More

    ಶಾಲೆಗಳಲ್ಲಿ ವಾರಕ್ಕೆ ಮೂರು ದಿನ ರಾಗಿ ಮಾಲ್ಟ್ ವಿತರಣೆ; ದೇವಗಿರಿಯಲ್ಲಿ ಜಿಪಂ ಸಿಇಒ ಅಕ್ಷಯ ಶ್ರೀಧರ ಚಾಲನೆ

    ಹಾವೇರಿ: ತಾಲೂಕಿನ ದೇವಗಿರಿ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಗುರುವಾರ ಕ್ಷೀರಭಾಗ್ಯ ಯೋಜನೆಯಡಿ ಕೆನೆಭರಿತ ಹಾಲಿನ ಜತೆಗೆ ರಾಗಿ ಮಾಲ್ಟ್ ಮಿಶ್ರಣ ಮಾಡಿ ಮಕ್ಕಳಿಗೆ ವಿತರಿಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಅಕ್ಷಯ ಶ್ರೀಧರ ಚಾಲನೆ ನೀಡಿದರು.
    ನಂತರ ಮಾತನಾಡಿದ ಸಿಇಒ, ಮಕ್ಕಳ ಆರೋಗ್ಯ, ಸದೃಢತೆ, ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯಿಂದ ತೊಡಗಿಸಿಕೊಳ್ಳಲು ಸರ್ಕಾರ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ನೀಡುವ ಯೋಜನೆ ಇಂದಿನಿಂದ ಜಾರಿಗೆ ಬಂದಿದೆ. ಜಿಲ್ಲೆಯಾದ್ಯಂತ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಲಾಗುತ್ತಿದೆ ಎಂದು ಹೇಳಿದರು.
    ಸಿರಿಧಾನ್ಯಗಳ ಪೈಕಿ ರಾಗಿಯಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ, ಕಬ್ಬಿಣ, ಪೈಬರ್, ಮೆಗ್ನಿಷಿಯಂ, ವಿಟಮಿನ ಡಿ, ವಿಟಮಿನ್ ಇ ಹಾಗೂ ಇತರ ಪೋಷಕಾಂಶಗಳು ಇರುವ ಕಾರಣ ಮಕ್ಕಳು ಕಲಿಕೆಯಲ್ಲಿ ಆಸಕ್ತಿಯಿಂದ ತೊಡಗಲು ಉಪಯುಕ್ತವಾಗಿದೆ. ರಕ್ತಹೀನತೆ ಹಾಗೂ ಕ್ಯಾನ್ಸರ್ ಅಪೌಷ್ಟಿಕತೆಗೆ ಪೂರಕವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್ ಶಾಲಾ ವಿದ್ಯಾರ್ಥಿಗಳಿಗೆ ರಾಗಿ ಮಾಲ್ಟ್ ನೀಡುವ ಪ್ರಾಯೋಜಕತ್ವ ವಹಿಸಿಕೊಂಡಿದೆ. ಕೆನೆಭರಿತ ಹಾಲಿನ ಜತೆಗೆ ಪ್ರತಿ ವಿದ್ಯಾರ್ಥಿಗೆ ಐದು ಗ್ರಾಂ. ರಾಗಿ ಮಾಲ್ಟ್ ನೀಡಲಾಗುತ್ತದೆ ಎಂದರು.
    ಪ್ಲಾಸ್ಟಿಕ ಬಳಕೆ ನಿಷೇಧಿಸಲಾಗಿದೆ. ಹಾಗಾಗಿ, ಶಾಲೆಗೆ ಬರುವವರಿಗೆ ಬೊಕ್ಕೆ ಬದಲಿಗೆ ಪುಸ್ತಕ ನೀಡಬೇಕು. ಪ್ಲಾಸ್ಟಿಕ್ ಬಳೆಕಯಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಜನ-ಜಾನುವಾರುಗಳಿಗೆ ಮಾರಕವಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಗ್ರಾಮ ಪಂಚಾಯಿತಿಯಿಂದಲೇ ಪ್ಲಾಸ್ಟಿಕ್ ಬಳಕೆ ನಿಲ್ಲಬೇಕು ಎಂದು ಹೇಳಿದರು.
    ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎನ್.ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಝಡ್.ಎಂ.ಖಾಜಿ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ, ಉಪಾಧ್ಯಕ್ಷೆ ಶಿವಲೀಲಾ ತಿರಕಣ್ಣನವರ, ಶಿಕ್ಷಣ ಸಂಯೋಜಕ ಎಸ್.ಆರ್.ಹಿರೇಮಠ, ಸಿಆರ್‌ಪಿ ಶ್ರೀಕಾಂತ ದೊಡ್ಡಕುರುಬರ, ಎಸ್‌ಡಿಎಂಸಿ ಅಧ್ಯಕ್ಷ ನಾಗಪ್ಪ ಊದಗಟ್ಟಿ, ಸದಸ್ಯರು ಹಾಗೂ ಮುಖ್ಯೋಪಾಧ್ಯಾಯೆ ತನುಜಾ, ಎಸ್.ಎನ್.ಅಣ್ಣಿಗೇರಿ, ಎಫ್.ಎಂ.ಮಲ್ಲೂರ, ಮತ್ತಿತರರು ಉಪಸ್ಥಿತರಿದ್ದರು.
    ಕಡ್ಡಾಯವಾಗಿ ಉಪಾಹಾರ ಸೇವಿಸಿ
    ಯಾರ‌್ಯಾರು ಬೆಳಗಿನ ಉಪಾಹಾರ ಸೇವಿಸದೇ ಶಾಲೆಗೆ ಬಂದಿದ್ದೀರಿ ಎಂದಾಗ ಅರ್ಧದಷ್ಟು ಮಕ್ಕಳು ಉಪಾಹಾರ ಸೇವಿಸದೇ ಬಂದಿರುವುದಾಗಿ ಕೈ ಎತ್ತಿದರು. ಕಲಿಕೆಗೆ ಉಪಹಾರ ಮಹತ್ವವಾದದ್ದು. ಶಾಲೆಯಲ್ಲಿ ನೀಡುವ ಬೆಳಗಿನ ಹಾಲು, ರಾಗಿ ಮಾಲ್ಟ್, ಚಿಕ್ಕಿ, ಮೊಟ್ಟೆ, ಬಾಳೆಹಣ್ಣು, ಮಧ್ಯಾಹ್ನದ ಬಿಸಿಯೂಟ ಸೇವಿಸುವುದರಿಂದ ಬೆಳೆಯುವ ಮಕ್ಕಳ ದೇಹದಲ್ಲಿ ಮಾನಸಿಕ ಮತ್ತು ದೇಹದ ಆರೋಗ್ಯದಲ್ಲಿ ಸದೃಢತೆ ಉಂಟಾಗುತ್ತದೆ. ಹಾಗಾಗಿ, ತಪ್ಪದೇ ಉಪಾಹಾರ ಸೇವಿಸಬೇಕು ಎಂದು ಸಿಇಒ ಅಕ್ಷಯ ಕಿವಿಮಾತು ಹೇಳಿದರು.

    ಈಗಾಗಲೇ ಶಾಲೆಗಳಲ್ಲಿ ಶೇಂಗಾ ಚಿಕ್ಕಿ, ಬಾಳೆಹಣ್ಣು, ಮೊಟ್ಟೆ, ಹಾಲು ಹಾಗೂ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದ್ದು, ಇದರ ಜತೆಗೆ ರಾಗಿ ಮಾಲ್ಟ್ ನೀಡಲಾಗುತ್ತಿದೆ. ಮಕ್ಕಳು ಸೊಪ್ಪು, ಹಣ್ಣು, ತರಕಾರಿ ಸೇರಿದಂತೆ ಪೌಷ್ಟಿಕ ಆಹಾರ ಸೇವಿಸುವ ಮೂಲಕ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು. ಆರೋಗ್ಯ ಉತ್ತಮವಾಗಿದ್ದರೆ ಶಿಕ್ಷಣದಲ್ಲಿ ಸಾಧನೆ ಮಾಡಬಹುದು.
    – ಅಕ್ಷಯ ಶ್ರೀಧರ, ಜಿಪಂ ಸಿಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts