More

    ಎಲ್ಲವನ್ನೂ ಗಮನಿಸಿಯೇ ಅಭ್ಯರ್ಥಿ ಹಾಕಿದ್ದೇವೆ:ಶಾಸಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ

    ಬಿಡದಿ : ರಾಜ್ಯದ 25 ಕ್ಷೇತ್ರಗಳ ಪೈಕಿ ಆರ್ಥಿಕ ಪರಿಸ್ಥಿತಿ ಮತ್ತು ಪಕ್ಷ ಸಂಘಟನೆ ಗಮನದಲ್ಲಿರಿಸಿಕೊಂಡು 6 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಎಲ್ಲರೂ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

    ಡಿ.10 ರಂದು ನಡೆಯುವ ಬೆಂಗಳೂರು ಗ್ರಾಮಾಂತರ ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಬಿಡದಿ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಬುಧವಾರ ಜಿಲ್ಲೆಯ ಜೆಡಿಎಸ್ ಬೆಂಬಲಿತ ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದರು.
    ಹಿಂದೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಪ್ರಾಮಾಣಿಕತೆ ಅಳತೆಗೋಲು ಆಗಿರುತ್ತಿತ್ತು. ಆದರೆ 2004ರ ನಂತರದ ಚುನಾವಣೆಗಳು ಹಣವನ್ನು ಅವಲಂಬಿಸಲು ಆರಂಭಿಸಿದವು. ಆದ್ದರಿಂದ, ಅಭ್ಯರ್ಥಿಗಳ ಆರ್ಥಿಕ ಸ್ಥಿತಿ ಆಧರಿಸಿ ಎಲ್ಲ ಪಕ್ಷಗಳೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆಗೆ ಸ್ಪರ್ಧಿಸುತ್ತಿವೆ. ಪಂಚಾಯಿತಿ ಮಟ್ಟದಲ್ಲಿ ಯಾರೊಬ್ಬರೂ ಪಕ್ಷದ ಚಿಹ್ನೆಯಲ್ಲಿ ಗೆಲುವು ಸಾಧಿಸಿಲ್ಲ. ಆದರೆ, ಆಯ್ಕೆಯಾದವರಲ್ಲಿ ನಮ್ಮ ಮೇಲಿನ ಅಭಿಮಾನ, ಪ್ರೀತಿಯಿರುವವರು ಸಹ ಇದ್ದಾರೆ. ಅವರ ಮನವೊಲಿಸಿದರೆ ನಮ್ಮ ಗೆಲುವು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಶ್ರಮಿಸಬೇಕು ಎಂದರು.

    ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಸನದಲ್ಲಿ ಐಐಟಿ ಸ್ಥಾಪಿಸುವ ಬಗ್ಗೆ ಚರ್ಚಿಸಿದ್ದಾರೆ. ಮೇಲ್ಮನೆ ಚುನಾವಣೆಯ ಮೈತ್ರಿ ಬಗ್ಗೆ ಮಾತುಕತೆ ನಡೆಸಿರುವ ಮಾಹಿತಿ ಇಲ್ಲ. ದೇವೇಗೌಡರು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಸ್ಪಷ್ಟನೆ ದೊರೆಯಲಿದೆ ಎಂದು ಹೇಳಿದರು.

    ಬಿಎಸ್‌ವೈ ಬೆಂಬಲ ಕೇಳಿದ್ದಾರೆ :  ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮಾಜಿ ಸಿಎಂ, ಶಾಸಕ ಬಿ.ಎಸ್. ಯಡಿಯೂರಪ್ಪ ಬಹಿರಂಗವಾಗಿ ಜೆಡಿಎಸ್ ಅನ್ನು ಕೋರಿದ್ದಾರೆ. ಕಾಂಗ್ರೆಸ್ ನಾಯಕರು ನಮಗೆ ಜೆಡಿಎಸ್ ಬೆಂಬಲ ಬೇಡ ಎಂದಿದ್ದಾರೆ. ಹಾಗಾಗಿ, ಕರೆಯದೇ ಇರುವವರ ಮನೆ ಬಾಗಿಲಿಗೆ ಹೋಗಲು ಸಾಧ್ಯವಾ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ಹಾಗಾಗಿ ಬಿಜೆಪಿಗೆ ಬೆಂಬಲ ಕೊಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು.

    ಪಕ್ಷದ ಗೌರವ ಉಳಿಸಿ ಶಾಸಕ ಎ. ಮಂಜುನಾಥ್ ಮಾತನಾಡಿ, ಜೆಡಿಎಸ್‌ನ ಗೌರವವನ್ನು ಉಳಿಸುವ ಕೆಲಸ ಮಾಡಿ. ನಮ್ಮ ಪಕ್ಷದ ಬೆಂಬಲಿತರಾಗಿ ಆಯ್ಕೆಯಾಗಿರುವ ಚುನಾಯಿತ ಪ್ರತಿನಿಧಿಗಳು ಅಚಲ ವಿಶ್ವಾಸದಿಂದ ಅಭ್ಯರ್ಥಿ ಗೆಲುವಿಗಾಗಿ ಪಣ ತೊಡಬೇಕು ಎಂದು ಕರೆ ನೀಡಿದರು. ಮಾಜಿ ಶಾಸಕ ಸುರೇಶ್‌ಬಾಬು, ತಾಲೂಕು ಅಧ್ಯಕ್ಷರಾದ ರಾಜಶೇಖರ್, ನಾಗರಾಜು, ರಾಮಣ್ಣ, ಜಿಪಂ ಮಾಜಿ ಸದಸ್ಯ ಚಂದ್ರಣ್ಣ ಮತ್ತಿತರರಿದ್ದರು.

     

    ಸ್ವಾಭಿಮಾನದ ಕನಕಪುರ :  ಜಿಲ್ಲೆಯಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಜೆಡಿಎಸ್ ಅನ್ನು ಕಟ್ಟಿರುವ ಜನರಿರುವ ವಿಶೇಷ ಕ್ಷೇತ್ರ ಕನಕಪುರ. ಈ ಸಭೆಯ ಶಕ್ತಿ ಸಂದೇಶ ವಿರೋಧಿಗಳಿಗೆ ತಲುಪಿದ ತಕ್ಷಣವೇ ಅವರು ಬೇರೆ ಆಟ ಆರಂಭಿಸುತ್ತಾರೆ. ನನಗೆ ರಾಜಕಾರಣ ಕಲಿಸಿದವರು ಕನಕಪುರದವರು. ಅದರಂತೆ ನನ್ನ ಅಧಿಕಾರ ಬೀಳಲು ಕಾರಣರಾದವರು ಸಹ ಇದೇ ಕನಕಪುರದ ಬಂಡೆ ಎಂಬ ಡಿ.ಕೆ. ಶಿವಕುಮಾರ್. ಕಳೆದೆರಡು ದಿನಗಳ ಹಿಂದೆ ಡಿ.ಕೆ. ಶಿವಕುಮಾರ್ ಹಾಕಿರುವ ಸವಾಲನ್ನು ಸ್ವೀಕರಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಚುನಾವಣೆ ಮಾಡುತ್ತೇನೆ ಎಂದು ಹೇಳಿದರು.

    2023ರ ಚುನಾವಣೆ ಗಮನದಲ್ಲಿ ಇರಲಿ :  ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ 2023ರ ಚುನಾವಣೆ ಗಮನದಲ್ಲಿ ಇರಿಸಿಕೊಂಡು ವಿಧಾನಪರಿಷತ್ ಚುನಾವಣೆಯಲ್ಲಿ ಮುಖಂಡರು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಈಗಾಗಲೇ ಗೆದ್ದಿದ್ದೇವೆ ಎಂದು ಬೀಗುವವರಿಗೆ ನಮ್ಮ ಅಭ್ಯರ್ಥಿ ಗೆಲ್ಲಿಸಿ ಉತ್ತರ ನೀಡಬೇಕು. ಕನಕಪುರದಲ್ಲಿ ನಮ್ಮ ಪಕ್ಷದ ಅಭಿಮಾನದಿಂದ ಆಯ್ಕೆಯಾಗಿರುವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿಮಗೆ ಆಮಿಷ ಒಡ್ಡಲು ಪ್ರತಿಪಕ್ಷಗಳು ಪ್ರಯತ್ನಿಸಬಹುದು. ಇಂಥ ಆಮಿಷಗಳಿಗೆ ಯಾರೊಬ್ಬರೂ ಬಲಿ ಆಗಬಾರದು ಎಂದು ಎಚ್ಚರಿಕೆ ನೀಡಿದರು.

     

    ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ಹತ್ಯೆ ಮಾಡಿಸುವ ಕುರಿತು ಕೆಲವರು ಚರ್ಚಿಸಿರುವ ಆಡಿಯೋ ವಿಚಾರವನ್ನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಇದರ ವಾಸ್ತವಾಂಶ ಏನು ಎಂಬುದು ಗೊತ್ತಿಲ್ಲ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿಸಬೇಕು.

    ಎಚ್.ಡಿ. ಕುಮಾರಸ್ವಾಮಿ
    ಮಾಜಿ ಸಿಎಂ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts