿ, ಶಾಂತಾ ಧರಿಸಿದ್ದ ಬಟ್ಟೆಗಳನ್ನು ಕಳಚಿ ಅವಳ ಶವವನ್ನು ಬಿಳಿಯ ಬಟ್ಟೆಯಲ್ಲಿ ಪ್ಯಾಕ್ ಮಾಡಿದ.

    ನಂತರ ಮೂರ್ತಿ ವಾಹನವನ್ನು ಒಂದು ಆಸ್ಪತ್ರೆಯ ಶವಾಗಾರಕ್ಕೆ ತಂದು ಅಲ್ಲಿನ ಸಿಬ್ಬಂದಿಗೆ ತನ್ನ ಬಳಿಯಿದ್ದ ಮರಣ ಪ್ರಮಾಣಪತ್ರ ತೋರಿಸಿ ಶಾಂತಾಳ ಶವವನ್ನು ಶೈತ್ಯಾಗಾರದಲ್ಲಿಡಿಸಿದ. ನಂತರ ಚಂದ್ರಪ್ಪನನ್ನು ಬಳಿಯಿದ್ದ ಪೊಲೀಸ್ ಠಾಣೆಗೆ ಕರೆದೊಯ್ದ. ಠಾಣೆಯಲ್ಲಿ ಚಂದ್ರಪ್ಪ ತನ್ನ ಪತ್ನಿ ಶಾಂತಾಳನ್ನು ತಾನು ಅದೇ ಸಂಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಆಕೆ ತಪ್ಪಿಸಿಕೊಂಡಳು ಎಂದು ಹೇಳಿ ತಾನು ಅಲ್ಲಿಯವರೆಗೆ ಹುಡುಕಿದರೂ ಪತ್ತೆಯಾಗಲಿಲ್ಲ ಎಂದು ದೂರಿತ್ತ. ಅದೇ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.

    ಠಾಣೆಯಿಂದ ಮಗ ಶ್ರೀನಿಧಿಯ ರೂಮಿಗೆ ಚಂದ್ರಪ್ಪ ಹಿಂದಿರುಗಿದಾಗ ಮಧ್ಯರಾತ್ರಿಯಾಗಿತ್ತು. ಅಮ್ಮ ಎಲ್ಲಿ ಎಂದು ಮಗ ಕೇಳಿದಾಗ ಆಕೆ ಕಾಣೆಯಾಗಿದ್ದು ಪೊಲೀಸರಿಗೆ ದೂರು ನೀಡಿರುವೆ ಎಂದ. ಬೆಳಗಿನ 6 ಗಂಟೆಗೆ ಎದ್ದು ಅಮ್ಮನನ್ನು ಹುಡುಕಿಕೊಂಡು ಬರುವೆ ಎಂದ ಚಂದ್ರಪ್ಪ ದೂರದಲ್ಲಿ ಕಾಯುತ್ತಿದ್ದ ಮೂರ್ತಿಯ ಆಂಬುಲೆನ್ಸ್ ಹತ್ತಿದ. ಇಬ್ಬರೂ ಶವಾಗಾರಕ್ಕೆ ಹೋಗಿ ಶಾಂತಾಳ ಮೃತದೇಹವನ್ನು ಹಿಂಪಡೆದು ಅದನ್ನು ಹತ್ತಿರದಲ್ಲಿದ್ದ ಚಿತಾಗಾರಕ್ಕೆ ತೆಗೆದುಕೊಂಡು ಹೋಗಿ ಮೃತಳ ಪ್ರಮಾಣಪತ್ರವನ್ನು ನೀಡಿ ಶವವನ್ನು ಧಪನ್ ಮಾಡಲು ಕೊಟ್ಟರು. ಶವದ ಅಸ್ಥಿ ಮತ್ತು ಬೂದಿ ಬೇಡವೆಂದು ಹೇಳಿ ವಾಪಸ್ ಬಂದರು. ಮೂರ್ತಿಗೆ ಕೊಡಬೇಕಾದ ಹಣದ ಬದಲಾಗಿ ಚಂದ್ರಪ್ಪ ತನ್ನ ಬಂಗಾರದ ಉಂಗುರ ಮತ್ತು ಚೈನನ್ನು ನೀಡಿದ. ಆದರೆ ಇದರಿಂದ ತೃಪ್ತನಾಗದ ಮೂರ್ತಿ 25000 ರೂ. ನೀಡುವೆನೆಂದು ಒಪ್ಪಿ ಹಳೆಯ ಬಂಗಾರವನ್ನು ನೀಡಿದ ಬಗ್ಗೆ ತಗಾದೆ ತೆಗೆದ. ಉಳಿದ ಹಣವನ್ನು ಶೀಘ್ರ ಕೊಡುವುದಾಗಿ ಚಂದ್ರಪ್ಪ ಹೇಳಿದ.

    ನಂತರ ಊರಿಗೆ ವಾಪಸಾದ ಚಂದ್ರಪ್ಪ ಶಾಂತಾ ಕಾಣೆಯಾಗಿದ್ದಾಳೆ ಎಂದು ಎಲ್ಲರಿಗೂ ತಿಳಿಸಿದ. ಹದಿನೈದು ದಿನಗಳ ನಂತರ ಶಾಂತಾಳ ಸೋದರ ಬಂದು ಆಕೆ ಹೇಗೆ ಕಾಣೆಯಾದಳು ಎನ್ನುವ ಬಗ್ಗೆ ಕೂಲಂಕಷವಾಗಿ ಪ್ರಶ್ನೆ ಮಾಡತೊಡಗಿದ. ಚಂದ್ರಪ್ಪ ಹಾರಿಕೆಯ ಉತ್ತರಗಳನ್ನು ಕೊಟ್ಟಾಗ ಆತ ಶ್ರೀನಿಧಿಗೆ ಫೋನ್ ಮಾಡಿ ವಿವರಗಳನ್ನು ಪಡೆದು ಇನ್ನಷ್ಟು ಸಂಶಯಗೊಂಡ. ಆತ ತನ್ನ ಸಂಬಂಧಿಕರೊಂದಿಗೆ ಪೊಲೀಸ್ ಠಾಣೆಗೆ ಹೋಗಿ ಶಾಂತಾಳನ್ನು ಚಂದ್ರಪ್ಪ ಕೊಲೆಮಾಡಿರಬಹುದೆಂಬ ಸಂಶಯವಿದೆ ಎಂದು ದೂರು ನೀಡಿದ. ಪೊಲೀಸರು ಶ್ರೀನಿಧಿಯನ್ನು ವಿಚಾರಿಸಿದಾಗ ಆತ ತಾಯಿಯನ್ನು ಮೂರ್ತಿಯ ಆಂಬುಲೆನ್ಸಿನಲ್ಲಿ ಕರೆದೊಯ್ಯುತ್ತಿರುವೆ ಎಂದು ಅಪ್ಪ ತಿಳಿಸಿದ್ದ ಎಂದ. ಮೂರ್ತಿಯನ್ನು ಪೊಲೀಸರು ವಿಚಾರಿಸಿದಾಗ ಆತ ನಡೆದ ಘಟನೆಯನ್ನು ವಿವರಿಸಿ ಚಂದ್ರಪ್ಪ ತನಗೆ 15000 ರೂಪಾಯಿಗಳನ್ನು ಬ್ಯಾಂಕ್ ಟ್ರಾನ್ಸ್​ಫರ್ ಮಾಡಿದ್ದ ಮಾಹಿತಿ ನೀಡಿದ. ಇದಲ್ಲದೇ ಶಾಂತಾಳ ಬಟ್ಟೆಗಳನ್ನು ಎಸೆದಿದ್ದ ಜಾಗವನ್ನೂ ತೋರಿಸಿದ. ಚಂದ್ರಪ್ಪನ ಮನೆಯಿಂದ ಶಾಂತಾಳ ಸೆಲ್ ಫೋನ್ ಮತ್ತು ಖೊಟ್ಟಿ ಮರಣ ಪ್ರಮಾಣಪತ್ರವನ್ನು ಜಪ್ತು ಮಾಡಲಾಯಿತು.

    ಮೂರ್ತಿಯ ಹೇಳಿಕೆಯ ಮೇರೆಗೆ ಅವನನ್ನು, ಚಂದ್ರಪ್ಪ ಮತ್ತು ಡಾ.ನರೇಶ್ ಜತೆಗೆ ಬಂಧಿಸಿ ಅವರ ವಿರುದ್ಧ ಒಳಸಂಚು, ಅಪಹರಣ, ಕೊಲೆ ಮತ್ತು ಸಾಕ್ಷ್ಯನಾಶದ ಆರೋಪಪಟ್ಟಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಲಾಯಿತು. ಶಾಂತಾ ಕೊಲೆಯಾಗಿದ್ದಾಳೆ ಎಂದು ಸಾಬೀತುಪಡಿಸಿಲ್ಲ, ಚಿತಾಗಾರದಲ್ಲಿ ಸುಟ್ಟ ಶವ ಅವಳದೇ ಎಂದು ಸಾಬೀತಾಗಿಲ್ಲ, ಕೊಲೆಗೆ ಯಾವುದೇ ಪ್ರತ್ಯಕ್ಷದರ್ಶಿಗಳಿರದೇ ಕೊಲೆ ನಡೆದಿದೆ ಎನ್ನುವ ಬಗ್ಗೆಯೇ ಸಂಶಯವಿದೆ ಎಂದು ತೀರ್ವನಿಸಿದ ನ್ಯಾಯಾಧೀಶರು ಎಲ್ಲ ಆರೋಪಿಗಳನ್ನೂ ಬಿಡುಗಡೆ ಮಾಡಿದರು.‘ಬಂಧುವುಂ ಮಿತ್ರನುಂ, ಭೃತ್ಯನುಂ ಶತ್ರುವೊಲೆ ದಂಡಧರನೋಲಗಕೆ ನಿನ್ನನೆಳೆವವರೋ, ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ ಮಂದಹಸಿತದ ಕೊಲೆಯೋ ಮಂಕುತಿಮ್ಮ’ ಎಂದಂತಾಯಿತು ಶಾಂತಾಳ ಜೀವನ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts