More

    ಹಾವೇರಿವರೆಗೂ ಬಸ್ ಪಾಸ್ ವಿಸ್ತರಿಸಿ; ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಎಸ್‌ಎಫ್‌ಐ, ವಿದ್ಯಾರ್ಥಿಗಳಿಂದ ಪ್ರತಿಭಟನೆ

    ಹಾವೇರಿ: ತಾಲೂಕಿನ ಗಾಂಧಿಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳ ಬಸ್ ಪಾಸ್‌ಅನ್ನು ಹಾವೇರಿ ನಗರದವರೆಗೂ ವಿಸ್ತರಿಸುವಂತೆ ಒತ್ತಾಯಿಸಿ ಹಾಗೂ ಗ್ರಾಮೀಣ ಭಾಗದ ಬಸ್ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಗಾಂಧಿಪುರ ಕಾಲೇಜು ಎದುರು ರಸ್ತೆ ಸಂಚಾರ ತಡೆದು ಪ್ರತಿಭಟಿಸಲಾಯಿತು.
    ಜಿಲ್ಲಾ ಕೇಂದ್ರದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ಅಭ್ಯಾಸಕ್ಕಾಗಿ ಗ್ರಾಮೀಣ ಭಾಗದ 2,890 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. 2021-22ನೇ ಸಾಲಿನವರೆಗೂ ವಿದ್ಯಾರ್ಥಿಯು ತನ್ನ ಹಳ್ಳಿಯಿಂದ ಹಾವೇರಿವರೆಗೆ ಮಾರ್ಗ ಬದಲಾವಣೆ ಕಾಲೇಜಿನ ಹೆಸರು ಹಾಕಿ ಬಸ್ ಪಾಸ್ ಪಡೆಯುವ ಅವಕಾಶವಿತ್ತು. ಆದರೆ, 2023-24ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಈ ವರ್ಷದಿಂದ ಸರ್ಕಾರಿ ಸಾರಿಗೆ ಇಲಾಖೆ ವಿದ್ಯಾರ್ಥಿ ವಿರೋಧಿ ನಿಯಮ ಜಾರಿ ಮಾಡಿ ಕೇವಲ ವಿದ್ಯಾರ್ಥಿಯ ಹಳ್ಳಿಯಿಂದ ಕಾಲೇಜಿನವರೆಗೆ ಮಾತ್ರ ಬಸ್ ಪಾಸ್ ವಿತರಿಸಿದೆ.
    ಇದರಿಂದಾಗಿ ನಗರಕ್ಕೆ ಹೋಗಲು ವಿದ್ಯಾರ್ಥಿಗಳು ತಲಾ 13 ರೂ. ಕೊಟ್ಟು ಟಿಕೆಟ್ ತೆಗೆದುಕೊಂಡೇ ಹೋಗಬೇಕಾಗಿದೆ. ವಿದ್ಯಾರ್ಥಿಗಳಿಗೆ ಹಾವೇರಿ ನಗರದ ಕಂಪ್ಯೂಟರ್ ಸೆಂಟರ್‌ಗಳು, ಹಾಸ್ಟೆಲ್, ಸ್ಕಾಲರ್‌ಶಿಪ್, ಪುಸ್ತಕ ಖರೀದಿ, ಟ್ಯೂಶನ್ ಕ್ಲಾಸ್, ಸೇರಿದಂತೆ ಮತ್ತಿತರ ಕೆಲಸಗಳಿಗೆ ಹೋಗುವ ಅನಿವಾರ್ಯತೆ ಇರುತ್ತದೆ. ಆದ್ದರಿಂದ ಈ ಅವೈಜ್ಞಾನಿಕ ನೀತಿ ಹಿಂಪಡೆದು ವಾರಪೂರ್ತಿ ಹಾವೇರಿವರೆಗೂ ಬಸ್ ಪಾಸ್ ವಿಸ್ತರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
    ಹಳ್ಳಿಗಳಿಗೆ ಸಮರ್ಪಕವಾದ ಬಸ್ ವ್ಯವಸ್ಥೆ ಮಾಡಬೇಕು. ಕಾಲೇಜು ವಿದ್ಯಾರ್ಥಿಗಳು ಕಂಡರೆ ಬಸ್ ನಿಲ್ಲಿಸದೇ ಮುಂದೆ ಸಾಗುವ ಚಾಲಕರು, ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕೆಎಸ್‌ಆರ್‌ಟಿಸಿ ಡಿಪೋಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಮನವಿ ಪತ್ರ ಸ್ವೀಕರಿಸಿದ ಘಟಕ ವ್ಯವಸ್ಥಾಪಕ ಕೆಂಪಣ್ಣ ಹಂಬಣಿಗೆ ಮಾತನಾಡಿ, ವಿದ್ಯಾರ್ಥಿಗಳ ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯುತ್ತೇವೆ ಎಂದರು.
    ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ, ವಿವೇಕ ಫನಾಸೆ, ಅಭಿಷೇಕ ಹಿರೇಮಠ, ದಿಳ್ಳೆಪ್ಪ ಗಾಳೆಮ್ಮನವರ, ಪರಶುರಾಮ, ಹನುಮಂತ ಎಚ್., ಕುಶಾಲ ಲಮಾಣಿ, ಪ್ರೇಮಾ ಅಳ್ಳಳ್ಳಿ, ರೇಣುಕಾ ಬಿ.ಕೆ., ಐಶ್ವರ್ಯ ಎಂ.ಜಿ., ಶ್ವೇತಾ ಆರ್.ಎನ್., ಸೇರಿದಂತೆ, ನೂರಾರು ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts