More

    ಬಹುಭಾಷಾ ಸಂಸ್ಕೃತಿಯಲ್ಲಿ ಅನುವಾದ ಕ್ಷೇತ್ರ ಅತ್ಯಗತ್ಯ; ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ಪ್ರೊ.ಧರಣೇಂದ್ರ ಕುರುಕುರೆ

    ಹಾವೇರಿ: ಒಂದು ಸಾಂಸ್ಕೃತಿಕ ಸಾಹಿತ್ಯವು ಮತ್ತೊಂದು ಸಂಸ್ಕೃತಿಯಲ್ಲಿ ಪ್ರವೇಶ ಮಾಡುವುದೇ ಅನುವಾದ. ಬಹುಭಾಷೆಯ ಜನರು ವಾಸವಾಗಿರುವ ಭಾರತದಂತಹ ದೇಶಕ್ಕೆ ಅನುವಾದ ಕ್ಷೇತ್ರ ಅತ್ಯಗತ್ಯವಾಗಿದೆ ಎಂದು ಪ್ರೊ.ಧರಣೇಂದ್ರ ಕುರುಕುರೆ ಹೇಳಿದರು
    ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಭಾಷಾ ವಿಭಾಗಗಳ ಸಹಯೋಗದಲ್ಲಿ ‘ಅನುವಾದ ಪ್ರವೃತ್ತಿಗಳು ಮತ್ತು ಸವಾಲುಗಳು’ ವಿಷಯದ ಕುರಿತು ಗುರುವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
    ಅನುವಾದದ ಆತ್ಮದಿಂದ ಹುಟ್ಟಿದ ಭಾವನೆಗಳಿಗೆ ಅಭಿವ್ಯಕ್ತಿ ಮಾಧ್ಯಮವಾಗಿ ಅಮೂರ್ತದಿಂದ ಮುಹೂರ್ತದವರೆಗೆ ಸಾಗುವ ಶಕ್ತಿ ಇದೆ. ರೂಪಗಳನ್ನು ದಾಟಿ ರೂಪಾಂತರ ಹೊಂದುವ ಮೂಲಕ ಚೈತನ್ಯಪೂರ್ಣ ಅನಿಕೇತನವಾಗಿ ಬೆಳಕು ಕಾಣುತ್ತದೆ. ಇಂತಹ ವಿಶಿಷ್ಟ ಪೂರ್ಣ ಅನುವಾದ ಕ್ಷೇತ್ರವನ್ನು ಯುವ ಜನಾಂಗ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
    ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ. ಕೊಳ್ಳಿ ಮಾತನಾಡಿ, ಅನುವಾದ ಮೂಲ ಸೃಷ್ಟಿಯ ಮರು ಸೃಷ್ಟಿಯಾಗಿದೆ. ಕನ್ನಡ-ಇಂಗ್ಲಿಷ್-ಹಿಂದಿ ಮೊದಲಾದ ಭಾಷೆಗಳು ಸಾಹಿತ್ಯಿಕವಾಗಿ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಗೊಳ್ಳಲು ಅನುವಾದ ಸಾಹಿತ್ಯ ಸಹಾಯಕವಾಗಬಲ್ಲದು ಎಂದರು.
    ಕಾರ್ಯಾಗಾರದಲ್ಲಿ ಮೂರು ಗೋಷ್ಠಿಗಳು ಯಶಸ್ವಿಯಾಗಿ ಜರುಗಿದವು. ಸಂಪನ್ಮೂಲ ವ್ಯಕ್ತಿಗಳಾದ ಪ್ರೊ.ಧರಣೇಂದ್ರ ಕುರುಕುರೆ ‘ಭಾರತೀಯ ಭಾಷೆಗಳ ಮಧ್ಯೆ ಅನುವಾದದ ಅವಶ್ಯಕತೆ’ ಎಂಬ ವಿಷಯ ಮಂಡಿಸಿದರು. ಎರಡನೆಯ ಗೋಷ್ಠಿಯಲ್ಲಿ ಪ್ರೊ.ಎಸ್.ಜಿ. ವೈದ್ಯ ‘ಇಂಗ್ಲಿಷ್ ಭಾಷೆ ಮತ್ತು ಭಾರತೀಯ ಭಾಷೆಗಳ ಮಧ್ಯೆ ಅನುವಾದದ ಅವಶ್ಯಕತೆ’ ವಿಷಯ ಮಂಡಿಸಿದರು. ಮಹಾರಾಷ್ಟ್ರ ವಾರ್ದಾ ಮೂಲದ ಶ್ರೀನಿಕೇತ ಕುಮಾರ ಮಿಶ್ರಾ ‘ಯಂತ್ರಾನುವಾದ’ ವಿಷಯ ಕುರಿತು ಮಾತನಾಡಿದರು.
    ಕಾರ್ಯಾಗಾರದಲ್ಲಿ ಕರ್ನಾಟಕ ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ 285 ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
    ವೈಷ್ಣವಿ ಸಿಂಗಾಪುರ ಪ್ರಾರ್ಥಿಸಿದರು. ಪ್ರಾಚಾರ್ಯೆ ಡಾ.ಸಂಧ್ಯಾ ಆರ್. ಕುಲಕರ್ಣಿ ಸ್ವಾಗತಿಸಿದರು. ಸಂಯೋಜಕಿ ಎಂ.ಪಿ. ಕಣವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ನಯನಾ ಎಸ್. ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಜಗದೀಶ ಹೊಸಮನಿ ವಂದಿಸಿದರು. ಪ್ರತೀಕ್ಷಾ ಮತ್ತು ರೇಣುಕಾ ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts