More

    ಓದಿನಿಂದ ಜೀವನ ರೂಪಿಸಲು ಸಾಧ್ಯ; ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸಲಹೆ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

    ಹಾವೇರಿ: ವಿದ್ಯಾರ್ಥಿಗಳು ಜೀವನದಲ್ಲಿ ಓದುವ ಹವ್ಯಾಸದ ಮೂಲಕ ತಮ್ಮ ಉನ್ನತ ಮಟ್ಟದ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ. ಫಲಿತಾಂಶದ ಕಡೆಗೆ ಮಾತ್ರ ಗಮನ ಹರಿಸದೇ ಏಕಾಗ್ರತೆಯಿಂದ ಓದುವ ಕಡೆಗೆ ಹೆಚ್ಚು ಹಮನ ಹರಿಸಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಸಲಹೆ ನೀಡಿದರು.
    ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹಾವೇರಿ ಜಿಲ್ಲಾ ಶಾಖೆಯ ವತಿಯಿಂದ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣಗೊಂಡ ಜಿಲ್ಲೆಯ ಸರ್ಕಾರಿ ನೌಕರರ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಕೇವಲ ಅಂಕ ಗಳಿಕೆಗಾಗಿ, ಫಲಿತಾಂಶಕ್ಕಾಗಿ ಓದಬಾರದು. ಜ್ಞಾನ ವೃದ್ಧಿಗಾಗಿ ಅಭ್ಯಾಸ ಮಾಡಬೇಕು. ಆಗ ಮಾತ್ರ ವಿಚಲಿತರಾಗದೇ ಓದು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆಗ ಯಶಸ್ಸು ನಿಮ್ಮದಾಗುತ್ತದೆ. ಇಂದು ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆಗಳನ್ನು ನೋಡುತ್ತಿದ್ದೇವೆ. ಹಿಂದಿನ ದಿನಗಳಲ್ಲಿ ಶೇ.35 ಅಂಕ ಪಡೆದರೆ ಸಾಕು ಮನೆಗೆ ಬಂದು ಸರ್ಕಾರಿ ನೌಕರಿ ಕೊಡುತ್ತಿದ್ದರು. ಈಗ ಶೇ.90ರಷ್ಟು ಅಂಕ ಪಡೆದರೂ ಇನ್ನೂ 10 ಪೆರ್ಸೆಂಟ್ ಎಲ್ಲಿ ಎಂಬ ಚರ್ಚೆಗಳು ನಡೆಯುತ್ತಿವೆ ಎಂದರು.
    ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಭೆ ಎಲ್ಲರಲ್ಲೂ ಇರುತ್ತದೆ. ಆದರೆ, ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ. ಸಾಮಾಜಿಕ ಜವಾಬ್ದಾರಿಯ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋದರೆ ಮಾತ್ರ ಯಶಸ್ಸು ನಿಶ್ಚಿತ ಎಂದರು.
    ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, ಜೀವನಕ್ಕೆ ಶಿಕ್ಷಣ ಮುಖ್ಯ, ಜೀವನದಲ್ಲಿ ಗಳಿಸಿದ ಆಸ್ತಿ ಸಂಪತ್ತು ಬೇರೆಯವರ ಪಾಲಾಗಬಹುದು. ಆದರೆ, ಕಲಿತ ಶಿಕ್ಷಣ ಮಾತ್ರ ಬೇರೆಯವರ ಪಾಲಾಗುವುದಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದರು.
    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಮಾತನಾಡಿದರು.
    ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಮೃತಗೌಡ ಪಾಟೀಲ, ಜಿಲ್ಲಾ ಕಾರ್ಯದರ್ಶಿ ಎಂ.ಎಂ.ಎಣ್ಣಿ, ಚಂದ್ರಪ್ಪ ಬ್ಯಾಡಗಿ, ಎಸ್.ಜಿ.ಸುಣಗಾರ, ಎಸ್.ಪಿ.ಗೌಡರ, ಎಂ.ಡಿ.ದ್ಯಾಮಣ್ಣನವರ, ಸಿ.ಎನ್.ಲಕ್ಕನಗೌಡ್ರ, ಮಹದೇವಪ್ಪ ಕರಿಯಣ್ಣನವರ, ಅರುಣ ಹುಡೇದಗೌಡ್ರ, ಕೆ.ಎಫ್.ಚಿಕ್ಕೇರಿ, ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts