More

    ಇಂದು ಆರ್‌ಸಿಬಿ-ಎಲ್‌ಎಸ್‌ಜಿ ಎಲಿಮಿನೇಟರ್; ಗೆದ್ದವರು 2ನೇ ಕ್ವಾಲಿಫೈಯರ್‌ಗೆ ಅರ್ಹ

    ಕೋಲ್ಕತ: ಅದೃಷ್ಟದ ಬಲದೊಂದಿಗೆ ನಾಟಕೀಯ ರೀತಿಯಲ್ಲಿ ಪ್ಲೇಆ್ ಹಂತಕ್ಕೆ ಪ್ರವೇಶ ಪಡೆದಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ, ಕಳೆದ 15 ವರ್ಷಗಳಿಂದ ಕೈಗೆಟುಕದೆ ಸತಾಯಿಸುತ್ತಿರುವ ಐಪಿಎಲ್ ಟ್ರೋಫಿಯನ್ನು ಒಲಿಸಿಕೊಳ್ಳಲು ಸಜ್ಜಾಗಿದೆ. ‘ಈ ಸಲ ಕಪ್ ನಮ್ದೇ’ ಎಂಬ ಅಭಿಮಾನಿಗಳ ಘೋಷವಾಕ್ಯವನ್ನು ಈ ಸಲವಾದರೂ ನಿಜವಾಗಿಸುವ ಹಂಬಲದಲ್ಲಿರುವ ಆರ್‌ಸಿಬಿ, ಐಪಿಎಲ್-15ರ ಎಲಿಮಿನೇಟರ್ ಪಂದ್ಯದಲ್ಲಿ ಬುಧವಾರ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. ‘ಕ್ವಾರ್ಟರ್​ಫೈನಲ್’ ಮಾದರಿಯ ಈ ಪಂದ್ಯದಲ್ಲಿ ಗೆದ್ದ ತಂಡ ‘ಸೆಮಿಫೈನಲ್’ ಮಾದರಿಯ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಗಳಿಸಲಿದೆ. ಸೋತ ತಂಡ 4ನೇ ಸ್ಥಾನಕ್ಕೆ ತೃಪ್ತಿಪಡಲಿದೆ.

    ಅಂಕಪಟ್ಟಿಯಲ್ಲಿ ಆರ್‌ಸಿಬಿ ತಂಡ (14 ಪಂದ್ಯ, 8 ಜಯ, 6 ಸೋಲು) ಲಖನೌಗಿಂತ (14 ಪಂದ್ಯ, 9 ಜಯ, 5 ಸೋಲು) ಕೆಳಗಿನ ಸ್ಥಾನ ಪಡೆದಿದ್ದರೂ, ಲೀಗ್ ಹಂತದ ಏಕೈಕ ಮುಖಾಮುಖಿಯಲ್ಲಿ ಗೆದ್ದ ಆತ್ಮವಿಶ್ವಾಸವನ್ನು ಹೊಂದಿದೆ. ಗುಜರಾತ್ ವಿರುದ್ಧದ ನಿರ್ಣಾಯಕ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 54 ಎಸೆತಗಳಲ್ಲಿ 73 ರನ್ ಸಿಡಿಸಿ ಫಾರ್ಮ್‌ಗೆ ಮರಳಿರುವುದು ಆರ್‌ಸಿಬಿಗೆ ಇನ್ನೊಂದು ಪ್ಲಸ್ ಪಾಯಿಂಟ್ ಆಗಿದೆ. ಪ್ಲೇಆಫ್​ಗೇರಲು ಮುಂಬೈ ಇಂಡಿಯನ್ಸ್ ತಂಡದ ನೆರವು ಪಡೆದಿದ್ದರೂ, ಇನ್ನು ಫಾಫ್​ ಡು ಪ್ಲೆಸಿಸ್ ಪಡೆ ತನ್ನ ನಿರ್ವಹಣೆಯನ್ನೇ ನೆಚ್ಚಿಕೊಳ್ಳಬೇಕಾಗಿದೆ. ಮತ್ತೊಂದೆಡೆ ಅಂಕಪಟ್ಟಿಯಲ್ಲಿ ಅಗ್ರ 2ರೊಳಗೆ ಸ್ಥಾನ ಪಡೆಯುವ ಅವಕಾಶವನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿರುವ ಕೆಎಲ್ ರಾಹುಲ್ ಬಳಗ ಪುಟಿದೇಳುವ ತವಕದಲ್ಲಿದೆ.

    ಆತ್ಮವಿಶ್ವಾಸದಲ್ಲಿ ಆರ್‌ಸಿಬಿ
    ಕೊನೇ 4 ಲೀಗ್ ಪಂದ್ಯಗಳಲ್ಲಿ 3ರಲ್ಲಿ ಗೆದ್ದು ಪ್ಲೇಆಫ್​ ಟಿಕೆಟ್ ಒಲಿಸಿಕೊಂಡಿರುವ ಆರ್‌ಸಿಬಿ, ಅದೇ ಲಯದಲ್ಲಿ ಮುನ್ನಡೆಯುವ ತವಕದಲ್ಲಿದೆ. ಕೊಹ್ಲಿ ಫಾರ್ಮ್‌ಗೆ ಮರಳಿರುವುದು, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನ ಆಟ, ಹ್ಯಾಸಲ್‌ವುಡ್, ವನಿಂದು ಹಸರಂಗ ಬಿಗಿ ಬೌಲಿಂಗ್ ಮತ್ತು ಪ್ಲೆಸಿಸ್ ತಾಳ್ಮೆಯ ನಾಯಕತ್ವ ಆರ್‌ಸಿಬಿಗೆ ಈ ಬಾರಿ ಹೆಚ್ಚಿನ ಬಲ ತುಂಬಿದೆ. ಆರ್‌ಸಿಬಿ ಒಟ್ಟಾರೆ 8 ಮತ್ತು ಸತತ 3ನೇ ಬಾರಿ ಪ್ಲೇಆ್ ಪ್ರವೇಶ ಪಡೆದಿದೆ. ಆದರೆ ಕಳೆದೆರಡು ಆವೃತ್ತಿಗಳಲ್ಲಿ ಎಲಿಮಿನೇಟರ್‌ನಲ್ಲಿ ಸೋತು 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

    ರಾಹುಲ್-ಡಿಕಾಕ್ ಸವಾಲು
    ಲಖನೌ ಆರಂಭಿಕರಾದ ಕೆಎಲ್ ರಾಹುಲ್-ಕ್ವಿಂಟನ್ ಡಿಕಾಕ್ ಆರ್‌ಸಿಬಿಗೆ ದೊಡ್ಡ ಸವಾಲೆನಿಸಲಿದ್ದಾರೆ. ಇವರದು ಟೂರ್ನಿಯಲ್ಲೇ ಅತ್ಯುತ್ತಮ ಆರಂಭಿಕ ಜೋಡಿ ಎನಿಸಿದೆ. ಟೂರ್ನಿಯಲ್ಲಿ ಅವರಿಬ್ಬರು ಜತೆಯಾಗಿ 1,039 ರನ್ ಸೇರಿಸಿದ್ದಾರೆ. ಕೆಕೆಆರ್ ವಿರುದ್ಧ 20 ಓವರ್ ಪೂರ್ತಿ ಆಡಿ 210 ರನ್ ಪೇರಿಸಿದ್ದರು. ರಾಹುಲ್-ಡಿಕಾಕ್ ಜೋಡಿ ಲಖನೌಗೆ ಬಲ ಆಗಿರುವಂತೆ, ದೌರ್ಬಲ್ಯವೂ ಆಗಿದೆ. ಯಾಕೆಂದರೆ, ಇವರಿಬ್ಬರನ್ನು ಬೇಗನೆ ಔಟ್ ಮಾಡಿದರೆ ಲಖನೌ ಮಧ್ಯಮ ಕ್ರಮಾಂಕ ಒತ್ತಡಕ್ಕೆ ಸಿಲುಕುತ್ತದೆ. ದೀಪಕ್ ಹೂಡಾ ಹೊರತಾಗಿ ಲಖನೌ ಮಧ್ಯಮ ಕ್ರಮಾಂಕದ ಇತರ ಬ್ಯಾಟರ್‌ಗಳು ಅಸ್ಥಿರ ನಿರ್ವಹಣೆ ತೋರುತ್ತ ಬಂದಿದ್ದಾರೆ.

    ಟೀಮ್ ನ್ಯೂಸ್:
    ಆರ್‌ಸಿಬಿ: ಗುಜರಾತ್ ಎದುರಿನ ಕೊನೇ ಲೀಗ್ ಪಂದ್ಯದಲ್ಲಿ ಹರ್ಷಲ್ ಪಟೇಲ್ ಫೀಲ್ಡಿಂಗ್ ವೇಳೆ ಬೌಲಿಂಗ್ ಕೈಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ 4 ಓವರ್‌ಗಳ ಬೌಲಿಂಗ್ ಕೋಟಾ ಪೂರ್ಣಗೊಳಿಸಿರಲಿಲ್ಲ. ಅವರು ಫಿಟ್ ಆಗದಿದ್ದರೆ ಮೊಹಮದ್ ಸಿರಾಜ್ ಮತ್ತೆ ಕಣಕ್ಕಿಳಿಬಹುದು.
    ಎಲ್‌ಎಸ್‌ಜಿ: ಸಣ್ಣ ಗಾಯದ ಸಮಸ್ಯೆಯಿಂದಾಗಿ ಅಂತಿಮ ಲೀಗ್ ಪಂದ್ಯದಿಂದ ಹೊರಗುಳಿದಿದ್ದ ಕೃನಾಲ್ ಪಾಂಡ್ಯ 11ರ ಬಳಗಕ್ಕೆ ಮರಳುವ ನಿರೀಕ್ಷೆ ಇದ್ದು, ಕೆ. ಗೌತಮ್ ಹೊರಗುಳಿಯಲಿದ್ದಾರೆ. ಇವಿನ್ ಲೆವಿಸ್ ಸ್ಥಾನ ಉಳಿಸಿಕೊಂಡರೆ, ದುಶ್ಮಂತ ಚಮೀರ ಮತ್ತೆ ಹೊರಗುಳಿಯಬೇಕಾಗುತ್ತದೆ.

    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮೊದಲ ಮುಖಾಮುಖಿ: ಆರ್‌ಸಿಬಿಗೆ 18 ರನ್ ಗೆಲುವು.

    ಮಳೆ ಕಾಡಿದರೆ ಆರ್‌ಸಿಬಿಗೆ ಕಷ್ಟ!
    ಪ್ಲೇಆಫ್​ ನಿಯಮಾವಳಿಯ ಅನ್ವಯ, ಮಳೆ ಅಡ್ಡಿಪಡಿಸಿದರೆ ಕನಿಷ್ಠ ಸೂಪರ್ ಓವರ್ ನಡೆಯಲಿದೆ. ಅದೂ ಸಾಧ್ಯವಾಗದಿದ್ದರೆ, ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿರುವ ತಂಡ ಮುನ್ನಡೆಯಲಿದೆ. ಇದರನ್ವಯ, ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ, ಲೀಗ್ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಲಖನೌ ಮೇಲೇರಲಿದ್ದು, ಆರ್‌ಸಿಬಿ ಪ್ಲೇಆ್ನಲ್ಲಿ ಆಡದೆಯೇ ನಿರ್ಗಮಿಸುವ ‘ಬ್ಯಾಡ್‌ಲಕ್’ ಎದುರಿಸಬೇಕಾಗುತ್ತದೆ.

    ಸ್ಪೀಡ್ ಮ್ಯಾಟರ್ಸ್‌!
    ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಪಿಚ್ ವೇಗದ ಬೌಲಿಂಗ್ ಸ್ನೇಹಿಯಾಗಿ ವರ್ತಿಸುವ ನಿರೀಕ್ಷೆ ಇದೆ. ಹೀಗಾಗಿ ಉಭಯ ತಂಡಗಳ ವೇಗಿಗಳ ನಿರ್ವಹಣೆಯೇ ನಿರ್ಣಾಯಕ ಪಾತ್ರ ವಹಿಸಲಿದೆ. ಜೋಶ್ ಹ್ಯಾಸಲ್‌ವುಡ್, ಹರ್ಷಲ್ ಪಟೇಲ್, ಸಿದ್ಧಾರ್ಥ್ ಕೌಲ್/ಮೊಹಮದ್ ಸಿರಾಜ್‌ರಂಥ ವೇಗಿಗಳು ಆರ್‌ಸಿಬಿ ತಂಡದಲ್ಲಿದ್ದರೆ, ಆವೇಶ್ ಖಾನ್, ಮೊಹ್ಸಿನ್ ಖಾನ್, ಜೇಸನ್ ಹೋಲ್ಡರ್, ಮಾರ್ಕಸ್ ಸ್ಟೋಯಿನಿಸ್ ಲಖನೌ ಪಾಳಯದಲ್ಲಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್​ ಪಂತ್​ಗೆ 1.63 ಕೋಟಿ ರೂ. ಟೋಪಿ ಹಾಕಿದ ಹರಿಯಾಣ ಕ್ರಿಕೆಟಿಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts