More

    ಟಿ.ಎ.ನಾರಾಯಣಗೌಡರ ಬಿಡುಗಡೆಗೆ ಆಗ್ರಹಿಸಿ ರಕ್ತದಲ್ಲಿ ಪತ್ರ

    ಹಾವೇರಿ: ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರು ಸೇರಿದಂತೆ ಇತರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕರವೇ ಜಿಲ್ಲಾ ಘಟಕದ ವತಿಯಿಂದ ರಕ್ತದಲ್ಲಿ ಪತ್ರ ಬರೆದು ಚಳವಳಿ ನಡೆಸಲಾಯಿತು.
    ಕರವೇ ಕಾರ್ಯಕರ್ತರು ಶನಿವಾರ ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ರಕ್ತದಲ್ಲಿ ಪತ್ರ ಬರೆದು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಕನ್ನಡ ನಾಮಫಲಕ ಕಡ್ಡಾಯಕ್ಕಾಗಿ ಪ್ರತಿಭಟನೆ ನಡೆಸುವಾಗ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು, ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ ಸೇರಿದಂತೆ 50ಕ್ಕೂ ಅಧಿಕ ಕಾರ್ಯಕರ್ತರನ್ನು ಬಂಧಿಸಿದ್ದನ್ನು ಖಂಡಿಸಿದರು. ತಕ್ಷಣವೇ ಬಿಡುಗಡೆಗೊಳಿಸುವಂತೆ ಪತ್ರದಲ್ಲಿ ಬರೆದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಂಚೆ ಮೂಲಕ ರವಾನಿಸಿದರು.
    ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಬೆಂಗಳೂರಿನ ಅನೇಕ ಮಾಲ್‌ಗಳು, ವಾಣಿಜ್ಯ ಮಳಿಗೆಗಳ ಮಾಲೀಕರು ಕನ್ನಡವನ್ನು ಮರೆತು ಸಂಪೂರ್ಣ ಆಂಗ್ಲಮಯವಾಗಿ ನಾಮಫಲಕ ಬರೆಸಿದ್ದನ್ನು ಖಂಡಿಸಿ ನಾರಾಯಣಗೌಡರ ನೇತೃತ್ವದಲ್ಲಿ ಡಿಸೆಂಬರ್ 27ರಂದು ಹೋರಾಟ ಕೈಗೊಳ್ಳಲಾಗಿತ್ತು. ಕನ್ನಡ ಮರೆತು ಕನ್ನಡಿಗರಿಗೆ ಉದ್ಯೋಗ ಕೊಡದೇ ದಬ್ಬಾಳಿಕೆ ನಡೆಸುತ್ತಿದ್ದವರ ವಿರುದ್ಧ ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ರಾಜ್ಯದ ಅಸ್ಮಿತೆಗಾಗಿ ಬೀದಿಗೆ ಇಳಿಯಲಾಗಿತ್ತು. ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕನ್ನಡಪರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೋರಾಟಗಾರರನ್ನು ಬಂಧಿಸಿ ಇಂದಿಗೆ 10 ದಿನ ಕಳೆದಿದೆ. ಇನ್ನಾದರೂ ಎಲ್ಲರನ್ನೂ ಬಿಡುಗಡೆ ಮಾಡಿ, ಅವರ ಮೇಲಿರುವ ಎಲ್ಲ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
    ನಾಮಫಲಕದಲ್ಲಿ ಶೇ.60ರಷ್ಟು ಅಕ್ಷರಗಳು ಕನ್ನಡ ಇರಬೇಕು ಎಂಬ ನಿಯಮವಿದ್ದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಪರಿಣಾಮ ಪೆಟ್ರೋಲ್ ಬಂಕ್‌ಗಳು, ಶಾಲಾ-ಕಾಲೇಜುಗಳು, ಮತ್ತಿತರ ವ್ಯಾಪಾರಸ್ಥರು ಕನ್ನಡ ಮರೆತು ಆಂಗ್ಲಭಾಷೆಯಲ್ಲೇ ನಾಮಫಲಕ ಅಳವಡಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಕರವೇ ಜಿಲ್ಲಾಧ್ಯಕ್ಷ ಗಿರೀಶ ಬಾರ್ಕಿ, ಮಹಿಳಾ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮೀ ಗುಡಮಿ, ತಾಲೂಕು ಅಧ್ಯಕ್ಷ ಹಾಲೇಶ ಹಾಲಣ್ಣನವರ,ಹಿರೇಕೆರೂರ ತಾಲೂಕು ಅಧ್ಯಕ್ಷ ಮಾರುತಿ ಪೂಜಾರ, ಹಾನಗಲ್ಲ ತಾಲೂಕು ಅಧ್ಯಕ್ಷ ಸಿಕಂದರ್ ಓಲೇಕಾರ, ಶೋಭಾ ಹೊನ್ನಾಳಿ, ನಾಗೇಶ ಪೂಜಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹಸನ್ ಹತ್ತಿಮತ್ತೂರ, ಅಬ್ಬು ಕೋಡಮಗ್ಗಿ, ಸತ್ಯವತಿ ಕಡೇರ, ಯಲ್ಲಪ ಚಿಕ್ಕಣ್ಣವರ, ಈರಣ್ಣ ಅರಳಿ, ಲಕ್ಷ್ಮೀಕಾಂತಪ್ಪ, ಮಂಜು ಕಾಯಕದ, ನಾಗರಾಜ ಹರಿಜನ, ನಾಗರಾಜ ದೇಸಾಯಿ, ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts