More

    ಹತ್ಯೆ ಮತ ಫಸಲಿನ ರಾಜಕಾರಣ : ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

    ಮೈಸೂರು: ಮಂಗಳೂರಿನ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, ಹತ್ಯೆ ಮತ ಫಸಲಿನ ರಾಜಕಾರಣವಾಗಿದೆ. ಇಂತಹ ಘಟನೆ ಅವರಿಗೆ ಒಳ್ಳೆ ರಾಜಕೀಯದ ಬೆಳೆ ಎಂದು ಕಿಡಿಕಾರಿದ್ದಾರೆ.


    ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ಜನರಲ್ಲಿ ವಿಶ್ವಾಸದ ಕೊರತೆ ಮೂಡಿಸುತ್ತಿದ್ದಾರೆ. ಎಲ್ಲ ಸಮಾಜದ ಧಾರ್ಮಿಕ ಸಭೆಗೆ ಸಲಹೆ ನೀಡಿದ್ದೆ. ಆದರೆ ಸರ್ಕಾರ ಮೌನಕ್ಕೆ ಶರಣಾಗಿತ್ತು. ಶಾಂತಿ ನೆಲೆಸಲು ಗಮನ ಕೊಡಿ ಎಂದು ಹಿಂದೆಯೇ ಹೇಳಿದ್ದೆ. ನನ್ನ ಮಾತನ್ನು ಸರ್ಕಾರ ಕೇಳಲಿಲ್ಲ. ಆದ್ದರಿಂದ ವಾರದಲ್ಲಿ ಒಂದೇ ಭಾಗದಲ್ಲಿ ಕೋಮು ಸಂಘರ್ಷದ ಎರಡು ಹತ್ಯೆಯಾಗಿದೆ ಎಂದರು.


    ಪ್ರವೀಣ್ ಕುಟುಂಬದ ಪರಿಸ್ಥಿತಿಯನ್ನು ನೋಡಬೇಕು. ವಯಸ್ಸಾದ ತಂದೆ, ತಾಯಿ. ಇಬ್ಬರಿಗೂ ಆರೋಗ್ಯ ಸರಿಯಿಲ್ಲ. ಚಿಕ್ಕ ವಯಸ್ಸಿನ ಪತ್ನಿ ಇದ್ದಾರೆ ಎಂದರು.
    ಘಟನೆಯಿಂದ ಮನಸು ಕಲುಕಿದೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಿಯವರೆಗೆ ಇಂತಹ ವಾತಾವರಣ ಇರಬೇಕು? ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಕೊಲೆಯಾಗಿದೆ? ಶಿವಮೊಗ್ಗದ ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಎಲ್ಲ ಸವಲತ್ತು ನೀಡಲಾಗಿದೆ. ಇದೇ ನಿಮ್ಮ ಆಡಳಿತನಾ? ಏನು ಒಳ್ಳೆ ಆಡಳಿತ ಏನು ಸಾಧನೆ ? ಯಾವ ಪುರುಷಾರ್ಥಕ್ಕಾಗಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಂಡಿದ್ದೀರಿ? ಇದು ಸಾವಿನ ಸಾಧನಾ ಸಮಾವೇಶನಾ ? ಇನ್ನೂ ಎಷ್ಟು ಜನ ಅಮಾಯಕರು ಸಾಯಬೇಕು ? ಕರಾವಳಿ ಆಯ್ತು, ಶಿವಮೊಗ್ಗ ಆಯ್ತು ಮುಂದೆ ಎಲ್ಲಿ ? ಎಂದು ಪ್ರಶ್ನಿಸಿದರು.


    ಇದು ಹಿಂದುತ್ವದ ಕಾರ್ಡ್‌ನಲ್ಲಿ ಮತ ಪಡೆಯಬಹುದೆಂಬ ಲೆಕ್ಕಾಚಾರವಾಗಿದೆ. ಸಾವುಗಳಾದರೆ ಸುಲಭವಾಗಿ ಅಧಿಕಾರ ಹಿಡಿಯಬಹುದು ಎನ್ನುವುದು ಬಿಜೆಪಿಯವರ ಲೆಕ್ಕಾಚಾರ ಎಂದು ಕಿಡಿಕಾರಿದರು.
    ಬಿಜೆಪಿಯವರದ್ದು ಕೃತಕ ಸಾಂತ್ವನ. ಆಕ್ರೋಶದ ಮಾತುಗಳಾಡಿದರೆ ಏನು ಬದಲಾವಣೆ ಆಗಲ್ಲ. ನಾನು ಸಿಎಂ ಆಗಿದ್ದೆ. ನನ್ನ ಕಾಲದಲ್ಲಿ ಏಕೆ ಈ ರೀತಿ ಆಗಲಿಲ್ಲ ? ಎಂದು ಪ್ರಶ್ನಿಸಿದರು.
    ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಂತವರನ್ನು ಗೆಲ್ಲಿಸಿದ ಮೇಲೆ ಈ ರೀತಿಯ ಮಾತುಗಳನ್ನು ಕೇಳಲೇಬೇಕು. ನಿಮ್ಮನ್ನು ಯಾರು ಗನ್ ಮ್ಯಾನ್ ಕೊಡಿ ಎಂದು ಕೇಳಲ್ಲ. ಶಾಂತಿಯುತ ನೆಮ್ಮದಿಯ ಆಡಳಿತ ಕೊಡಿ ಎಂದು ಕೇಳುತ್ತಾರೆ ಅಷ್ಟೇ. ಚುನಾವಣೆ ವೇಳೆ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೇ ಇದಕ್ಕೆ ಉದಾಹರಣೆ ಎಂದರು.

    ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ನಲ್ಲೇ ಇದ್ದಾರೆ. ಮುಂದೆಯೂ ಇರುತ್ತಾರೆ. ಜಿ.ಟಿ.ದೇವೇಗೌಡರ ಜತೆ ನಾನು ಇತ್ತೀಚೆಗೆ ಮೂರ್ನಾಲ್ಕು ಬಾರಿ ಮಾತನಾಡಿದ್ದೇನೆ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಪಂಚರತ್ನ ಯಾತ್ರೆ ಆರಂಭಿಸುತ್ತೇನೆ. ಪಂಚರತ್ನ ಯಾತ್ರೆಯಲ್ಲೂ ಜಿ.ಟಿ.ದೇವೇಗೌಡ ಭಾಗಿಯಾಗಲಿದ್ದಾರೆ. ಪಂಚರತ್ನ ಯಾತ್ರೆ ವೇಳೆ ನೂರು ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಿದ್ದೇನೆ. ಆ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ.
    ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts