More

    ಶಿಗ್ಗಾಂವಿ ರೇಸ್‌ನಿಂದ ಹಿಂದೆ ಸರಿದ ವಿನಯ ಕುಲಕರ್ಣಿ ?

    ಕೇಶವಮೂರ್ತಿ ವಿ.ಬಿ. ಹಾವೇರಿ
    ರಾಜ್ಯದ ಗಮನ ಸೆಳೆಯುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾಂವಿಯ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಗುರುವಾರ ಬಿಡುಗಡೆಗೊಂಡ ಎರಡನೇ ಪಟ್ಟಿಯಲ್ಲೂ ಇಲ್ಲ. ಮುಂಚೂಣಿಯಲ್ಲಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಧಾರವಾಡ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಎಂದು ಹೈಕಮಾಂಡ್ ಘೋಷಿಸಿದೆ. ಹಾಗಾಗಿ, ಶಿಗ್ಗಾಂವಿ ರೇಸ್‌ನಿಂದ ವಿನಯ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.
    ಪಂಚಮಸಾಲಿ ಹಾಗೂ ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರದಲ್ಲಿ ಪಂಚಮಸಾಲಿ ಮುಖಂಡ ವಿನಯ ಕುಲಕರ್ಣಿ ಅಥವಾ ಸಲೀಂ ಅಹ್ಮದ್‌ಗೆ ಟಿಕೆಟ್ ಕೊಟ್ಟರೆ ಬೆಂಬಲಿಸುವೆ ಎಂದು ಸ್ವತಃ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ಹೇಳಿಕೊಂಡಿದ್ದರು. ಇದಾದ ಬೆನ್ನಲ್ಲೇ, ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಖಾದ್ರಿ ಅವರನ್ನು ಭೇಟಿಯಾಗಿದ್ದ ವಿನಯ ಮೂರು ತಾಸು ಚರ್ಚೆ ನಡೆಸಿದ್ದರು. ಹಾಗಾಗಿ, ವಿನಯ ಶಿಗ್ಗಾಂವಿಯಿಂದ ಸ್ಪರ್ಧಿಸುತ್ತಾರೆ ಎಂದೇ ಹೇಳಲಾಗಿತ್ತು.
    ಆದರೆ, ಶಿಗ್ಗಾಂವಿಯಿಂದ ಸ್ಪರ್ಧಿಸುವ ಬಗ್ಗೆ ವಿನಯಗಾಗಲಿ ಅವರ ಕುಟುಂಬದವರಿಗಾಗಲೀ ಸುತಾರಾಂ ಇಷ್ಟ ಇರಲಿಲ್ಲ. ಹೈಕಮಾಂಡ್ ಒತ್ತಡಕ್ಕೆ ಮಣಿದು ಸ್ಪರ್ಧಿಸಬಹುದು ಎನ್ನಲಾಗಿತ್ತು. ಆದರೆ, ಇದೀಗ ವಿನಯ ನೆಚ್ಚಿನ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಹುರಿಯಾಳಾಗಿ ಕಣಕ್ಕೆ ಇಳಿದಿದ್ದಾರೆ. ಹಾಗಾಗಿ, ಶಿಗ್ಗಾಂವಿ ಕಣದಿಂದ ವಿನಯ ಹಿಂದಕ್ಕೆ ಸರಿದಿದ್ದಾರೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
    ಖಾದ್ರಿ, ವಿನಯ ಬಿಟ್ಟರೆ ಮತ್ತಿನ್ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪಂಚಮಸಾಲಿ ಸಮುದಾಯದ ಶಶಿಧರ ಯಲಿಗಾರ, ರಾಜೇಶ್ವರಿ ಪಾಟೀಲ, ಸೋಮಣ್ಣ ಬೇವಿನಮರದ ರೇಸ್‌ನಲ್ಲಿದ್ದಾರೆ. ಧಾರವಾಡ ಜಿಲ್ಲೆ ಹಾಗೂ ಹಾವೇರಿ ಜಿಲ್ಲೆಯಿಂದ ಮುಸ್ಲಿಂ ಸಮುದಾಯಕ್ಕೆ ಒಂದಾದರೂ ಟಿಕೆಟ್ ಕೊಡಬೇಕು ಎಂದು ಕಾಂಗ್ರೆಸ್ ಲೆಕ್ಕಾಚಾರವಿದೆ. ಧಾರವಾಡ ಜಿಲ್ಲೆಯಲ್ಲಿ ತಪ್ಪಿದರೆ ಶಿಗ್ಗಾಂವಿಯಲ್ಲಿ ಮತ್ತೆ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿ ಇಳಿಸುವ ಸಾಧ್ಯತೆಯೂ ಇದೆ. ಸಿಎಂ ಕ್ಷೇತ್ರ ಆದ್ದರಿಂದ ಕಾಂಗ್ರೆಸ್ ಮುಖಂಡರು ಅಳೆದು ತೂಗಿ ಅಭ್ಯರ್ಥಿ ಆಯ್ಕೆಗೆ ಮುಂದಾಗಿದ್ದಾರೆ. ಇದರಿಂದಾಗಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಶಿಗ್ಗಾಂವಿ ಕ್ಷೇತ್ರ ಮಾತ್ರ ಬಾಕಿ ಉಳಿದಂತಾಗಿದೆ.

    ಕಾರ್ಯಕರ್ತರಲ್ಲಿ ಗೊಂದಲ
    ಶಿಗ್ಗಾಂವಿಯಲ್ಲಿ ಬಿಜೆಪಿಯಿಂದ ಸಿಎಂ ಬೊಮ್ಮಾಯಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ಟಿಕೆಟ್ ಹಂಚಿಕೆಯೇ ಗೊಂದಲದ ಗೂಡಾಗಿದೆ. ಯಾವ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಸಿಎಂ ವಿರುದ್ಧ ಗೆಲ್ಲುವ ಕುದುರೆ ಯಾರು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಟಿಕೆಟ್ ಘೋಷಣೆ ವಿಳಂಬ ಮಾಡುತ್ತಿದೆ. ಇದರಿಂದ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಯಾರ ಪರ, ಎಲ್ಲಿ, ಹೇಗೆ ಪ್ರಚಾರ ಮಾಡಬೇಕು ಎಂದು ದಿಕ್ಕು ತೋಚದಂತಾಗಿದ್ದಾರೆ ಎನ್ನಲಾಗಿದೆ.
    ಆಕಾಂಕ್ಷಿಗಳ ಅಲೆದಾಟ
    ಟಿಕೆಟ್ ಹಂಚಿಕೆ ವಿಳಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲ ಆಕಾಂಕ್ಷಿಗಳು ದೆಹಲಿ, ಬೆಂಗಳೂರು, ಹುಬ್ಬಳ್ಳಿ ಕಡೆ ಅಲೆದಾಡುತ್ತಿದ್ದಾರೆ. ಪಕ್ಷದ ವರಿಷ್ಠರಲ್ಲಿ ಕೊನೆಯ ಹಂತದ ಒತ್ತಡಕ್ಕೆ ಮುಂದಾಗಿದ್ದಾರೆ. ಟಿಕೆಟ್ ಯಾರಿಗೆ ಘೋಷಣೆಯಾಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳಲು ಕಾಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts