More

    ಯಥಾವತ್ತಾಗಿ ಇಲಾಖೆಯ ಆದೇಶ ಜಾರಿಗೊಳಿಸಿ; ಜಿಪಂ ಸಿಇಒಗೆ ಗ್ರಾಪಂ ನೌಕರರ ಸಂಘ ಒತ್ತಾಯ

    ಹಾವೇರಿ: ರಾಜ್ಯ ಸರ್ಕಾರವು ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಏಕಕಾಲಕ್ಕೆ ಅನುಮೋದನೆ ನೀಡಲು ಹಾಗೂ ಅನುಕಂಪದ ನೇಮಕಾತಿ ಮಾಡಲು ಒಪ್ಪಿಗೆ ನೀಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಆದೇಶವನ್ನು ವಿಳಂಬ ಮಾಡದೇ ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಒತ್ತಾಯಿಸಿದೆ.
    ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇತ್ತೀಚೆಗೆ ಸಂಘದ ಪದಾಧಿಕಾರಿಗಳು ಜಿಪಂ ಸಿಇಒ ಅಕ್ಷಯ ಶ್ರೀಧರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
    ಸಂಘದ ಅಧ್ಯಕ್ಷ ಎಂ.ಬಿ.ನಾಡಗೌಡ ಮಾತನಾಡಿ, ಸಂಘದ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ನೌಕರರು ನಡೆಸಿದ ಹೋರಾಟಕ್ಕೆ ಸಂದ ಜಯ ಇದಾಗಿದೆ. ಹಲವು ವರ್ಷಗಳಿಂದ ಹೋರಾಟ ನಡೆಸಲಾಗಿದ್ದು, ನ.7ರಂದು ಬೆಳಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಇಲಾಖೆ ಆಯುಕ್ತರು ಏಕಕಾಲಕ್ಕೆ ಎಲ್ಲ ನೌಕರರಿಗೆ ಅನುಮೋದನೆ ಹಾಗೂ ಅನುಕಂಪದ ನೇಮಕಾತಿ ನೀಡುವ ಕುರಿತು ಭರವಸೆ ನೀಡಿದ್ದರು. ಈ ಕುರಿತು ಆದೇಶ ಹೊರಡಿಸಿರುವುದನ್ನು ಸ್ವಾಗತಿಸುತ್ತೇವೆ. ಆ ಪ್ರಕಾರ ಜಿಲ್ಲೆಯ ಎಲ್ಲ ಗ್ರಾಪಂ ಸಿಬ್ಬಂದಿಗೆ ಅವಕಾಶ ನೀಡಬೇಕು ಎಂದರು.
    ಗ್ರಾಮ ಪಂಚಾಯಿತಿ ಕರ ವಸೂಲಾತಿಯಲ್ಲಿ ಶೇ.40ರಷ್ಟು ಹಣವನ್ನು ಸಿಬ್ಬಂದಿ ವೇತನಕ್ಕಾಗಿ ಪಾವತಿ ಮಾಡುವ ಆದೇಶವಿದೆ. ನಮ್ಮ ಜಿಲ್ಲೆಯಲ್ಲಿ ಈ ಆದೇಶವನ್ನು ಯಾವುದೇ ಪಂಚಾಯಿತಿಯಲ್ಲಿ ಪಾಲಿಸುತ್ತಿಲ್ಲ. ಈ ಕುರಿತು ನಿರ್ದೇಶಿಸಬೇಕು. ಜಿಲ್ಲೆಯ ಗ್ರಾಪಂಗಳಲ್ಲಿ ಸಿಬ್ಬಂದಿ ನೇಮಿಸುವಾಗ ತಾತ್ಕಾಲಿಕ ಹಾಗೂ ದಿನಗೂಲಿ ನೌಕರರೆಂದು ಠರಾವಿನಲ್ಲಿ ಬರೆದಿರುತ್ತಾರೆ. ಇಂತಹ ಠರಾವುಗಳನ್ನು ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಅನುಮೋದನೆಗೆ ಬಂದ ಕಡತಗಳನ್ನು ತಿರಸ್ಕರಿಸುತ್ತಿದ್ದಾರೆ. ಇಂತಹ ಠರಾವುಗಳನ್ನು ತಿರಸ್ಕರಿಸದೇ ಅನುಮೋದನೆಗೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.
    ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಗ್ರಾಪಂ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ ಕೋಟಿ, ಜಿಲ್ಲಾ ಖಜಾಂಚಿ ಸುಭಾಸ ಸೊಟ್ಟಪ್ಪನವರ, ಫಕ್ಕಿರೇಶ ಹಕ್ಕಿಮರೆಣ್ಣನವರ, ಪ್ರಕಾಶ ಲಮಾಣಿ, ಬಸವರಾಜ ಯಡಗೋಡಿ, ಬೀರೇಶ ಮಲ್ಲಾಡದ, ದಾಸಪ್ಪ ಮಾದೇನಹಳ್ಳಿ, ನಾಗರಾಜ ಕೋಳೂರ, ನಾಗಪ್ಪ ದೊಡ್ಮನಿ, ಸಂತೋಷ ಯೋಗಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts