More

    ಪ್ರಕರಣದ ತನಿಖೆ ದಿಕ್ಕುತಪ್ಪಿಸಲು ಎಚ್‌ಡಿಕೆ ಯತ್ನ

    ಚಿಕ್ಕಮಗಳೂರು: ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ದಿಕ್ಕು ತಪ್ಪಿಸಲು ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಆರೋಪಿಸಿದರು.
    ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಟ್ಟುಕೊಂಡು ಅಪಪ್ರಚಾರ ಮಾಡುವ ಮೂಲಕ ತನಿಖೆ ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ತನಿಖಾ ತಂಡ ರಚಿಸಿ ಸಮಗ್ರವಾಗಿ ತನಿಖೆ ನಡೆಸುತ್ತಿದ್ದಾರೆ. ತನಿಖೆ ನಡೆಸಿ ವರದಿ ಹೊರಬರುವ ಮುನ್ನವೇ ಸಿಬಿಐ ತನಿಖೆ ಬಗ್ಗೆ ಪ್ರಸ್ತಾಪಿಸುತ್ತಿರುವುದು ಈ ಪ್ರಕರಣದ ತನಿಖೆ ದಿಕ್ಕು ತಪ್ಪಿಸುವ ಹುನ್ನಾರ ಎಂದು ಲೇವಡಿ ಮಾಡಿದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹ ಸಚಿವರು ಹಾಗೂ ಉನ್ನತ ದರ್ಜೆಯ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರವಾಗಿ ಉಸ್ತುವಾರಿ ನಿರ್ವಹಿಸಿ ನ್ಯಾಯಯುತವಾದ ತನಿಖೆ ನಡೆಸುತ್ತಿದ್ದಾರೆ. ಆದರೂ ಹತಾಶೆಯಿಂದ ಕುಮಾರಸ್ವಾಮಿ ಅವರು ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೈತಿಕತೆ ಇದ್ದರೆ ಪ್ರಜ್ವಲ್‌ನನ್ನು ಕರೆತಂದು ಶರಣಾಗತಿ ಮಾಡಿ ತನಿಖೆ ಸತ್ಯಾಸತ್ಯತೆ ಹೊರಬರುವವರೆಗೂ ಸುಮ್ಮನಿರಬೇಕು. ಹಿಂದು ಮುಸ್ಲಿಂ ಯುವಕ-ಯುವತಿಯರು ಮಾತನಾಡಿದರೆ ಲವ್‌ಜಿಹಾದ್ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ಈ ಪ್ರಕರಣದಲ್ಲಿ ಮೌನವಾಗಿದ್ದಾರೆ. ಬಿಜೆಪಿಯವರಿಗೆ ಮಹಿಳೆಯರ ಬಗ್ಗೆ ಗೌರವ ಇದ್ದರೆ ಬೀದಿಗೆ ಬಂದು ಹೋರಾಟ ಮಾಡಲಿ ಎಂದು ಆಗ್ರಹಿಸಿದರು.
    ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಮಹಮದ್, ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಡಿ.ಸಿ ಪುಟ್ಟೇಗೌಡ, ಜಿಲ್ಲಾ ಕಾರ್ಯದರ್ಶಿ ಹಿರೇಮಗಳೂರು ರಾಮಚಂದ್ರ, ಮುಖಂಡರಾದ ಎಂ.ಡಿ ರಮೇಶ್, ಜಗದೀಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts