ಸಮೀಕ್ಷೆಗಳ ಬಗ್ಗೆ ತಲೆ‌ಕೆಡಿಸಿಕೊಳ್ಳಬೇಡಿ, ಕುಮಾರಸ್ವಾಮಿ ಸಿಎಂ ಆಗುವುದು ಶತಃಸಿದ್ಧ: ಎಚ್​ಡಿಡಿ ಭವಿಷ್ಯ

HDD
Published on

ಚನ್ನಪಟ್ಟಣ: ಸಮೀಕ್ಷಾ ವರದಿಗಳ ಬಗ್ಗೆ ಯಾರೂ ತಲೆ‌ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಶತಃಸಿದ್ಧ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಹೇಳಿದರು.

ಚನ್ನಪಟ್ಟಣದ ಶೇರು ಸರ್ಕಲ್ ಬಳಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಎಚ್​ಡಿಡಿ, ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ‌ ಕೊಡುತ್ತೇನೆ ಎಂದು ಹೇಳುವ ವ್ಯಕ್ತಿ ಇದ್ದರೆ ಅದು ಕುಮಾರಸ್ವಾಮಿ. ನುಡಿದಂತೆ ನಡೆಯುವ ರಾಜಕಾರಣಿ ಯಾವನಾದರೂ ಇದ್ದರೆ ಅದು ಕುಮಾರಸ್ವಾಮಿ ಎಂದರು.

ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ

ಕಾಂಗ್ರೆಸ್‌ನವರ ವ್ಯಂಗ್ಯದ ನಡುವೆ ಸಾಲ‌ ಮನ್ನಾ ಮಾಡಿದ್ರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗ್ತಾರೆ. ಹಿಂದುಸ್ತಾನದಲ್ಲಿ ಕಾಂಗ್ರೆಸ್‌ನ ಎಲ್ಲ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಅವರು. ಸಿದ್ದರಾಮಯ್ಯ ಐವತ್ತು ಸಾವಿರ ಸಾಲ‌ ಮನ್ನಾ ಮಾಡಿದ್ದರೂ ಆದರೆ, 3500 ಕೋಟಿ ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ. ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಸಿಎಂ ಇಲ್ಲ ಎಂದರು.

ಹಾಳು ಮಾಡಿದ್ರು

ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತ ನಿರಾಕರಿಸಿದರು. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಯಾರು? ಮುಸ್ಲಿಂ ವಸತಿ ಶಾಲೆಗಳನ್ನು ನಾನು ಕೊಟ್ಟಿದ್ದೆ. ಆದರೆ ಸಮಾಜ ಕಲ್ಯಾಣ ಇಲಾಖೆಗಳಿಗೆ ಸೇರಿಸಿ ಹಾಳು ಮಾಡಿದ್ರು. ಹದಿಮೂರು ಬಾರಿ ಬಜೆಟ್ ಮಂಡಿಸಿದ್ದೇನೆ ಎನ್ನುವವರು ಉತ್ಸಾಹ ತೋರಲಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

ನಾಡಿಗಾಗಿ ತಮ್ಮ ಶಕ್ತಿ ತೋರಿಸಿ

ಚನ್ನಪಟ್ಟಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ರೂ ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ. ಸಮೀಕ್ಷಾ ವರದಿಗಳ ಬಗ್ಗೆ ತಲೆ‌ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಸಿಎಂ ಆಗುವುದು ಶತಃಸಿದ್ಧ. ಮುಖ್ಯಮಂತ್ರಿ ಕೊಡುವ ಹೆಗ್ಗಳಿಕೆ ಚನ್ನಪಟ್ಟಣಕ್ಕೆ ಸಲ್ಲಬೇಕು. ದೇಶದ ಮುಂದಿನ ಪ್ರಜೆಗಳು ಈ ಪಕ್ಷವನ್ನ ಉಳಿಸಿ. ನಾವು ತಾಯಿ ಭುವನೇಶ್ವರಿ ಮಕ್ಕಳು ನಾಡಿಗಾಗಿ ತಮ್ಮ ಶಕ್ತಿ ತೋರಿಸಿ ಎಂದು ಕರೆ ನೀಡಿದರು.

ಪಣ ತೊಡಿ

ಕುಮಾರಸ್ವಾಮಿ ಇಡೀ ರಾಜ್ಯ ಸುತ್ತಬೇಕು. ಅವರು ಬರಲು ಸಾಧ್ಯವಿಲ್ಲ. ರಾತ್ರಿ 12 ರವರೆಗೂ ಪ್ರಚಾರ ಮಾಡ್ತಿದ್ದಾರೆ. ಯಾರು ಏನೇ ಹೇಳಿದರೂ ಅಪ ಪ್ರಚಾರ ಮಾಡಿದರೂ ನಿಮ್ಮ ಮನೆ ಮಗನನ್ನ ಸಿಎಂ ಮಾಡ್ತೀವಿ ಅಂತ ಪಣ ತೊಡಿ ಎಂದು ಎಚ್​ಡಿಡಿ ಚನ್ನಪಟ್ಟಣದಲ್ಲಿ ಕರೆ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net