More

    ಹಾಡು ಹಕ್ಕಿಗೆ ಬೇಕಿದೆ ಆರ್ಥಿಕ ನೆರವು; ನೆರವಿನ ನಿರೀಕ್ಷೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕಲಾವಿದೆ ಮಂಜುಳಾ

    ಹಾವೇರಿ: ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸುತ್ತ ಬಿಡುವಿನ ವೇಳೆಯಲ್ಲಿ ನೆಲ, ಜಲ, ನಾಡು, ನುಡಿ, ಪರಿಸರ ಹಾಗೂ ದೇಶಕ್ಕಾಗಿ ಮಡಿದ ಮಹನೀಯರ ಬಗ್ಗೆ ಗೀತೆಗಳನ್ನು ರಚಿಸಿ, ಹಾಡುವ ಮೂಲಕ ಜನ ಮನಸೂರೆಗೊಳಿಸಿದ್ದ ಗಾಯಕಿಯೊಬ್ಬರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ನಲುಗುತ್ತಿದ್ದಾರೆ. ತಾಲೂಕಿನ ನೆಗಳೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ಮಂಜುಳಾ ಕೊಪ್ಪದ ಅವರ ನೋವಿನ ಕಥೆ ಇದು. ಕೂಲಿ ಕೆಲಸ ಮಾಡುತ್ತಿರುವ ಪತಿ ಫಕ್ಕೀರೇಶ ಕೊಪ್ಪದ ಜತೆಗೆ ಕಷ್ಟಪಟ್ಟು ದುಡಿದು ಜೀವನ ಬಂಡಿ ಸಾಗಿಸುತ್ತಿದ್ದರು. ಬಿಡುವಿನ ವೇಳೆಯಲ್ಲಿ ತಮಗಿಷ್ಟವಾದ ಸಂಗೀತ ಸೇವೆಯಲ್ಲಿ ನಿರತರಾಗಿದ್ದರು. ಹೊಳಲು ಗ್ರಾಮದ ಸುರಭಿ ಮೆಲೋಡಿಸ್ ಸೇರಿದಂತೆ ನಾಡಿನ ಹಲವಾರು ತಂಡಗಳಲ್ಲಿ ಜಾತ್ರೆ ಮದುವೆ, ಶುಭ ಸಮಾರಂಭಗಳಲ್ಲಿ ತನ್ನ ಸುಶ್ರಾವ್ಯ ಕಂಠದಿಂದ ಹಾಡುವ ಮೂಲಕ ಎಲ್ಲರನ್ನು ರಂಜಿಸುತ್ತಿದ್ದ ಮಂಜುಳಾ ಅವರ ಗೀತೆಗಳನ್ನು ಯೂಟ್ಯೂಬ್ ಚಾನೆಲ್‌ನಲ್ಲಿ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಈ ಮೂಲಕ ಹಲವಾರು ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಹೀಗೆ ಕೋಗಿಲೆಯಂತೆ ಸ್ವಚ್ಛಂದವಾಗಿದ್ದ ಮಂಜುಳಾ ಅವರಿಗೆ ಎರಡು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ಬರಸಿಡಿಲಿನಂತೆ ಬಂದೆರಗಿತು. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿಕೊಂಡಿರುವ ಮಂಜುಳಾ ಇನ್ನೂ ಗುಣಮುಖರಾಗಿಲ್ಲ. ಇತ್ತೀಚೆಗೆ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಆಪರೇಶನ್ ಮಾಡಿಸಿಕೊಂಡಿರುವ ಮಂಜುಳಾ ಇನ್ನೂ ಚಿಕಿತ್ಸೆ ಪಡೆಯಬೇಕಿದೆ. ಆದರೆ, ಆರ್ಥಿಕ ಸಂಕಷ್ಟದಲ್ಲಿರುವ ಈ ಬಡ ಕುಟುಂಬವೀಗ ಆರ್ಥಿಕ ಸಹಾಯ ನಿರೀಕ್ಷಿಸುತ್ತಿದೆ. ನೊಂದ ಜೀವಕ್ಕೆ ಸಹಾಯ ಮಾಡುವವರು ಮಂಜುಳಾ ಪಕ್ಕೀರೇಶ ಕೊಪ್ಪದ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ನೆಗಳೂರ ಶಾಖೆ, ಖಾತೆ ಸಂಖ್ಯೆ- 89030381487, ಐಎಫ್‌ಎಸ್‌ಸಿ ಕೆವಿಜಿಬಿ 0007208 ಖಾತೆಗೆ ಹಣ ಸಂದಾಯ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮಂಜುಳಾ ಅವರ ಸಂಪರ್ಕ ಸಂಖ್ಯೆ 97412 69639 ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts