More

    ನೀರು ಕೊಡೋಕೂ ಆಗಲ್ಲ, ನಾಚಿಕೆ ಆಗಬೇಕು !; ಹಾವೇರಿ ನಗರಸಭೆ, ಇತರ ಅಧಿಕಾರಿಗಳಿಗೆ ಛೀಮಾರಿ; ಅಧಿಕಾರಿಗಳ ಬೆವರಿಳಿಸಿದ ಸಚಿವ ಶಿವಾನಂದ ಪಾಟೀಲ

    ಹಾವೇರಿ: ಕಳೆದ ಕೆಡಿಪಿ ಸಭೆಯಲ್ಲಿ ಸೂಚನೆ ನೀಡಿದ್ದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಸರ್ಕಾರದಿಂದ ಕೋಟ್ಯಂತರ ರೂ. ಬಿಡುಗಡೆಗೊಳಿಸಿದ್ದರೂ ನೀರು ಪೂರೈಕೆ, ಕೆರೆ ತುಂಬಿಸುವ ಕಾಮಗಾರಿಗಳು ಸಮರ್ಪಕ ನಿರ್ವಹಣೆ, ಬೆಳವಣಿಗೆ ಕಂಡಿಲ್ಲ. ನಿಮಗೆ ನಾಚಿಕೆಯಾಗಬೇಕು ಎಂದು ಹಾವೇರಿ ನಗರಸಭೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಸೇರಿದಂತೆ ಇತರ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಛೀಮಾರಿ ಹಾಕಿದರು.
    ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವರವಾದ ಮಾಹಿತಿ ಪಡೆದು ತಪ್ಪಿತಸ್ಥ ಅಧಿಕಾರಿಗಳ ಬೆವರಿಳಿಸಿದರು.
    ನೀರಿನ ಕೊರತೆ ಇರುವ ಕಾರಣ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡಿಸಲಾಯಿತು. ಈ ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲು ನಿಮಗೆ ಆಗುವುದಿಲ್ಲ. ಪಂಪ್‌ಸೆಟ್‌ಗೆ ಬಳಸದಂತೆ ಸೂಚಿಸದರೂ ಪಾಲಿಸುತ್ತಿಲ್ಲ. ಎಲ್ಲವನ್ನೂ ನಾನೇ ಹೇಳಬೇಕೇ ? ಡಿಸಿ, ಎಸ್‌ಪಿ, ಜಿಪಂ ಸಿಇಒ, ಡಿಯುಡಿಸಿ ಅವರು ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆದೇಶಿಸಿದರು.
    ಹಾವೇರಿಯ ಹೆಗ್ಗೇರಿ ಕೆರೆಯಿಂದ ನೀರು ಸರಬರಾಜು ಮಾಡಲು ಈವರೆಗೆ ಚಾಲನೆ ನೀಡಿಲ್ಲ. ಕಳೆದ ಸಭೆಯಲ್ಲಿ ಸೂಚಿಸಿದಂತೆ ಹಾವೇರಿ ನಗರಕ್ಕೆ ಐದು ದಿನಕ್ಕೊಮ್ಮೆ ನೀರು ಬಿಡುವುದು ಏನಾಯ್ತು ಎಂದು ಸಚಿವರು ಪ್ರಶ್ನಿಸಿದರು. ವಾರಕ್ಕೊಮ್ಮೆ ನೀರು ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನದಿಯಲ್ಲಿ ನೀರು ಇಲ್ಲದ ಕಾರಣ ಸಮಸ್ಯೆ ಉಂಟಾಗಿತ್ತು. ಈಗ ನೀರು ಪೂರೈಸಲಾಗುತ್ತಿದೆ. ಎರಡು ಬಾರಿ ಪೈಪ್ ಒಡೆದ ಕಾರಣ ವಿಳಂಭವಾಗಿತ್ತು ಎಂದು ನಗರಸಭೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.
    ಹೆಗ್ಗೇರಿ ಕೆರೆಯಲ್ಲಿ ಅಳವಡಿಸಿರುವ ಪಂಪ್‌ಸೆಟ್ ದುರಸ್ತಿಗೆ ಒಳಗಾಗಿದ್ದು, ಹೊಸ ಪಂಪ್‌ಸೆಟ್ ಖರೀದಿಸಲಾಗುತ್ತಿದೆ. ಹತ್ತು ದಿನದಲ್ಲಿ ಹೆಗ್ಗೇರಿ ಕೆರೆಯಿಂದ ಅಕ್ಕಮಹಾದೇವಿ ಹೊಂಡ, ಮುಲ್ಲಾನ ಕೆರೆ, ದುಂಡಿಬಸವೇಶ್ವರ ಕೆರೆಗೆ ನೀರು ಹರಿಸಲಾಗುವುದು. ಇದರಿಂದ ಅಕ್ಕಪಕ್ಕದ ಬೋರ್‌ವೆಲ್ ರಿಚಾರ್ಜ್ ಆಗಲಿದೆ. ನಾಳೆಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು ಎಂದು ಡಿಸಿ ವಿವರಿಸಿದರು. ಹತ್ತು ದಿನದ ವರೆಗೆ ಕಾಯಬೇಡಿ ಗ್ರಾಮೀಣ ಕುಡಿಯುವ ನೀರು ಇಲಾಖೆ ಇಂಜಿನಿಯರ್ ಈ ಕೂಡಲೇ 50 ಅಥವಾ 100 ಎಚ್‌ಪಿ ಪಂಪ್ ತರಿಸಿಕೊಡಿ. ಎರಡು ದಿನದಲ್ಲಿ ಕೆರೆಗೆ ನೀರು ಹಾಯಿಸಲು ಆರಂಭಿಸಿ ಎಂದು ಸೂಚಿಸಿದರು.
    ಹೆಗ್ಗೇರಿ ಕೆರೆಯಲ್ಲಿ ಈ ಹಿಂದೆ ಅಳವಡಿಸಿದ್ದ ಪಂಪ್‌ಸೆಟ್, ಪೈಪ್ ಮತ್ತಿತರ ಸಾಮಗ್ರಿ ಹೇಗೆ ಹಾಳಾಯಿತು. ಹತ್ತಾರು ಕೋಟಿ ರೂ. ಯೋಜನೆ ಹಳ್ಳ ಹಿಡಿದಿದೆ. ಇದನ್ನೆಲ್ಲ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ನೋಡುವುದಿಲ್ಲವೇ. ಈ ಕುರಿತು ಯಾಕೆ ವರದಿ, ನೋಟಿಸ್ ಕೊಟ್ಟಿಲ್ಲ ಎಂದು ಡಿಯುಡಿಸಿ ಎಇಇ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು.
    ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಇತರರಿದ್ದರು.
    ನೀವ್ಯಾಕೆ ಅವರನ್ನು ಬೆಂಬಲಿಸುತ್ತೀರಿ ?
    ‘ಹೆಗ್ಗೇರಿ ಕೆರೆಗೆ ನೀರು ಯಾಕೆ ತುಂಬಿಸಿಲ್ಲ. ನೀರು ತುಂಬಿಸಲು ಎಷ್ಟು ಹಣ ಖರ್ಚು ಮಾಡಿದ್ದೀರಿ’ ಎಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಬಸವರಾಜ ಅವರನ್ನು ಸಚಿವ ಪಾಟೀಲರು ಪ್ರಶ್ನಿಸಿದರು. ಈ ವೇಳೆ ಮಧ್ಯ ಪ್ರವೇಶಿಸಲು ಮುಂದಾದ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಸಚಿವರು ತಡೆದರು. ನೀವ್ಯಾಕೆ ಅವರನ್ನು ಬೆಂಬಲಿಸುತ್ತೀರಿ. ಅವರು ಎಲ್ಲ ಸಮರ್ಥನೆ ಮಾಡಿಕೊಂಡು ಗೊಂದಲ ಸೃಷ್ಟಿಸುತ್ತಾರೆ. ನೀವು ಹೀಗೆ ಮಾಡಿದ್ದರಿಂದಲೇ ಅವರು ದಾರಿಗೆ ಬರುತ್ತಿಲ್ಲ ಎಂದು ಗರಂ ಆದ ಪ್ರಸಂಗ ಕಂಡುಬಂತು.
    ಎಷ್ಟು ಕೆರೆ ತುಂಬಿಸಿದ್ದೀರಿ ಲೆಕ್ಕ ಕೊಡಿ
    ಕಳೆದ ಸಭೆ ನಂತರ ಈವರೆಗೆ ಜಿಲ್ಲೆಯಲ್ಲಿ ಯುಟಿಪಿ ಕೆನಲ್‌ನಿಂದ ಎಷ್ಟು ಕೆರೆಗಳನ್ನು ತುಂಬಿಸಿದ್ದೀರಿ ಲೆಕ್ಕ ಕೊಡಿ ಎಂದು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ಬಸವರಾಜ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ತುಂಗಭದ್ರಾ ನದಿಯಲ್ಲಿ ಎಷ್ಟು ನೀರಿದೆ ಗೊತ್ತಿಲ್ಲ. ಬ್ಯಾರೇಜ್ ನಿರ್ಮಿಸಲು ಪ್ರಸ್ತಾವ ಕಳುಹಿಸಿಲ್ಲ. ಜಿಲ್ಲೆ ಬಗ್ಗೆ ಕಳಕಳಿ ಇಲ್ಲ. ಸರಿಯಾಗಿ ನೀರು ಬಿಡಿಸಲು ಯೋಗ್ಯತೆ ಇಲ್ಲ. ಹೆಗ್ಗೇರಿ ಕೆರೆ ತಪಾಸಣೆಗೆ ನಾನೇ ಬರುತ್ತೇನೆ ಎಂದು ಕುಟುಕಿದರು.
    ಅಮಾನತು ಎಚ್ಚರಿಕೆ
    ಹಾವೇರಿ ನಗರದ ಮುಲ್ಲಾನ ಕೆರೆಗೆ ಗಟಾರ ನೀರು ಹರಿಯುತ್ತಿದೆ. ಕೆರೆ ಒಡ್ಡಿನ ಮೇಲೆ ಮನೆ ನಿರ್ಮಿಸಿದ್ದಾರೆ. ನೀನು ನಗರದಲ್ಲಿ ಓಡಾಡುವುದಿಲ್ಲವೇ ? ನಿನ್ನ ಕಣ್ಣಿಗೆ ಏನೂ ಕಾಣುವುದಿಲ್ಲವೇ ? ಎಂದು ನಗರಸಭೆ ಪೌರಾಯುಕ್ತ, ಅಭಿಯಂತರರನ್ನು ಪ್ರಶ್ನಿಸಿದರು. ನಿಮಗೆ ನಾಚಿಕೆ ಆಗಬೇಕು. ನಿಮ್ಮಿಂದ ಏನೂ ಪ್ರಯೋಜನವಿಲ್ಲ. ಡಿಯುಡಿಸಿ ಅವರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು. ಈ ಕುರಿತು ಸಮಗ್ರ ವರದಿ ನೀಡಬೇಕು. ಪೌರಾಯುಕ್ತರ ಮೇಲೆ ವರದಿ ನೀಡಬೇಕು. ಇಲ್ಲದಿದ್ದರೆ ನಿಮ್ಮನ್ನೇ ಅಮಾನತುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    ಹಣ ಹೊಡೆಯುವ ಯೋಜನೆ ಎಂವಿಎಸ್
    ಆಣೂರು, ಹಂಸಬಾವಿ, ತಡಸ ಗ್ರಾಮೀಣ ಕುಡಿಯುವ ನೀರಿನ ಯೋಜನೆ(ಎಂವಿಎಸ್) ಗಳಿಗಾಗಿ ಸರ್ಕಾರ ನೂರಾರು ಕೋಟಿ ರೂ. ಮಂಜೂರು ಮಾಡಿದೆ. ಆದರೆ, ಅಧಿಕಾರಿಗಳು ಹಣ ಹೊಡೆಯಲೆಂದು ಈ ಯೋಜನೆಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇಂಟೇಕ್ ವೆಲ್, ಜಾಕ್‌ವೆಲ್, ಡಬ್ಲೂೃಟಿಪಿ ಮಾಡದೇ ಮೊದಲು ಪೈಪ್‌ಲೈನ್ ಮಾಡಲಾಗಿದೆ. ಅವೈಜ್ಞಾನಿಕ ಕಾಮಗಾರಿ ಜತೆಗೆ ನಿಗಧಿತ ದಿನಾಂಕದಲ್ಲಿ ಪೂರ್ಣಗೊಳಿಸುತ್ತಿಲ್ಲ. ಸಂಬಂಧಪಟ್ಟವರಿಗೆ ನೋಟಿಸ್ ಕೊಡಿ. ಕೆಲಸ ಆಗದೇ ಹಣ ಮೊದಲೇ ಬಿಡುಗಡೆ ಮಾಡಬೇಡಿ ಎಂದು ಸಿಇಒಗೆ ಸೂಚಿಸಿದರು. ಎಷ್ಟು ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೀರಿ ಎಂದು ಲಿಖಿತ ಪತ್ರ ಕೊಡಿ ಎಂದು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಕಾ.ನಿ. ಇಂಜಿನಿಯರ್ ಜಯರಾಮ ನಾಯ್ಕ ಅವರಿಗೆ ಸೂಚಿಸಿದರು. ನಿವೃತ್ತಿ ಆಗುವುದರೊಳಗೆ ಒಳ್ಳೆಯ ಕೆಲಸ ಮಾಡಿ ಎಂದರು.
    ಮೇವಿನ ಕಿಟ್ ವರದಿ ನೀಡಿ
    ಪಶುಪಾಲನಾ ಇಲಾಖೆಯಿಂದ 10 ಸಾವಿರಕ್ಕೂ ಅಧಿಕ ಮೇವಿನ ಕಿಟ್ ವಿತರಿಸಲಾಗಿದ್ದು, ಇವುಗಳ ಬಳಕೆ ಬಗ್ಗೆ ಅನುಮಾನವಿದೆ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು. ಕಿಟ್ ಯಾರ‌್ಯಾರಿಗೆ ಕೊಡಲಾಗಿದೆ. ಯಾರ‌್ಯಾರು ಬೆಳೆದಿದ್ದಾರೆ ಎಂಬ ಕುರಿತು ಸಮಗ್ರ ವರದಿ ನೀಡಿ ಎಂದು ಜಿಲ್ಲಾಧಿಕಾರಿಯವರಿಗೆ ಸಚಿವರು ಸೂಚಿಸಿದರು.
    ಡಿಎಸ್‌ಗೆ ನೋಟಿಸ್
    726 ಗ್ರಾಮಗಳ ಪೈಕಿ 535 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿದೆ. ಈವರೆಗೆ 470 ಕೋಟಿ ರೂ. ಪೇಮೆಂಟ್ ಆಗಿದೆ. ಅನೇಕ ಕಡೆಗಳಲ್ಲಿ ಪೈಪ್‌ಲೈನ್ ಮಾಡಿದ ನಂತರ ರಸ್ತೆ ದುರಸ್ತಿ ಮಾಡಿಲ್ಲ. ಹಾಳಾದ ಪೈಪ್‌ಲೈನ್ ಸರಿಪಡಿಸಿಲ್ಲ. ತಾಪಂ ಇಒಗಳು ಯಾಕೆ ರಿವೀವ್ ಮಾಡಿಲ್ಲ, ಜಿಪಂ ಡಿಎಸ್ ಅವರಿಗೆ ನೋಟಿಸ್ ಕೊಡಿ ಎಂದು ಸಿಇಒ ಅವರಿಗೆ ಸಚಿವರು ಸೂಚಿಸಿದರು.
    50 ಲಕ್ಷ ಬಿಡುಗಡೆ
    ಬರ ನಿರ್ವಹಣೆಗಾಗಿ ಪ್ರತಿ ಶಾಸಕರಿಗೆ ತಲಾ 50 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಶಾಸಕರೊಂದಿಗೆ ಸಮನ್ವಯ ಸಾಧಿಸಿ ಕುಇಯುವ ನೀರು ಪೂರೈಸಿ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts